ಶಿಕಾರಿಪುರ: “ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳು ಮೊಬೈಲ್ ಗೀಳಿಗೆ ಅಂಟಿಕೊಳ್ಳುತ್ತಿರುವುದು ಆತಂಕಕಾರಿ. ಪೋಷಕರು ಮಕ್ಕಳ ಕೈಗೆ ಮೊಬೈಲ್ ನೀಡುವ ಬದಲು ಪುಸ್ತಕಗಳನ್ನು ನೀಡಿ ಸಾಹಿತ್ಯಾಭಿರುಚಿ ಬೆಳೆಸಬೇಕು,” ಎಂದು ಸಂಸದ ಬಿ.ವೈ. ರಾಘವೇಂದ್ರ ಅವರು ತಿಳಿಸಿದರು.
ಪಟ್ಟಣದ ಶಿಶು ವಿಹಾರ ರಸ್ತೆಯಲ್ಲಿ ಶನಿವಾರ ನೂತನವಾಗಿ ನಿರ್ಮಿಸಿರುವ ಕನ್ನಡ ಸಾಹಿತ್ಯ ಪರಿಷತ್ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿವಮೊಗ್ಗ ಜಿಲ್ಲೆಯು ರಾಷ್ಟ್ರಕವಿಗಳನ್ನು ನೀಡಿದ ಜ್ಞಾನಪೀಠದ ನಾಡು. ಈ ನೆಲದ ಸಾಹಿತ್ಯಿಕ ಶ್ರೀಮಂತಿಕೆಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
ಈ ಭವನಕ್ಕಾಗಿ ಈಗಾಗಲೇ ₹50 ಲಕ್ಷ ಅನುದಾನ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಸೌಕರ್ಯಗಳಿಗೂ ಅನುದಾನ ಒದಗಿಸಲಾಗುವುದು. ಕೇವಲ ಪರಿಷತ್ ಮಾತ್ರವಲ್ಲದೆ, ವಿವಿಧ ಸಂಘ-ಸಂಸ್ಥೆಗಳು ಈ ಭವನವನ್ನು ಸಾಹಿತ್ಯಿಕ ಚಟುವಟಿಕೆಗಳಿಗೆ ಬಳಸಿಕೊಳ್ಳಬೇಕು,” ಎಂದು ಅವರು ಆಶಿಸಿದರು.

ಶಾಸಕ ಬಿ.ವೈ. ವಿಜಯೇಂದ್ರ ಮಾತನಾಡಿ, “ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ಕಾವ್ಯ ಮತ್ತು ಕಾದಂಬರಿಗಳು ಮರೆಯಾಗುತ್ತಿವೆ. ತಾಳಗುಂದದ ಮೊದಲ ಶಾಸನದ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ, ನಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಳ್ಳುವುದು ಅವಶ್ಯ ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಂಡಾಗ ಮಾತ್ರ ಕನ್ನಡ ಸಾಹಿತ್ಯ ಗಟ್ಟಿಯಾಗಲು ಸಾಧ್ಯ,” ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ್ ಮಾತನಾಡಿ, “ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಪರಿಷತ್ತಿಗೆ ನೀಡುವ ಅನುದಾನವನ್ನು ಹೆಚ್ಚಿಸಿದ್ದರು. ಆದರೆ, ಪ್ರಸ್ತುತ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ₹30 ಕೋಟಿ ನೀಡಲಾಗುತ್ತಿದೆ. ಆದರೆ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಕೇವಲ ₹5 ಲಕ್ಷ ನೀಡುತ್ತಿರುವುದು ಬೇಸರದ ಸಂಗತಿ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್. ರಘು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಎಸ್. ಹುಚ್ರಾಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಜ್ಯ ಕೃಷಿಕ ಸಮಾಜದ ಅಧ್ಯಕ್ಷರಾ ನಗರದ ಮಹಾದೇವಪ್ಪ, ಪುರಸಭಾ ಮಾಜಿ ಅಧ್ಯಕ್ಷರಾದ ಸುನಂದಾ ಮಂಜುನಾಥ್, ಲಕ್ಷ್ಮಿ ಮಹಾಲಿಂಗಪ್ಪ, ಪ್ರಮುಖರಾದ ನವೀನ್ ಕುಮಾರ್,ರಾಜು ಬಿಲ್,ಪಾಪಯ್ಯ, ಸುದರ್ಶನ್, ನರಸಿಂಹಸ್ವಾಮಿ, ಹಾಗೂ ಸಾಹಿತ್ಯ ಪರಿಷತ್ತಿನ ಸದಸ್ಯರು ಉಪಸ್ಥಿತರಿದ್ದರು.
News By: Raghu Shikari-7411515737
