ಶಿವಮೊಗ್ಗ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣವು ಅಂತರರಾಷ್ಟ್ರೀಯ ಮಟ್ಟದ ತಾಂತ್ರಿಕ ಸೌಲಭ್ಯಗಳನ್ನು ಅಳವಡಿಸಿಕೊಳ್ಳುವತ್ತ ಮಹತ್ವದ ಹೆಜ್ಜೆ ಇರಿಸಿದೆ. ವಿಮಾನಗಳ ಸುರಕ್ಷಿತ ಸಂಚಾರ ಹಾಗೂ ರಾತ್ರಿ ವೇಳೆ ಇಳಿಯಲು ಪೂರಕವಾದ ತಾಂತ್ರಿಕ ಕಾಮಗಾರಿಗಳು ಈಗ ವೇಗ ಪಡೆದುಕೊಂಡಿವೆ.
ಮಣ್ಣು ಪರೀಕ್ಷೆ ಯಶಸ್ವಿ
ವಿಮಾನ ನಿಲ್ದಾಣದ ಸೋಗಾನೆ ಆವರಣದಲ್ಲಿ ಅತ್ಯಂತ ನಿರ್ಣಾಯಕವಾಗಿದ್ದ ಮಣ್ಣಿನ ಸ್ಥಿರತೆ ಪರೀಕ್ಷೆ (Soil Stability Test) ವರದಿ ಈಗ ಬಂದಿದ್ದು, ಭೂಮಿಯ ದೃಢತೆ ತಾಂತ್ರಿಕ ಉಪಕರಣಗಳ ಅಳವಡಿಕೆಗೆ ಪೂರಕವಾಗಿದೆ ಎಂದು ದೃಢಪಟ್ಟಿದೆ. ಭಾರೀ ತಾಂತ್ರಿಕ ಉಪಕರಣಗಳನ್ನು ಹೊತ್ತುಕೊಳ್ಳುವ ಸಾಮರ್ಥ್ಯ ಇಲ್ಲಿನ ಭೂಮಿಗೆ ಇದೆ ಎಂದು ತಜ್ಞರು ವರದಿ ನೀಡಿದ್ದಾರೆ.

DVOR ಉಪಕರಣ ಅಳವಡಿಕೆ ಆರಂಭ
ಮಣ್ಣು ಪರೀಕ್ಷೆ ಯಶಸ್ವಿಯಾದ ಬೆನ್ನಲ್ಲೇ, ವಿಮಾನಗಳಿಗೆ ನಿಖರ ದಿಕ್ಕು ತೋರುವ DVOR (Doppler Very High Frequency Omni Range) ಎಂಬ ಅತ್ಯಾಧುನಿಕ ರೇಡಿಯೋ ನ್ಯಾವಿಗೇಷನ್ ಉಪಕರಣ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಈ ಸಾಧನವು ವಿಮಾನ ಚಾಲಕರಿಗೆ (ಪೈಲಟ್) ನಿಖರವಾದ ದಿಕ್ಸೂಚಿಯಾಗಿ ಕಾರ್ಯನಿರ್ವಹಿಸಲಿದೆ.
ಪ್ರಸ್ತುತ ಶಿವಮೊಗ್ಗದಲ್ಲಿ ಹಗಲು ಹೊತ್ತಿನಲ್ಲಿ ಮಾತ್ರ ವಿಮಾನಗಳ ಸಂಚಾರ ಸಾಧ್ಯವಿದೆ. ಮಳೆ ಅಥವಾ ಮಂಜು ಮುಸುಕಿದ ವಾತಾವರಣವಿದ್ದರೆ ದೃಶ್ಯಾವಳಿ (Visibility) ಕಡಿಮೆಯಾಗಿ ವಿಮಾನಗಳು ಬೆಂಗಳೂರಿಗೆ ವಾಪಸ್ ಹೋಗುತ್ತಿದ್ದವು.
ಅನುಕೂಲ: DVOR ತಂತ್ರಜ್ಞಾನ ಅಳವಡಿಕೆಯಾದ ನಂತರ, ಮಳೆ ಅಥವಾ ಮಂಜಿನ ಸಂದರ್ಭದಲ್ಲೂ ವಿಮಾನಗಳು ಸುರಕ್ಷಿತವಾಗಿ ರನ್‌ವೇ ತಲುಪಬಹುದು.

ರಾತ್ರಿ ಸೇವೆ: ಇದು ರಾತ್ರಿ ವೇಳೆ ವಿಮಾನಗಳ ಹಾರಾಟಕ್ಕೆ (Night Landing) ದಾರಿ ಮಾಡಿಕೊಡಲಿದ್ದು, ಮುಂಜಾನೆ ಹಾಗೂ ತಡರಾತ್ರಿಯ ವಿಮಾನಗಳ ಸಂಚಾರಕ್ಕೂ ಅವಕಾಶ ಸಿಗಲಿದೆ.
ಮಲೆನಾಡಿಗೆ ಸೂಕ್ತ ತಂತ್ರಜ್ಞಾನ ಮಲೆನಾಡಿನ ಗುಡ್ಡಗಾಡು ಮತ್ತು ಅರಣ್ಯ ಪ್ರದೇಶಗಳಲ್ಲಿ ಹಳೆಯ ತಂತ್ರಜ್ಞಾನದ ಸಿಗ್ನಲ್‌ಗಳಿಗೆ ಅಡೆತಡೆ ಉಂಟಾಗುವ ಸಾಧ್ಯತೆ ಹೆಚ್ಚು. ಆದರೆ, ಈ ‘ಡಾಪ್ಲರ್’ (Doppler) ಮಾದರಿಯು ಯಾವುದೇ ಅಡೆತಡೆಗಳಿಲ್ಲದೆ ಪೈಲಟ್‌ಗಳಿಗೆ ನಿಖರ ಮಾಹಿತಿ ನೀಡುತ್ತದೆ. ಈ ಹಿನ್ನೆಲೆಯಲ್ಲಿ ಈ ಯೋಜನೆಯು ಶಿವಮೊಗ್ಗಕ್ಕೆ ಅತ್ಯಂತ ಅವಶ್ಯಕವಾಗಿತ್ತು.
ಫೆಬ್ರವರಿಯಲ್ಲಿ ನಡೆದ ಸ್ಥಳ ಪರಿಶೀಲನೆಯ ನಂತರ ಈ ಯೋಜನೆಗೆ ಹೆಚ್ಚಿನ ವೇಗ ನೀಡಲಾಗಿದೆ. ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಂಡು ಶಿವಮೊಗ್ಗವು ಪ್ರಾದೇಶಿಕ ಸಾರಿಗೆಯ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಲಿದೆ.— ಎಸ್.ಜಿ. ನಂಜಯ್ಯನಮಠ, ಅಧ್ಯಕ್ಷರು, ಕೆ.ಎಸ್.ಐ.ಐ.ಡಿ.ಸಿ
News by Raghu Shikari-7411515737
