ಶಿಕಾರಿಪುರ:ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, “ದೇಶದೊಳಗೆ ದೇಶದ್ರೋಹಿ ಕೃತ್ಯ ಎಸಗುವವರಿಗೆ ಹಾಗೂ ಟಿಪ್ಪು-ಔರಂಗಜೇಬ್ ಮನಸ್ಥಿತಿ ಇರುವವರಿಗೆ ಸರ್ಕಾರ ತಕ್ಕ ಪಾಠ ಕಲಿಸಬೇಕು” ಎಂದು ಆಗ್ರಹಿಸಿದ್ದಾರೆ.
ಶುಕ್ರವಾರ ಶಿಕಾರಿಪುರ ಪಟ್ಟಣದಲ್ಲಿ ಮಾತನಾಡಿದ ಅವರು, ಬಾಗಲಕೋಟೆ ಘಟನೆಯು ವ್ಯವಸ್ಥಿತ ಸಂಚು ಎಂದು ಆರೋಪಿಸಿದರು.
“ಶಾಂತಿಯುತವಾಗಿ ನಡೆಯುತ್ತಿದ್ದ ಶಿವಾಜಿ ಮಹಾರಾಜರ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿರುವುದು ಅಕ್ಷಮ್ಯ ಅಪರಾಧ. ಇಂತಹ ಕಿಡಿಗೇಡಿಗಳನ್ನು ಈಗಾಗಲೇ ಪೊಲೀಸರು ಗುರುತಿಸಿ ಬಂಧಿಸಿರುವುದು ಸ್ವಾಗತಾರ್ಹ. ಆದರೆ, ಕೇವಲ ಬಂಧನದಿಂದ ಈ ಮನಸ್ಥಿತಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ” ಎಂದು ಅವರು ಅಭಿಪ್ರಾಯಪಟ್ಟರು.
ಮುಖ್ಯಮಂತ್ರಿ-ಗೃಹ ಸಚಿವರಿಗೆ ಒತ್ತಾಯ
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿದೆ ಎಂದು ಕಿಡಿಕಾರಿದ ವಿಜಯೇಂದ್ರ, “ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಈ ವಿಷಯವನ್ನು ಕೇವಲ ಒಂದು ಘಟನೆಯಾಗಿ ನೋಡಬಾರದು.
ಸಮಾಜದಲ್ಲಿ ಅಶಾಂತಿ ಬಿತ್ತುವ ಇಂತಹ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕಿಡಿಗೇಡಿಗಳಿಗೆ ಕಾನೂನಿನ ಭಯ ಹುಟ್ಟಿಸುವ ಕೆಲಸವಾಗಬೇಕು” ಎಂದು ಒತ್ತಾಯಿಸಿದರು.
News By: Raghu Shikari-7411515737
