ಯುವಜನತೆ ಹತಾಶೆ ಬಿಟ್ಟು ಅವಕಾಶ ಸದುಪಯೋಗಪಡಿಸಿಕೊಳ್ಳಿ: ಸಂಸದ ಬಿ.ವೈ. ರಾಘವೇಂದ್ರ

ಯುವಜನತೆ ಹತಾಶೆ ಬಿಟ್ಟು ಅವಕಾಶ ಸದುಪಯೋಗಪಡಿಸಿಕೊಳ್ಳಿ: ಸಂಸದ ಬಿ.ವೈ. ರಾಘವೇಂದ್ರ
Facebook
Twitter
LinkedIn
WhatsApp

​ಶಿಕಾರಿಪುರ: “ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ಪದವಿ ಪಡೆದು ಹೊರಬರುತ್ತಿದ್ದಾರೆ. ಉದ್ಯೋಗವಿಲ್ಲದೆ ಹತಾಶರಾಗಿರುವ ಯುವಶಕ್ತಿಗೆ ಆಸರೆ ನೀಡಿ, ರಾಷ್ಟ್ರದ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಿಸುವ ಉದ್ದೇಶದಿಂದ ಈ ಉದ್ಯೋಗ ಮೇಳ ಆಯೋಜಿಸಲಾಗಿದೆ,” ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

​ಪಟ್ಟಣದ ಕುಮದ್ವತಿ ವಿದ್ಯಾ ಸಂಸ್ಥೆಯ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜನ್ಮದಿನದ ಅಂಗವಾಗಿ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ ಹಾಗೂ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಸಂಯುಕ್ತವಾಗಿ ಆಯೋಜಿಸಿದ್ದ ‘ಭವ್ಯ ಉದ್ಯೋಗ ಮೇಳ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಐದು ವರ್ಷಗಳ ಹಿಂದೆ ಇದೇ ಆವರಣದಲ್ಲಿ ಹಮ್ಮಿಕೊಂಡಿದ್ದ ಮೇಳದಲ್ಲಿ 8,500 ಅಭ್ಯರ್ಥಿಗಳು ಭಾಗವಹಿಸಿ, 3,500 ಮಂದಿ ವಿವಿಧ ಕಂಪನಿಗಳಿಗೆ ಆಯ್ಕೆಯಾಗಿದ್ದರು. ಈ ಬಾರಿಯೂ 85ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳ ಪ್ರತಿನಿಧಿಗಳು ಆಗಮಿಸಿದ್ದು, ಅಭ್ಯರ್ಥಿಗಳು ಇಂತಹ ವೇದಿಕೆಯನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು,” ಎಂದು ಕರೆ ನೀಡಿದರು..

ಕೇಂದ್ರ ಸರ್ಕಾರ ವಿಕಸಿತ ಭಾರತ ಕೌಶಲ್ಯ ಅಭಿವೃದ್ಧಿ ಯೋಜನೆಗಳ‌ ಮೂಲಕ ದೇಶದ ಯುವಜನತೆಗೆ ಸ್ವಾವಲಂಬನೆ ಬದುಕನ್ನು ಕಟ್ಟಿಕೊಡುವ ಕೆಲಸ ಮಾಡುತ್ತಿದೆ ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರವೂ ಮುಖ್ಯವಾಗಿದೆ ಎಂದರು.

ಶಾಸಕ ಬಿ.ವೈ. ವಿಜಯೇಂದ್ರ ಮಾತನಾಡಿ, “ಯಡಿಯೂರಪ್ಪ ಅವರಿಗೆ ರಾಜಕೀಯ ಜನ್ಮ ನೀಡಿದ ಈ ಪುಣ್ಯಭೂಮಿ ಇಂದು ರಾಜ್ಯದಲ್ಲೇ ಅಭಿವೃದ್ಧಿಯ ಮಾದರಿಯಾಗಿದೆ. ಕೃಷಿ, ನೀರಾವರಿ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ಇಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಿವೆ. ಯಡಿಯೂರಪ್ಪ ಅವರು ತಮ್ಮ ಜೀವನವನ್ನೇ ಜನಸೇವೆಗಾಗಿ ಅರ್ಪಿಸಿದ್ದಾರೆ,” ಎಂದರು.
ಆಳ್ವಾಸ್ ಎಜುಕೇಶನ್ ಸೊಸೈಟಿ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, “ಈ ಮೇಳದ ಯಶಸ್ಸಿನ ಹಿಂದೆ ಕಳೆದ ಎರಡೂವರೆ ತಿಂಗಳ ಕಠಿಣ ಪರಿಶ್ರಮವಿದೆ. ಸಂಸದ ರಾಘವೇಂದ್ರ ಹಾಗೂ ಶಾಸಕ ವಿಜಯೇಂದ್ರ ಅವರ ಇಚ್ಛಾಶಕ್ತಿಯಿಂದಾಗಿ ಸಾವಿರಾರು ಯುವಕರಿಗೆ ಇಂದು ಉದ್ಯೋಗದ ಬಾಗಿಲು ತೆರೆದಿದೆ,” ಎಂದು ತಿಳಿಸಿದರು.

ವೇದಿಕೆಯಲ್ಲಿ ಮಾಜಿ ಎಂಎಡಿಬಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ, ಸಹಕಾರಿ ಧುರೀಣ ಡಾ. ಬಿ.ಡಿ. ಭೂಕಾಂತ್, ಮಾಜಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚನ್ನವೀರಪ್ಪ, ವಿವೇಕಾನಂದ ವಿದ್ಯಾಸಂಸ್ಥೆಯ ಅಧ್ಯಕ್ಷ ಎಂ.ಬಿ. ಶಿವಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ದೂದಳ್ಳಿ ಬಸವರಾಜ್, ಆಡಳಿತ ಮಂಡಳಿ ಪ್ರತಿನಿಧಿ ಡಾ. ಜಿ.ಎಸ್. ಶಿವಕುಮಾರ್, ವಿದ್ಯಾ ಶಂಕರ್ ಮತ್ತಿತರರು ಉಪಸ್ಥಿತರಿದ್ದರು..

News By: Raghu Shikari-7411515737