ಶಿಕಾರಿಪುರ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜನ್ಮದಿನದ ಅಂಗವಾಗಿ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸಲು ಫೆಬ್ರವರಿ 20 ಮತ್ತು 21ರಂದು ಪಟ್ಟಣದ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಆವರಣದಲ್ಲಿ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಮೂಡಬಿದಿರೆಯ ಆಳ್ವಾಸ್ ಎಜುಕೇಷನ್ ಫೌಂಡೇಶನ್ ಟ್ರಸ್ಟಿ ವಿವೇಕ್ ಆಳ್ವಾ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಹಾಗೂ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಆಶ್ರಯದಲ್ಲಿ ಈ ವಿಶೇಷ ಮೇಳ ಆಯೋಜಿಸಲಾಗಿದೆ. ಇದು ಯುವಜನತೆಗೆ ಉದ್ಯೋಗದ ಹೊಸ ಹಾದಿ ತೋರಿಸಲಿದೆ,” ಎಂದರು.
ಗ್ರಾಮೀಣ ಯುವಜನತೆಗೆ ಆದ್ಯತೆ
”ಈ ಉದ್ಯೋಗ ಮೇಳದಲ್ಲಿ ಸುಮಾರು 83 ಪ್ರತಿಷ್ಠಿತ ಕಂಪನಿಗಳು ಪಾಲ್ಗೊಳ್ಳಲಿವೆ. ಕೇವಲ ವಿದ್ಯಾವಂತರಿಗಷ್ಟೇ ಅಲ್ಲದೆ, ಅನಕ್ಷರಸ್ಥರಿಗೂ ಅವರ ಕೌಶಲಕ್ಕೆ ತಕ್ಕಂತೆ ಉದ್ಯೋಗ ನೀಡಲು ಆದ್ಯತೆ ನೀಡಲಾಗಿದೆ. ಜಿಲ್ಲೆಯ ಹಾಗೂ ತಾಲ್ಲೂಕಿನ ಯುವಜನತೆ ಈ ಸುವರ್ಣಾವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು,” ಎಂದು ಅವರು ಮನವಿ ಮಾಡಿದರು.
ಸ್ಥಳದಲ್ಲೂ ಹೆಸರು ನೋಂದಾಯಿಸಲು ಅವಕಾಶ
ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಆಡಳಿತ ಪ್ರತಿನಿಧಿ ಡಾ. ಜಿ.ಎಸ್. ಶಿವಕುಮಾರ್ ಮಾತನಾಡಿ, “ಸಂಸದ ಬಿ.ವೈ. ರಾಘವೇಂದ್ರ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರ ಸಹಕಾರದೊಂದಿಗೆ ಈ ಮೇಳ ಆಯೋಜಿಸಲಾಗಿದೆ. ಈಗಾಗಲೇ ಸಾವಿರಾರು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಮೊದಲೇ ಹೆಸರು ನೋಂದಾಯಿಸಲು ಸಾಧ್ಯವಾಗದವರು ಮೇಳ ನಡೆಯುವ ಸ್ಥಳದಲ್ಲೂ ಹೆಸರು ನೋಂದಾಯಿಸಿ ಸಂದರ್ಶನದಲ್ಲಿ ಭಾಗವಹಿಸಬಹುದು,” ಎಂದು ಮಾಹಿತಿ ನೀಡಿದರು.
ಕುಮದ್ವತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಎಂ. ವೀರೇಂದ್ರ ಹಾಗೂ ಕುಮದ್ವತಿ ಸಿದ್ಧ ಉಡುಪು ತರಬೇತಿ ಕೇಂದ್ರದ ಪ್ರಾಂಶುಪಾಲ ಕೆ.ಎಸ್. ವಿದ್ಯಾಶಂಕರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
News By: Raghu Shikari-7411515737
