​ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಶೀಘ್ರವೇ ನೈಟ್ ಲ್ಯಾಂಡಿಂಗ್ ವ್ಯವಸ್ಥೆ; ಅಧ್ಯಕ್ಷ ನಂಜಯ್ಯನಮಠ್‌

​ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಶೀಘ್ರವೇ ನೈಟ್ ಲ್ಯಾಂಡಿಂಗ್ ವ್ಯವಸ್ಥೆ; ಅಧ್ಯಕ್ಷ ನಂಜಯ್ಯನಮಠ್‌
Facebook
Twitter
LinkedIn
WhatsApp

​ಶಿವಮೊಗ್ಗ: ಮಲೆನಾಡಿಗರಿಗೆ ಸಾರಿಗೆ ಕ್ಷೇತ್ರದಲ್ಲಿ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮುಂದಿನ ಆರೇಳು ತಿಂಗಳ ಒಳಗಾಗಿ ರಾತ್ರಿ ವೇಳೆಯೂ ವಿಮಾನ ಸಂಚಾರಕ್ಕೆ ಅನುಕೂಲವಾಗುವಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ನಂಜಯ್ಯನಮಠ್‌ ತಿಳಿಸಿದ್ದಾರೆ.

​ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಫೆಬ್ರವರಿ ಅಂತ್ಯದ ವೇಳೆಗೆ ಸುಮಾರು 6 ಕೋಟಿ ರೂ. ವೆಚ್ಚದ ಕಾಮಗಾರಿಗಳು ಆರಂಭಗೊಳ್ಳಲಿವೆ. ದಿಕ್ಸೂಚಿ ಯಾಂತ್ರಿಕ ವ್ಯವಸ್ಥೆ (DBOR) ಅಳವಡಿಕೆಗೆ ಟೆಂಡರ್ ಪ್ರಕ್ರಿಯೆ ಈಗಾಗಲೇ ಮುಗಿದಿದ್ದು, ವಿದ್ಯುತ್ ಸಂಪರ್ಕ ವ್ಯವಸ್ಥೆಯೂ ಪೂರ್ಣಗೊಂಡಿದೆ. ಮಣ್ಣಿನ ಗುಣಮಟ್ಟ ಪರೀಕ್ಷೆಯ ವರದಿ ಬಂದ ಕೂಡಲೇ ಕೆಲಸ ಚುರುಕುಗೊಳ್ಳಲಿದೆ ಎಂದು ಅವರು ವಿವರಿಸಿದರು.

​ಲೈಸೆನ್ಸ್ ನವೀಕರಣ:
ವಿಮಾನ ನಿಲ್ದಾಣದ ಪರವಾನಗಿ ನವೀಕರಣದಲ್ಲಿದ್ದ ಅಡೆತಡೆಗಳನ್ನು ನಿವಾರಿಸಲಾಗಿದ್ದು, 22 ಲಕ್ಷ ರೂ. ದಂಡ ಪಾವತಿಸಲಾಗಿದೆ. ಇದರಿಂದ ಮುಂದಿನ 3 ವರ್ಷಗಳವರೆಗೆ ಪರವಾನಗಿ ನವೀಕರಣದ ಚಿಂತೆ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

​ಉಡಾನ್ ಯೋಜನೆಗೆ ಮನವಿ:
ಶಿವಮೊಗ್ಗದಿಂದ ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿದಂತೆ ಪ್ರಮುಖ ನಗರಗಳಿಗೆ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಕೇಂದ್ರದ ‘ಉಡಾನ್’ ಯೋಜನೆಯನ್ನು ಮುಂದುವರಿಸಲು ಕೇಂದ್ರ ವಿಮಾನಯಾನ ಸಚಿವರಿಗೆ ಮನವಿ ಮಾಡಲಾಗುವುದು. ಇದರಿಂದ ಪ್ರಯಾಣಿಕರಿಗೆ ದರ ಏರಿಕೆಯ ಹೊರೆ ತಪ್ಪಲಿದೆ ಎಂದರು.

​ಹೊಸ ಸೌಲಭ್ಯಗಳು:
ವಿಮಾನ ನಿಲ್ದಾಣದ ಆವರಣದಲ್ಲಿ 17 ಎಕರೆ ಜಾಗದಲ್ಲಿ ಪಂಚತಾರಾ ಹೋಟೆಲ್ ಹಾಗೂ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಉದ್ದೇಶಿಸಲಾಗಿದೆ. ಅಲ್ಲದೆ, ಪೈಲಟ್ ತರಬೇತಿ ಕೇಂದ್ರ ಆರಂಭಿಸಲು ಮತ್ತೊಮ್ಮೆ ಆಸಕ್ತ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗುವುದು.

​ರೈತರ ಸಮಸ್ಯೆಗೆ ಸ್ಪಂದನೆ:
ಭೂಮಿ ನೀಡಿದ 370 ರೈತ ಕುಟುಂಬಗಳಿಗೆ ಭರವಸೆಯಂತೆ ನಿವೇಶನ ದೊರೆತಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆದು ರೈತರಿಗೆ ನ್ಯಾಯ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅವರು ಭರವಸೆ ನೀಡಿದರು. ಗೋಷ್ಠಿಯಲ್ಲಿ ವಿಮಾನ ನಿಲ್ದಾಣದ ಮುಖ್ಯಸ್ಥ ಕೌಶಿಕ ಶಮಂತ್ ಹಾಗೂ ಇತರ ಮುಖಂಡರು ಉಪಸ್ಥಿತರಿದ್ದರು.