ಬೆಂಗಳೂರು: ರಾಜಕೀಯ ಮೇಲಾಟ ಹಾಗೂ ಅಧಿಕಾರ ಹಂಚಿಕೆಯ ಚರ್ಚೆಗಳ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಆರ್ಥಿಕ ಭವಿಷ್ಯ ನಿರ್ಧರಿಸುವ 2026-27ನೇ ಸಾಲಿನ ಆಯವ್ಯಯ ಮಂಡನೆಗೆ ಮುಹೂರ್ತ ನಿಗದಿಪಡಿಸಿದ್ದಾರೆ.
ವಿಧಾನಸಭೆ ಸಚಿವಾಲಯದ ಪ್ರಕಟಣೆಯಂತೆ, ಮಾರ್ಚ್ 6ರಂದು ಬೆಳಿಗ್ಗೆ 10:15ಕ್ಕೆ ಸಿದ್ದರಾಮಯ್ಯ ಅವರು ತಮ್ಮ ವೃತ್ತಿಜೀವನದ ಮತ್ತೊಂದು ಐತಿಹಾಸಿಕ ಬಜೆಟ್ ಮಂಡಿಸಲಿದ್ದಾರೆ.

ಅರಸು ದಾಖಲೆ ಪತನ
ಈ ಬಜೆಟ್ ಮಂಡನೆಯು ಸಿದ್ದರಾಮಯ್ಯ ಅವರ ರಾಜಕೀಯ ಜೀವನದ ಮಹತ್ವದ ಮೈಲಿಗಲ್ಲಾಗಲಿದೆ. ಕರ್ನಾಟಕದ ದೈತ್ಯ ನಾಯಕ ಡಿ. ದೇವರಾಜ ಅರಸು ಅವರು 2,789 ದಿನಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದ ಸುದೀರ್ಘ ದಾಖಲೆಯನ್ನು ಸಿದ್ದರಾಮಯ್ಯ ಈಗ ಮೀರಿದ್ದಾರೆ. ಈ ಮೂಲಕ ಅತಿ ಹೆಚ್ಚು ಕಾಲ ಮುಖ್ಯಮಂತ್ರಿ ಪೀಠ ಅಲಂಕರಿಸಿದ ಹೆಗ್ಗಳಿಕೆ ಈಗ ಅವರ ಪಾಲಾಗಿದೆ. ಜೊತೆಗೆ, ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಹಣಕಾಸು ಸಚಿವ ಎಂಬ ಖ್ಯಾತಿಯೂ ಇವರದಾಗಿದೆ.

ಗ್ಯಾರಂಟಿ ಆಧಾರಿತ ಆಯವ್ಯಯ
ಮುಂಬರುವ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸಿದ್ಧಪಡಿಸಲಾಗುತ್ತಿರುವ ಈ ಬಜೆಟ್‌ನಲ್ಲಿ ‘ಗ್ಯಾರಂಟಿ’ ಯೋಜನೆಗಳ ಯಶಸ್ವಿ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡುವ ಸಾಧ್ಯತೆಯಿದೆ. 2013-18ರ ಅವಧಿಯ ಅನುಭವ ಹಾಗೂ ಪ್ರಸ್ತುತ ಆಡಳಿತ ಚಾತುರ್ಯ ಈ ಬಾರಿಯ ಆಯವ್ಯಯದಲ್ಲಿ ಪ್ರತಿಫಲಿಸುವ ನಿರೀಕ್ಷೆಯಿದೆ ಎಂದು ವಿಶ್ಲೇಷಿಸಲಾಗಿದೆ.

ಅಧಿವೇಶನದ ವಿವರ: ಬಜೆಟ್ ಮಂಡನೆ: ಮಾರ್ಚ್ 6, ಬೆಳಿಗ್ಗೆ 10:15 ಅವಧಿ: ಮಾರ್ಚ್ 6 ರಿಂದ ಮಾರ್ಚ್ 27 ರವರೆಗೆ ಒಟ್ಟು ಕಲಾಪ: 14 ದಿನಗಳು ಸದ್ಯ ಉಭಯ ನಾಯಕರ ನಡುವಿನ ಶೀತಲ ಸಮರದ ನಡುವೆಯೂ ಸಿಎಂ ಸಿದ್ದರಾಮಯ್ಯ ಅವರು ಯಾವುದೇ ಗೊಂದಲಕ್ಕೆ ಆಸ್ಪದ ನೀಡದೆ ಇಲಾಖಾವಾರು ಪೂರ್ವಭಾವಿ ಸಭೆಗಳನ್ನು ಪೂರ್ಣಗೊಳಿಸಿದ್ದಾರೆ.
News By: Raghu Shikari-7411515737
