ಶಿಕಾರಿಪುರ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶುಕ್ರವಾರ 84ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರ ರಾಜಕೀಯ ಕರ್ಮಭೂಮಿ ಶಿಕಾರಿಪುರದಲ್ಲಿ ಅಭಿಮಾನದ ಹೊನಲು ಮೂಡಿತು ಸಾವಿರಾರು ಅಭಿಮಾನಿಗಳು, ಮಠಾಧೀಶರು ಹಾಗೂ ಗಣ್ಯರ ಸಮ್ಮುಖದಲ್ಲಿ ಹುಟ್ಟುಹಬ್ಬದ ಸಂಭ್ರಮ ಅದ್ದೂರಿಯಾಗಿ ನೆರವೇರಿತು.

ಇಲ್ಲಿನ ಏಕಲವ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ‘ಗೌರವ ಸಮರ್ಪಣಾ’ ಸಮಾವೇಶದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, “ನನ್ನ ರಾಜಕೀಯ ಜೀವನದ ಏಕೈಕ ಗುರಿ ಎಂದರೆ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವುದು. ಇದಕ್ಕಾಗಿ ನಾನು ವಿಶ್ರಾಂತಿ ಪಡೆಯದೆ ರಾಜ್ಯದ ಮೂಲೆ ಮೂಲೆಗೂ ಪ್ರವಾಸ ಮಾಡುತ್ತೇನೆ” ಎಂದು ಘೋಷಿಸಿದರು. ಈ ಮೂಲಕ ಅವರು ಮುಂಬರುವ ಚುನಾವಣೆಗೆ ರಣಕಹಳೆ ಊದಿದ್ದಾರೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಸಾಧನೆಯೇ ಮಾತನಾಡಲಿ:
ತಮ್ಮ ರಾಜಕೀಯ ತತ್ವವನ್ನು ಮೆಲುಕು ಹಾಕಿದ ಬಿಎಸ್‌ವೈ, “ಮಾತು ಸಾಧನೆಯಾಗಬಾರದು, ನಮ್ಮ ಸಾಧನೆಯೇ ಮಾತನಾಡಬೇಕು ಎಂಬ ತತ್ವದಲ್ಲಿ ನಾನು ನಂಬಿಕೆ ಇಟ್ಟವನು. ರೈತರ ಅಭಿವೃದ್ಧಿ ಮತ್ತು ನೀರಾವರಿ ಯೋಜನೆಗಳೇ ನನ್ನ ಮೊದಲ ಆದ್ಯತೆ. ಶಿಕಾರಿಪುರ ತಾಲ್ಲೂಕಿನ ಜನತೆಯ ಋಣ ಎಷ್ಟು ತೀರಿಸಿದರೂ ಸಾಲುವುದಿಲ್ಲ” ಎಂದು ಅತ್ಯಂತ ಭಾವನಾತ್ಮಕವಾಗಿ ನುಡಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಸಚಿವ ಬಿ. ಶ್ರೀರಾಮುಲು, ಸಿ.ಟಿ. ರವಿ, ಸಂಸದ ಪಿ.ಸಿ. ಮೋಹನ್, ಗೋವಿಂದ ಕಾರಜೋಳ, ಧನಂಜಯ ಸರ್ಜಿ, ಚನ್ನಬಸಪ್ಪ, ಬಿಸಿ ಪಾಟಿಲ್, ರುದ್ರೇಗೌಡ್ರು, ರೂಪಾಲಿನಾಯಕ್, ಸಂಸದ ಬಿ.ವೈ. ರಾಘವೇಂದ್ರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಪ್ರಮುಖ ನಾಯಕರು ಭಾಗವಹಿಸಿದ್ದರು. ವಿವಿಧ ಮಠಗಳ ಸ್ವಾಮೀಜಿಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಯಡಿಯೂರಪ್ಪ ಅವರನ್ನು ಸನ್ಮಾನಿಸಿ ಆಶೀರ್ವದಿಸಿದರು.

ಸಂಗೀತದ ರಸದೌತಣ:
ಜನ್ಮದಿನದ ಸಂಭ್ರಮದ ಅಂಗವಾಗಿ ಸಂಜೆ ನಡೆದ ‘ಸಂಗೀತ ಹಬ್ಬ’ದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ತಂಡದಿಂದ ಅದ್ದೂರಿ ಕಾರ್ಯಕ್ರಮ ಜರುಗಿತು. ಅರ್ಜುನ್ ಜನ್ಯ ಅವರ ಗಾಯನ, ಖ್ಯಾತ ನಿರೂಪಕಿ ಅನುಶ್ರೀ ಅವರ ಚುರುಕಿನ ಮಾತುಗಳು ಹಾಗೂ ಬಿಗ್ ಬಾಸ್ ಖ್ಯಾತಿಯ ಗಿಲ್ಲಿ ನಟ ಮತ್ತು ಕಾವ್ಯ ಜೋಡಿಯ ಉಪಸ್ಥಿತಿಯು ಸೇರಿದ್ದ ಸಾವಿರಾರು ಅಭಿಮಾನಿಗಳ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.
News By: Raghu Shikari-7411515737
