ಶಿಕಾರಿಪುರ: “ದೇವರು ಕೊಟ್ಟಿರುವ ಪವಿತ್ರವಾದ ಮಾನವ ಜನ್ಮವನ್ನು ವ್ಯರ್ಥ ಮಾಡದೆ, ಸಮಾಜಕ್ಕೆ ಒಳಿತು ಮಾಡುವ ಮೂಲಕ ಸಾರ್ಥಕಪಡಿಸಿಕೊಳ್ಳಬೇಕು,” ಎಂದು ಸಂಸದ ಬಿ.ವೈ. ರಾಘವೇಂದ್ರ ಅವರು ಕರೆ ನೀಡಿದರು. ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಮಹಾಶಿವರಾತ್ರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈಶ್ವರಿಯ ವಿಶ್ವವಿದ್ಯಾಲಯದ ಸದಸ್ಯರ ಆಧ್ಯಾತ್ಮಿಕ ಜೀವನಶೈಲಿ ಮತ್ತು ಶಿಸ್ತು ಇಡೀ ಸಮಾಜಕ್ಕೆ ಮಾದರಿಯಾಗಿದೆ. ಉತ್ತಮ ಜೀವನಶೈಲಿಯು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ವೃದ್ಧಿಸುತ್ತದೆ. ಆರೋಗ್ಯವಂತ ದೇಹವಿದ್ದರೆ ಮಾತ್ರ ನಾವು ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಲು ಸಾಧ್ಯ,” ಎಂದು ಅವರು ಅಭಿಪ್ರಾಯಪಟ್ಟರು.

ಸಂಚಾಲಕರಾದ ಬ್ರಹ್ಮಕುಮಾರಿ ಸ್ನೇಹಕ್ಕ ಶಿವರಾತ್ರಿಯ ಸಂದೇಶ ನೀಡಿ, “ಕಲಿಯುಗದ ಅಜ್ಞಾನದ ಅಂಧಕಾರದಲ್ಲಿ ಶಿವ ಪರಮಾತ್ಮನು ಅವತರಿಸಿದ ನೆನಪೇ ಶಿವರಾತ್ರಿ. ಉಪವಾಸ ಎಂದರೆ ಕೇವಲ ಆಹಾರ ತ್ಯಜಿಸುವುದಲ್ಲ, ಮನಸ್ಸಿನ ಮೂಲಕ ಪರಮಾತ್ಮನ ಸಮೀಪವಿರುವುದು (ಉಪ+ವಾಸ). ರಾತ್ರಿ ಪೂರ್ತಿ ಎಚ್ಚರವಿರುವುದಷ್ಟೇ ಜಾಗರಣೆಯಲ್ಲ, ನಮ್ಮಲ್ಲಿರುವ ಮಾನವೀಯ ಮೌಲ್ಯಗಳನ್ನು ಜಾಗೃತಗೊಳಿಸುವುದೇ ನಿಜವಾದ ಜಾಗರಣೆ,” ಎಂದರು. ಧ್ಯಾನದ ಮೂಲಕ ‘ಆತ್ಮ’ವೆಂಬ ಬ್ಯಾಟರಿಯನ್ನು ಪರಮಾತ್ಮನೊಂದಿಗೆ ಜೋಡಿಸಿ ಶಕ್ತಿ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಭೂಕಾಂತ್, ಚನ್ನವೀರಪ್ಪ ಬಸವರಾಜ್, ಜೆಸಿ ಕ್ಲಬ್ ಅಧ್ಯಕ್ಷ ಶಾಂತರಾಮ್ ಶೇಟ್, ಮಧುಕೇಶ್ವರ್, ವಸಂತಗೌಡ್ರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
News By: Raghu Shikari-7411515737
