ವೇತನ ಬಡ್ತಿಗಾಗಿ ಲಂಚಕ್ಕೆ ಬೇಡಿಕೆ: ಲೋಕಾಯುಕ್ತ ‘ಟ್ರಾಪ್’ನಲ್ಲಿ ಸಿಲುಕಿದ ಭದ್ರಾವತಿ ಶಿಕ್ಷಣಾಧಿಕಾರಿ!

ವೇತನ ಬಡ್ತಿಗಾಗಿ ಲಂಚಕ್ಕೆ ಬೇಡಿಕೆ: ಲೋಕಾಯುಕ್ತ  ‘ಟ್ರಾಪ್’ನಲ್ಲಿ ಸಿಲುಕಿದ ಭದ್ರಾವತಿ ಶಿಕ್ಷಣಾಧಿಕಾರಿ!
Facebook
Twitter
LinkedIn
WhatsApp

​ಶಿವಮೊಗ್ಗ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ತಮ್ಮದೇ ಕಚೇರಿಯ ಸಿಬ್ಬಂದಿಯ ವೇತನ ಬಡ್ತಿ ಮಾಡಿಕೊಡಲು ಲಂಚಕ್ಕೆ ಬೇಡಿಕೆಯಿಟ್ಟು, ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಭದ್ರಾವತಿಯಲ್ಲಿ ನಡೆದಿದೆ.

​ಘಟನೆಯ ಹಿನ್ನೆಲೆ:
ಭದ್ರಾವತಿ ಬಿ.ಇ.ಒ ಕಚೇರಿಯಲ್ಲಿ ಅಧೀಕ್ಷಕರಾಗಿರುವ ಲಿಂಗರಾಜು ಅವರು 2011 ರಿಂದ 2023 ರವರೆಗಿನ ತಮ್ಮ ವಾರ್ಷಿಕ ವೇತನ ಬಡ್ತಿ ಮತ್ತು ಬಾಕಿ ಇರುವ ಆರ್ಥಿಕ ಸೌಲಭ್ಯಗಳನ್ನು ಮಂಜೂರು ಮಾಡುವಂತೆ ಕೋರಿದ್ದರು. ಈ ಕೆಲಸಕ್ಕಾಗಿ ಭದ್ರಾವತಿ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಂದ್ರಪ್ಪ ಎ.ಕೆ. ಹಾಗೂ ಮಧ್ಯವರ್ತಿ ಮಂಜುನಾಥ್ ಎಂಬುವವರು 4 ಲಕ್ಷ ರೂಪಾಯಿ ಲಂಚದ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ.

ಲಂಚ ನೀಡಲು ಇಚ್ಛಿಸದ ಲಿಂಗರಾಜು ಅವರು ಶಿವಮೊಗ್ಗ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಈ ದೂರಿನನ್ವಯ ಇಂದು ಸಂಜೆ 7:00 ಗಂಟೆಯ ಸುಮಾರಿಗೆ ಬಿ.ಇ.ಒ ಕಚೇರಿಯಲ್ಲಿ ದೂರುದಾರರಿಂದ 1 ಲಕ್ಷ ರೂಪಾಯಿ ಮುಂಗಡ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

ಲಂಚದ ಹಣದೊಂದಿಗೆ ಸಿಕ್ಕಿಬಿದ್ದ ಬಿ.ಇ.ಒ ನಾಗೇಂದ್ರಪ್ಪ ಮತ್ತು ಮಧ್ಯವರ್ತಿ ಮಂಜುನಾಥ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಲೋಕಾಯುಕ್ತ ಎಸ್‌ಪಿ ಎಂ.ಎಸ್. ಕೌಲಾಪುರೆ ಅವರ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಗುರುರಾಜ್ ಎನ್. ಮೈಲಾರ ಮತ್ತು ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಆರೋಪಿಗಳ ವಿರುದ್ಧ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

News By: Raghu Shikari-7411515737