ಶಿಕಾರಿಪುರ: ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಬ್ರಿಟಿಷರ ವಿರುದ್ಧ ಮೊದಲ ಬಾರಿಗೆ ‘ಸ್ವತಂತ್ರ ಹಳ್ಳಿ’ ಎಂದು ಘೋಷಿಸಿಕೊಂಡು ಇತಿಹಾಸ ಸೃಷ್ಟಿಸಿದ್ದ ಶಿವಮೊಗ್ಗ ಜಿಲ್ಲೆಯ ಈಸೂರು ದಂಗೆಯ ಸಾಕ್ಷಿಯಾಗಿದ್ದ ಕೊನೆಯ ಕೊಂಡಿ ಕಳಚಿದೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಟಿ.ಕೆ. ದೇವೇಂದ್ರಪ್ಪ (99) ಅವರು ಇಂದು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.
ಶಿಕಾರಿಪುರ ತಾಲ್ಲೂಕಿನ ತಿಮ್ಲಾಪುರ ಗ್ರಾಮದ ನಿವಾಸಿಯಾಗಿದ್ದ ದೇವೇಂದ್ರಪ್ಪ ಅವರು, 1942ರ ‘ಕ್ವಿಟ್ ಇಂಡಿಯಾ’ ಚಳುವಳಿಯ ಸಂದರ್ಭದಲ್ಲಿ ನಡೆದ ಐತಿಹಾಸಿಕ ಈಸೂರು ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

’ಏಸೂರು ಕೊಟ್ಟರೂ ಈಸೂರು ಬಿಡೆವು’
”ಏಸೂರು ಕೊಟ್ಟರೂ ಈಸೂರು ಬಿಡೆವು” ಎಂಬ ವೀರ ಘೋಷಣೆಯೊಂದಿಗೆ ಬ್ರಿಟಿಷ್ ಅಧಿಕಾರಿಗಳನ್ನು ಊರ ಹೊರಗೆ ಹಾಕಿದ್ದ ಈಸೂರಿನ ಹೋರಾಟಗಾರರೊಂದಿಗೆ ದೇವೇಂದ್ರಪ್ಪ ಹೋರಾಡಿದ್ದರು. ಈ ಚಳುವಳಿಯಲ್ಲಿ ಹುಚ್ಚರಾಯಪ್ಪ ಅವರಿಗೆ ಸಾಥ್ ನೀಡಿದ್ದ ಇವರು, ಹೋರಾಟದ ಹಾದಿಯಲ್ಲಿ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿ ಬೆಂಗಳೂರಿನ ಪರಪ್ಪನ ಆಗ್ರಹಾರ ಜೈಲಿನಲ್ಲಿ ಸೆರೆಮನೆ ವಾಸವನ್ನು ಅನುಭವಿಸಿದ್ದರು.

ಮಾದರಿ ಜೀವನ
ಈಸೂರು ದಂಗೆಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ಹೋರಾಟಗಾರರು ಈ ಮೊದಲೇ ಮೃತರಾಗಿದ್ದು, ದೇವೇಂದ್ರಪ್ಪ ಅವರು ಆ ಹೋರಾಟದ ಜೀವಂತ ಸಾಕ್ಷಿಯಾಗಿದ್ದ ಕೊನೆಯ ಕೊಂಡಿಯಾಗಿದ್ದರು. ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪ್ರತಿವರ್ಷ ಆಗಸ್ಟ್ 9ರಂದು ತಾಲ್ಲೂಕು ಕಚೇರಿ ಮುಂದೆ ಇರುವ ಸ್ವಾತಂತ್ರ್ಯ ಹೋರಾಟಗಾರ ಸ್ಮಾರಕದ ಬಳಿ ಇವರಿಂದಲೇ ಧ್ವಜಾರೋಹಣ ನೆರವೇರಿಸಿ ಸನ್ಮಾನಿಸಲಾಗುತ್ತಿತ್ತು.

”ದೇವೇಂದ್ರಪ್ಪ ಅವರ ಸಾವು ಒಂದು ಸಾರ್ಥಕ ಜೀವನದ ಅಂತ್ಯ. ಅವರು ಈಸೂರು ಹೋರಾಟದ ಕೊನೆಯ ಕೊಂಡಿಯಾಗಿದ್ದರು. ಅವರ ಬದುಕು ಮತ್ತು ದೇಶಪ್ರೇಮ ಇಂದಿನ ಯುವ ಪೀಳಿಗೆಗೆ ಸದಾ ಮಾದರಿ.” ಕೆ.ಎಸ್. ಹುಚ್ಚರಾಯಪ್ಪ, ಹಿರಿಯ ಪತ್ರಕರ್ತರು.
ಮೃತರ ಅಗಲಿಕೆಗೆ ಜಿಲ್ಲೆಯ ಗಣ್ಯರು ಹಾಗೂ ಸ್ವಾತಂತ್ರ್ಯ ಹೋರಾಟದ ಅಭಿಮಾನಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ. ದೇವೇಂದ್ರಪ್ಪ ಅವರ ನಿಧನದೊಂದಿಗೆ ಕರ್ನಾಟಕದ ಸ್ವಾತಂತ್ರ್ಯ ಹೋರಾಟದ ಒಂದು ಸುವರ್ಣ ಅಧ್ಯಾಯ ಮುಕ್ತಾಯಗೊಂಡಂತಾಗಿದೆ.
News By: Raghu Shikari-7411515737
