ಬೆಂಗಳೂರು: ರಾಜ್ಯದ ಲಕ್ಷಾಂತರ ನಿರುದ್ಯೋಗಿ ಯುವಕ-ಯುವತಿಯರಿಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ.
ರಾಜ್ಯದ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ದೀರ್ಘಕಾಲದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಮೀಸಲಾತಿ ವಿವಾದದಿಂದಾಗಿ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ 56,436 ನೇರ ನೇಮಕಾತಿ ಪ್ರಕ್ರಿಯೆಯನ್ನು ಮುಂದಿನ 30 ದಿನಗಳೊಳಗೆ ಆರಂಭಿಸಲು ರಾಜ್ಯ ಸಚಿವ ಸಂಪುಟ ಗುರುವಾರ ಮಹತ್ವದ ತೀರ್ಮಾನ ಕೈಗೊಂಡಿದೆ.

ಇತ್ತೀಚೆಗೆ ಧಾರವಾಡದಲ್ಲಿ ಸಾವಿರಾರು ಉದ್ಯೋಗಾಕಾಂಕ್ಷಿಗಳು ನಡೆಸಿದ ಬೃಹತ್ ಪ್ರತಿಭಟನೆ ಹಾಗೂ ನಿರಂತರ ಹೋರಾಟದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಸರ್ಕಾರ, ನೇಮಕಾತಿಗೆ ಎದುರಾಗಿದ್ದ ಕಾನೂನು ಅಡೆತಡೆಗಳನ್ನು ಬದಿಗಿಟ್ಟು ಪ್ರಕ್ರಿಯೆ ಚುರುಕುಗೊಳಿಸಲು ಮುಂದಾಗಿದೆ.
ಮೀಸಲಾತಿ ವಿವಾದದಿಂದಾಗಿ ಕಳೆದ ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ 56,436 ನೇರ ನೇಮಕಾತಿ ಪ್ರಕ್ರಿಯೆಯನ್ನು ಕೇವಲ 30 ದಿನಗಳೊಳಗೆ ಆರಂಭಿಸಲು ಸಚಿವ ಸಂಪುಟ ಐತಿಹಾಸಿಕ ತೀರ್ಮಾನ ಕೈಗೊಂಡಿದೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಸಚಿವ ಎಚ್.ಕೆ. ಪಾಟೀಲ, “ಮೀಸಲಾತಿ ಹೆಚ್ಚಳದ ಕುರಿತಾದ ಕಾನೂನು ಹೋರಾಟದಿಂದಾಗಿ ನೇಮಕಾತಿ ಪ್ರಕ್ರಿಯೆಗಳು ಸ್ಥಗಿತಗೊಂಡಿದ್ದವು. ಆದರೆ ಅಭ್ಯರ್ಥಿಗಳ ಹಿತದೃಷ್ಟಿಯಿಂದ, ಹೈಕೋರ್ಟ್‌ನ ಮಧ್ಯಂತರ ಆದೇಶದ ಅನ್ವಯ ಈ ಹಿಂದೆ ಜಾರಿಯಲ್ಲಿದ್ದ ಶೇ. 50ರ ಮೀಸಲಾತಿ ನಿಯಮದಂತೆಯೇ ನೇಮಕಾತಿ ಮುಂದುವರಿಸಲು ನಿರ್ಧರಿಸಲಾಗಿದೆ,” ಎಂದು ತಿಳಿಸಿದರು.
ತ್ವರಿತ ಕ್ರಮ: ಮುಂದಿನ 30 ದಿನಗಳಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲು ಇಲಾಖೆಗಳಿಗೆ ಸೂಚನೆ. ಹುದ್ದೆಗಳ ಸಂಖ್ಯೆ: ಒಟ್ಟು 56,436 ವಿವಿಧ ವೃಂದದ ಹುದ್ದೆಗಳ ನೇಮಕಾತಿಗೆ ಹಸಿರು ನಿಶಾನೆ.
ಹಳೆ ಮೀಸಲಾತಿ ಅನ್ವಯ ನೇಮಕ
ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ 2022ರಲ್ಲಿ ಹೊರಡಿಸಲಾಗಿದ್ದ ಕಾಯ್ದೆಯು ಸದ್ಯ ಉಚ್ಚ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಎದುರಿಸುತ್ತಿದೆ. ಈ ಕಾಯ್ದೆಗೆ ತಡೆಯಾಜ್ಞೆ ಇರುವುದರಿಂದ ಕಳೆದ ಎರಡು ವರ್ಷಗಳಿಂದ ನೇಮಕಾತಿ ಪ್ರಕ್ರಿಯೆಗಳು ಸ್ಥಗಿತಗೊಂಡಿದ್ದವು. “ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟು, ಈ ಹಿಂದೆ ಜಾರಿಯಲ್ಲಿದ್ದ ಶೇ. 50ರ ಮೀಸಲಾತಿ ಮಿತಿಯ ಅನ್ವಯವೇ ಸದ್ಯದ ನೇಮಕಾತಿಗಳನ್ನು ಮುಂದುವರಿಸಲು ನಿರ್ಧರಿಸಲಾಗಿದೆ” ಎಂದು ಸಚಿವರು ಸ್ಪಷ್ಟಪಡಿಸಿದರು.

ಸಿಎಂ ಗಂಭೀರ ಸೂಚನೆ: ಆಡಳಿತ ಯಂತ್ರದ ಕೊರತೆ ನೀಗಿಸಲು ಮತ್ತು ಅರ್ಹ ಯುವಕರಿಗೆ ಉದ್ಯೋಗ ನೀಡಲು ತಕ್ಷಣವೇ ಕ್ರಮ ವಹಿಸುವಂತೆ ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.
ಈ ನಿರ್ಧಾರದಿಂದಾಗಿ ಪೊಲೀಸ್, ಶಿಕ್ಷಣ, ಕಂದಾಯ ಮತ್ತು ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಶೀಘ್ರವೇ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದ್ದು, ಆಶಾವಾದ ಮೂಡಿಸಿದೆ.
News By- Raghu Shikari-7411515737
