​ಭಾರತವನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸಿ: ವಿಜಯ ರೇವಣಕರ್

​ಭಾರತವನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸಿ: ವಿಜಯ ರೇವಣಕರ್
Facebook
Twitter
LinkedIn
WhatsApp

ಶಿಕಾರಿಪುರ: ‘ಭಾರತವು ಯುಗ ಯುಗಗಳಿಂದಲೂ ಹಿಂದೂ ರಾಷ್ಟ್ರವಾಗಿಯೇ ಇತ್ತು. ಆದರೆ, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕೇವಲ ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತಂದು ‘ಜಾತ್ಯತೀತ’ ಎಂಬ ಪದ ಸೇರಿಸಲಾಯಿತು. ಈ ಬದಲಾವಣೆಯಿಂದಾಗಿ ಇಂದು ಹಿಂದೂಗಳು ಅನೇಕ ಸಂಕಷ್ಟ ಎದುರಿಸುವಂತಾಗಿದೆ’ ಎಂದು ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯಕಾರ ವಿಜಯ ರೇವಣಕರ್ ಅಸಮಾಧಾನ ವ್ಯಕ್ತಪಡಿಸಿದರು.

​ತಾಲ್ಲೂಕಿನ ಹಿರೇಕಲವತ್ತಿ ಗ್ರಾಮದ ಶ್ರೀ ಮಣ್ಣು ಬಸವೇಶ್ವರ ಸಮುದಾಯ ಭವನದಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ ಆಯೋಜಿಸಿದ್ದ ‘ಹಿಂದೂ ರಾಷ್ಟ್ರ ಜಾಗೃತಿ’ ಸಭೆಯಲ್ಲಿ ಅವರು ಮಾತನಾಡಿದರು.

​‘ವಿಶ್ವದಲ್ಲಿ ಕ್ರೈಸ್ತರಿಗೆ 150 ಹಾಗೂ ಮುಸಲ್ಮಾನರಿಗೆ 50ಕ್ಕೂ ಹೆಚ್ಚು ದೇಶಗಳಿವೆ. ಆದರೆ, 100 ಕೋಟಿ ಜನಸಂಖ್ಯೆ ಇರುವ ಹಿಂದೂಗಳಿಗೆ ಒಂದು ಹಿಂದೂ ರಾಷ್ಟ್ರವೂ ಇಲ್ಲದಿರುವುದು ವಿಷಾದನೀಯ. ರಾಮರಾಜ್ಯ, ವಿಜಯನಗರ ಸಾಮ್ರಾಜ್ಯ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಹಿಂದವಿ ಸ್ವರಾಜ್ಯದ ಆದರ್ಶಗಳು ನಮಗೆ ಪ್ರೇರಣೆಯಾಗಬೇಕು’ ಎಂದರು.

​ಧರ್ಮ ಶಿಕ್ಷಣದ ಅಗತ್ಯ:
‘ದೇಶದಲ್ಲಿ ಲವ್ ಜಿಹಾದ್‌ನಂತಹ ಪ್ರಕರಣಗಳು ಹೆಚ್ಚುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಯುವತಿಯರು ಮತಾಂತರಗೊಂಡಿದ್ದಾರೆ. ಇದಕ್ಕೆಲ್ಲ ಪರಿಹಾರವೆಂದರೆ ಪ್ರತಿಯೊಬ್ಬ ಹಿಂದೂ ಮನೆಯಲ್ಲಿ ಮಕ್ಕಳಿಗೆ ಧರ್ಮ ಶಿಕ್ಷಣ ನೀಡುವುದು. ಸ್ವಸಂರಕ್ಷಣೆ ಹಾಗೂ ರಾಷ್ಟ್ರ ರಕ್ಷಣೆಯ ಜಾಗೃತ ಶಕ್ತಿಯನ್ನು ಬೆಳೆಸಿಕೊಳ್ಳಬೇಕು’ ಎಂದು ಅವರು ಕರೆ ನೀಡಿದರು.

​ಸನಾತನ ಸಂಸ್ಥೆಯ ಕಾವೇರಿ ರಾಯ್ಕರ್ ಮಾತನಾಡಿ, ‘ಸನಾತನ ಸಂಸ್ಕೃತಿಯನ್ನು ಡೆಂಗ್ಯೂ, ಮಲೇರಿಯಾಕ್ಕೆ ಹೋಲಿಸಿ ಅವಮಾನಿಸುವ ಪ್ರವೃತ್ತಿ ನಡೆಯುತ್ತಿದೆ. ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯಿಂದಾಗಿ ನಮ್ಮವರು ಸಂಕೋಚ ಪಡುತ್ತಿದ್ದಾರೆ. ನಾವು ಧರ್ಮಾಚರಣೆಯ ಮೂಲಕವೇ ಇವುಗಳಿಗೆ ಉತ್ತರ ನೀಡಬೇಕು’ ಎಂದರು.

​ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಶಿವಮೊಗ್ಗ ನಗರ ಸಂಯೋಜಕ, ನ್ಯಾಯವಾದಿ ರೇಖೇಶ್ ಮಾನೆ ಮಾತನಾಡಿ, ‘ಮೆಕಾಲೆ ಶಿಕ್ಷಣ ಪದ್ಧತಿಯಿಂದ ರಾಷ್ಟ್ರಪುರುಷರ ಇತಿಹಾಸ ಮರೆಮಾಚುವ ಪಿತೂರಿ ನಡೆಯುತ್ತಿದೆ. ಹಿಂದೂಗಳಿಗೆ ಆಗುವ ಅನ್ಯಾಯಗಳನ್ನು ಸಂವಿಧಾನದ ಚೌಕಟ್ಟಿನಲ್ಲೇ ಕಾನೂನುಬದ್ಧವಾಗಿ ಎದುರಿಸಬೇಕು’ ಎಂದು ತಿಳಿಸಿದರು.

​ಕಾರ್ಯಕ್ರಮದಲ್ಲಿ ಮಣ್ಣು ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಸುದರ್ಶನ್ ನಾಯ್ಡು, ನಾಗರಾಜ್, ಉಪಾಧ್ಯಕ್ಷ ಪರಶುರಾಮ್, ಭಾಸ್ಕರ್ ನಾಯ್ಡು, ಕೃಷ್ಣಮೂರ್ತಿ, ಮಂಡಲ ಪಂಚಾಯತಿ ಮಾಜಿ ಅಧ್ಯಕ್ಷ ಪ್ರಕಾಶ್ ನಾಯ್ಡು ಉಪಸ್ಥಿತರಿದ್ದರು.

News By: Raghu Shikari-7411515737