ಮುಂದಿನ ಜಾತ್ರೆಗೆ ಚಂದ್ರಗುತ್ತಿ ದೇಗುಲ ಹೊಸ ರೂಪ: ಸಚಿವ ಮಧು ಬಂಗಾರಪ್ಪ

ಮುಂದಿನ ಜಾತ್ರೆಗೆ ಚಂದ್ರಗುತ್ತಿ ದೇಗುಲ ಹೊಸ ರೂಪ: ಸಚಿವ ಮಧು ಬಂಗಾರಪ್ಪ
Facebook
Twitter
LinkedIn
WhatsApp

​ಶಿವಮೊಗ್ಗ: ‘ಚಂದ್ರಗುತ್ತಿ ರೇಣುಕಾಂಬ ದೇವಾಲಯದ ಸಮಗ್ರ ಅಭಿವೃದ್ಧಿಗಾಗಿ ಪ್ರಾಧಿಕಾರ ರಚಿಸಲಾಗಿದ್ದು, ಮುಂದಿನ ಜಾತ್ರೆಯ ವೇಳೆಗೆ ಭಕ್ತರಿಗೆ ಅಗತ್ಯವಿರುವ ಎಲ್ಲ ಮೂಲಸೌಕರ್ಯಗಳನ್ನು ಕಲ್ಪಿಸಿ ದೇವಸ್ಥಾನಕ್ಕೆ ಕಾಯಕಲ್ಪ ನೀಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಭರವಸೆ ನೀಡಿದರು.

​ಶನಿವಾರ ಚಂದ್ರಗುತ್ತಿಯಲ್ಲಿ ರೇಣುಕಾಂಬ ದೇವಾಲಯದ ₹2.84 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ನಂತರ ನಡೆದ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜನವರಿ ಮಾಹೆಯಲ್ಲಿ ದೇವಾಲಯ ಅಭಿವೃದ್ಧಿ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದೆ. ಕೇಂದ್ರ ಪುರಾತತ್ವ ಇಲಾಖೆ ಹಾಗೂ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಕೆಲಸಗಳು ನಡೆಯಬೇಕಿದೆ. ದೇವಸ್ಥಾನದ ಇನ್ನೊಂದು ಭಾಗದಿಂದ ಇಳಿಯಲು ಮೆಟ್ಟಿಲು ನಿರ್ಮಾಣ ಹಾಗೂ ಸೋರುತ್ತಿರುವ ಕಟ್ಟಡದ ರಿಪೇರಿ ಕೆಲಸಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಲಾಗುವುದು. ಇದಕ್ಕೆ ಬೇಕಾದ ಶೇ 100ರಷ್ಟು ಅನುದಾನ ತರುವ ಜವಾಬ್ದಾರಿ ನನ್ನದು’ ಎಂದು ಸಚಿವರು ತಿಳಿಸಿದರು.

​‘ಜಾತ್ರೆ ವೇಳೆ ಭಕ್ತಾದಿಗಳು ತಂಗಲು ಅರಣ್ಯ ವ್ಯಾಪ್ತಿಯ 10 ಎಕರೆ ಜಮೀನಿನಲ್ಲಿ ಡಾರ್ಮಿಟರಿ, ಶೌಚಾಲಯ ಹಾಗೂ ಪಾರ್ಕಿಂಗ್ ವ್ಯವಸ್ಥೆ ಮಾಡುವ ಯೋಜನೆ ರೂಪಿಸಲಾಗಿದೆ. ಅರಣ್ಯ ಇಲಾಖೆಯಿಂದ ಅನುಮತಿ ಸಿಕ್ಕ ತಕ್ಷಣ ಕಾಮಗಾರಿ ಆರಂಭವಾಗಲಿದೆ’ ಎಂದರು.

​ರೈತರಿಗೆ ಅಭಯ: ಇದೇ ಸಂದರ್ಭದಲ್ಲಿ ಬಗರ್ ಹುಕುಂ ಸಾಗುವಳಿದಾರರ ಪರ ಮಾತನಾಡಿದ ಅವರು, ‘ಕಾನೂನಾತ್ಮಕವಾಗಿ ಉಳುಮೆ ಮಾಡುತ್ತಿರುವ ರೈತರನ್ನು ಯಾವುದೇ ಅಧಿಕಾರಿಗಳು ಒಕ್ಕಲೆಬ್ಬಿಸುವಂತಿಲ್ಲ. ಅರ್ಹ ಬಡವರಿಗೆ ಹಕ್ಕುಪತ್ರ ನೀಡುವುದು ನಮ್ಮ ಜವಾಬ್ದಾರಿಯಾಗಿದೆ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

​ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್. ಚಂದ್ರಭೂಪಾಲ, ಸಾಗರ ಎಸಿ ವೀರೇಶ್ ಕುಮಾರ್, ತಹಶೀಲ್ದಾರ್ ಪುರಂದರ ಕೆ.,ಇಓ ಶಶಿಧರ್ ಹಾಗೂ ಪ್ರಮುಖರು ಇದ್ದರು.

News By: Raghu Shikari-7411515737