ಶಿಕಾರಿಪುರ: ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಉಪಜಾತಿಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಮಾದರ ಮಹಾಸಭಾ ತಾಲೂಕು ಸಮಿತಿ ನೇತೃತ್ವದಲ್ಲಿ ಗುರುವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ನಗರದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ನೂರಾರು ಪ್ರತಿಭಟನಾಕಾರರು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿದರು. ವೃತ್ತದಲ್ಲಿ ಕೆಲಕಾಲ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದ ಸಮಾಜದ ಮುಖಂಡರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಪ್ರತಿಭಟನೆಯ ತೀವ್ರತೆ ಹೆಚ್ಚಾದಂತೆ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನಾಕಾರರು ಟೈಯರ್‌ಗೆ ಬೆಂಕಿ ಹಚ್ಚಲು ಮುಂದಾದರು. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು ಬೆಂಕಿ ನಂದಿಸಲು ಯತ್ನಿಸಿದಾಗ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ತೀವ್ರ ವಾಗ್ವಾದ ನಡೆಯಿತು. ಬಳಿಕ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಹಿರಿಯೂರು ಆದಿ ಜಾಂಬವ ಕೋಡಿಹಳ್ಳಿ ಬೃಹನ್ಮಠದ ಶ್ರೀ ಶ್ರೀ ಷಡಾಕ್ಷರಿಮುನಿ ದೇಶಿಕೇಂದ್ರ ಸ್ವಾಮಿಗಳು, “ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ನೀಡಿರುವ ವರದಿಯನ್ನು ಸರ್ಕಾರ ಕೂಡಲೇ ಅನುಷ್ಠಾನಕ್ಕೆ ತರಬೇಕು. ವರದಿಯ ಅನ್ವಯ ಬಾಕಿ ಇರುವ 56,432 ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಶೋಷಿತ ಸಮುದಾಯಗಳಿಗೆ ನ್ಯಾಯ ಒದಗಿಸಬೇಕು,” ಎಂದು ಒತ್ತಾಯಿಸಿದರು.

ಮಹಸಭಾ ತಾಲೂಕು ಅಧ್ಯಕ್ಷ ಬಸವರಾಜ ಮುಗಳಗೇರಿ ಮಾತನಾಡಿ, “ಸಾವಿರಾರು ವರ್ಷಗಳಿಂದ ಸಾಮಾಜಿಕ ದೌರ್ಜನ್ಯಕ್ಕೆ ಒಳಗಾಗಿರುವ ಮಾದಿಗ ಸಮಾಜಕ್ಕೆ ಶೇ 15ರಷ್ಟು ಮೀಸಲಾತಿಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿನ ಪಾಲು ಸಿಗಬೇಕು. ವರ್ಗೀಕರಣದಿಂದ ಮಾತ್ರ ಪ್ರತಿಯೊಂದು ಉಪಜಾತಿಗೂ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಮಾನ ಅವಕಾಶಗಳು ದೊರೆಯಲು ಸಾಧ್ಯ,” ಎಂದರು. ನಂತರ ಪ್ರತಿಭಟನಾಕಾರರು ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಮಾದರ ಮಹಾಸಭಾ ಜಿಲ್ಲಾ ಸಮಿತಿ ಸದಸ್ಯ ಬಸವರಾಜಪ್ಪ ರೋಟೆ, ಪ್ರಧಾನ ಕಾರ್ಯದರ್ಶಿ ಬಸವರಾಜ್ ಮಾರ್ವಳ್ಳಿ, ಕಾನೂನು ಸಲಹೆಗಾರ ನಿಂಗಪ್ಪ ಎನ್., ಯುವ ಮುಖಂಡ ಮಂಜಪ್ಪ ಕಣಿಯ, ದಲಿತ ಸಂಘರ್ಷ ಸಮಿತಿಯ ಜಗದೀಶ್ ಚುರ್ಚಿಗುಂಡಿ, ಹಳದಪ್ಪ ಜೋಗಿಹಳ್ಳಿ, ಲೀಲಾವತಿ ಈಸೂರು ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ನೌಕರರು ಪಾಲ್ಗೊಂಡಿದ್ದರು.
News By: Raghu Shikari-7411515737
