ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಕಾಡಾನೆಗಳ ಸರಣಿ ದಾಳಿ ಮುಂದುವರಿದಿದ್ದು, ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಮತ್ತೊಂದು ಜೀವ ಬಲಿಯಾಗಿದೆ. ಚಿಕ್ಕಮಗಳೂರು ತಾಲೂಕಿನ ಹುಣಸೇಹಳ್ಳಿ ಸಮೀಪದ ಪುರ ಗ್ರಾಮದಲ್ಲಿ ಕಾಡಾನೆ ದಾಳಿಗೆ ಮಹಿಳಾ ಕಾರ್ಮಿಕರೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಘಟನೆಯ ಹಿನ್ನೆಲೆ:
ಮೃತರನ್ನು ಹಾವೇರಿ ಜಿಲ್ಲೆಯ ಹಾನಗಲ್ ಮೂಲದ ಬೋರಮ್ಮ (33) ಎಂದು ಗುರುತಿಸಲಾಗಿದೆ. ಕಳೆದ ಸೋಮವಾರವಷ್ಟೇ ಇದೇ ಪ್ರದೇಶದಲ್ಲಿ ಆನೆಯೊಂದು ಕಾರ್ಮಿಕನನ್ನು ಬಲಿ ಪಡೆದಿತ್ತು. ಆ ಘಟನೆ ಮಾಸುವ ಮುನ್ನವೇ ಇಂದು ಅದೇ ಜಾಗದಲ್ಲಿ ಬೋರಮ್ಮ ಅವರ ಮೇಲೆ ಆನೆ ದಾಳಿ ನಡೆಸಿದೆ. ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಬಂದ ಆನೆ ಈ ಕೃತ್ಯ ಎಸಗಿದೆ.
ಅರಣ್ಯ ಇಲಾಖೆಯ ವಿಫಲ ಕಾರ್ಯಾಚರಣೆ:
ಪ್ರದೇಶದಲ್ಲಿ ಉಪಟಳ ನೀಡುತ್ತಿದ್ದ ಆನೆಯನ್ನು ಸೆರೆಹಿಡಿಯಲು ಕಳೆದ ಕೆಲವು ದಿನಗಳಿಂದ ಕಾರ್ಯಾಚರಣೆ ನಡೆಯುತ್ತಿತ್ತು. ಆದರೆ, ಆನೆಗೆ ‘ಮದವೇರಿದೆ’ ಎನ್ನುವ ತಾಂತ್ರಿಕ ಕಾರಣ ನೀಡಿ ಅರಣ್ಯ ಇಲಾಖೆ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಕಾರ್ಯಾಚರಣೆ ನಿಂತ ಬೆನ್ನಲ್ಲೇ ಅದೇ ಮದವೇರಿದ ಆನೆ ಇಂದು ಮಹಿಳೆಯನ್ನು ಬಲಿ ಪಡೆದಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ರಸ್ತೆ ಮಧ್ಯೆ ಶವವಿಟ್ಟು ಪ್ರತಿಭಟನೆ:
ಘಟನೆಯ ನಂತರ ಅರಣ್ಯ ಇಲಾಖೆಯ ಅಧಿಕಾರಿಗಳು ಮೃತದೇಹವನ್ನು ಯಾರಿಗೂ ತಿಳಿಯದಂತೆ ಟಾರ್ಪಲ್‌ನಲ್ಲಿ ಸುತ್ತಿ ಪಿಕಪ್ ವಾಹನದಲ್ಲಿ ಸಾಗಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ಆಕ್ರೋಶಗೊಂಡ ಮಲೆನಾಡಿಗರು ಎನ್.ಆರ್.ಪುರ ತಾಲೂಕಿನ ಕಡಬಗೆರೆ ಬಳಿ ಪಿಕಪ್ ಅಡ್ಡಗಟ್ಟಿದ್ದಾರೆ.
ಸಚಿವರ ಭೇಟಿಗೆ ಪಟ್ಟು:
ಅರಣ್ಯ ಸಚಿವರು ಸ್ಥಳಕ್ಕೆ ಬರುವವರೆಗೂ ಶವವನ್ನು ಕದಲಿಸಲು ಬಿಡುವುದಿಲ್ಲ” ಎಂದು ಪ್ರತಿಭಟನಾಕಾರರು ರಾಜ್ಯ ಹೆದ್ದಾರಿಯಲ್ಲೇ ಮೃತದೇಹವನ್ನಿಟ್ಟು ಧರಣಿ ಕುಳಿತಿದ್ದಾರೆ.
ಆಕ್ರೋಶ: ಅರಣ್ಯ ಇಲಾಖೆ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಗ್ರಾಮಸ್ಥರು, ನಮ್ಮ ಪ್ರಾಣಕ್ಕೆ ಬೆಲೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಸದ್ಯ ಸ್ಥಳಕ್ಕೆ ಉನ್ನತ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಸ್ಥಿತಿ ಉದ್ವಿಗ್ನವಾಗಿದೆ. ಪದೇ ಪದೇ ನಡೆಯುತ್ತಿರುವ ಆನೆ ದಾಳಿಗೆ ಶಾಶ್ವತ ಪರಿಹಾರ ಬೇಕೆಂದು ಮಲೆನಾಡಿಗರು ಆಗ್ರಹಿಸುತ್ತಿದ್ದಾರೆ.
