ಶಿಕಾರಿಪುರ: ತಾಲ್ಲೂಕಿನಲ್ಲಿ ಮುಂಗಾರು ಪೂರ್ವ ಮಳೆ ನಿರೀಕ್ಷೆಗಿಂತಲೂ ಹೆಚ್ಚಾಗಿದ್ದು ಯಾವುದೆ ಅನಾಹುತ ಆಗದಂತೆ ಈಗಲೆ ಮುನ್ನೆಚ್ಚರಿಕೆ ಕ್ರಮಕ್ಕೆ ಮುಂದಾಗಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಪಟ್ಟಣದಲ್ಲಿ ಗುರುವಾರ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ಮುಂಗಾರು ಆರಂಭಕ್ಕೂ ಮುನ್ನವೆ ತಾಲ್ಲೂಕಿನ ಅಂಜನಾಪುರ, ಅಂಬ್ಲಿಗೊಳ್ಳ ನಾಲೆ ಸ್ವಚ್ಛಗೊಳಿಸುವ ಕೆಲಸಕ್ಕೆ ಆದ್ಯತೆ ನೀಡಬೇಕು, ಶಾಲೆ, ಹಾಸ್ಟೆಲ್ ಆರಂಭಗೊಂಡ ನಂತರ ಸ್ವಚ್ಚತೆ ಕೈಗೊಳ್ಳದೆ ಮಳೆಗಾಲಕ್ಕೂ ಮುನ್ನೆಚ್ಚರಿಕೆ ಸೇರಿ ಈಗಲೆ ಯಾವುದೆ ಸಣ್ಣ ಪುಟ್ಟ ಕೆಲಸ ಪೂರ್ಣಗೊಳಿಸಬೇಕು. ಆರೋಗ್ಯ ಕೇಂದ್ರದಲ್ಲೂ ಮಳೆಗಾಲಕ್ಕೆ ಅಗತ್ಯವಿರುವ ಔಷಧ ಸಂಗ್ರಹ ಸೂಕ್ತ ಮುನ್ನೆಚ್ಚರಿಕೆ ವಹಿಸುವುದಕ್ಕೆ ಆದ್ಯತೆ ನೀಡಬೇಕು, ಪುರಸಭೆ, ಗ್ರಾ.ಪಂ. ಆಡಳಿತಕ್ಕೆ ಈಗಲೇ ಸೂಚನೆ ನೀಡಿ ನೀರು ನಿಲ್ಲುವ ಪ್ರದೇಶ ಇರದಂತೆ ಕ್ರಮ ಕೈಗೊಳ್ಳಬೇಕು ತಿಪ್ಪೆ, ಗುಂಡಿ ಆಗಿದ್ದರೆ ಅದರ ಸ್ವಚ್ಚತೆ ಈಗಲೆ ಮಾಡಿದರೆ ಮುಂದೆ ರೋಗ ಬಾರದಂತೆ ತಡೆಗಟ್ಟಬಹುದು ಎಂದರು.

ಕೃಷಿ ಇಲಾಖೆ ಅಧಿಕಾರಿ ಕಿರಣ್‌ಕುಮಾರ್ ಮಾತನಾಡಿ, ಮುಂಗಾರು ಪೂರ್ವ ಮಳೆಗೆ ಬೇಸಿಗೆ ಭತ್ತ, ಮೆಕ್ಕೆಜೋಳ ಬೆಳೆಗೆ ತೊಂದರೆಯಾಗಿದೆ. ಇದೊಂದು ವಾರವಿಡೀ ಭತ್ತದ ಕೊಯ್ಲು ಮಾಡದಂತೆ ರೈತರಿಗೆ ಸೂಚನೆ ನೀಡಲಾಗಿದೆ. ಮುಂಗಾರು ಹಂಗಾಮಿಗೆ ಕೃಷಿ ಇಲಾಖೆ ವತಿಯಿಂದ ಸಹಾಯಧನ ಯೋಜನೆ ಅಡಿಯಲ್ಲಿ ಮೆಕ್ಕೆಜೋಳ ವಿತರಣೆ ಮಾಡಲು ಆರಂಭಿಸಲಾಗಿದೆ. ಮುಂಗಾರಿಗೆ ಅಗತ್ಯವಿರುವ ಯೂರಿಯಾ ಈ ವಾರದಲ್ಲಿ ಆಗಮಿಸಲಿದ್ದು ತಾಲ್ಲೂಕಿಗೆ ಅಗತ್ಯವಿರುವಷ್ಟು ರೈತರಿಗೆ ಸಿಗಲಿದೆ ಯಾವುದೆ ತೊಂದರೆ ಆಗುವುದಿಲ್ಲ ಎಂದರು.

ಶಾಸಕ ಬಿ.ವೈ.ವಿಜಯೇಂದ್ರ ಮಾತನಾಡಿ, ಮುಂಗಾರು ಸಮಯದಲ್ಲಿ ರೈತರಿಗೆ, ಸಾರ್ವಜನಿಕರಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಯಾವುದೆ ಹಾನಿ ಆದಲ್ಲಿ ಕೂಡಲೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ತಾಲ್ಲೂಕಿನಲ್ಲೆ ವಾಸ್ತವ ಹೂಡಿ ಜನರ ಸಂಕಷ್ಟಕ್ಕೆ ಸ್ಪಂದಿಸಿರಿ. ವಿಠಲನಗರ ಮುರುಗಣ್ಣನ ಕೆರೆ ಬಸವನಂದಿಹಳ್ಳಿ ಕೆರೆ, ಈಸೂರು ಹೆಗ್ಗೆರೆ ಕೆರೆ ಕಾಮಗಾರಿ ಬೇಗನೆ ಪೂರ್ಣಗೊಳಿಸಬೇಕು. ಮರ ಉರುಳಿ, ಧರೆ ಕುಸಿದು ವಿದ್ಯುತ್ ಕಂಬ, ಲೈನ್ ಕುಸಿಯುವ ಕಡೆಯಲ್ಲಿ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಎಂದರು.
ಸಭೆಯಲ್ಲ ತಹಸೀಲ್ದಾರ್ ಮಲ್ಲೇಶಪ್ಪ ಬೀರಪ್ಪ ಪೂಜಾರ್, ಪುರಸಭೆ ಮುಖ್ಯಾಧಿಕಾರಿ ಎ.ಭರತ್, ನೀರಾವರಿ ಇಲಾಖೆ ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆ ಮಧುಸೂಧನ್, ಬಿಸಿಎಂ ಇಲಾಖೆ ಉಮೇಶ್, ತಾಲ್ಲೂಕು ಆರೋಗ್ಯಾಧಿಕಾರಿ ನವೀದ್, ಆಸ್ಪತ್ರೆ ಆಡಳಿತಾಧಿಕಾರಿ ಸುರೇಶ್ ಇತರರಿದ್ದರು.
News By: Raghu Shikari-7411515737