ಅಭಿವೃದ್ಧಿಯೇ ಮುಖ್ಯ, ರಾಜಕಾರಣವಲ್ಲ: ಸಚಿವ ಸತೀಶ್ ಜಾರಕಿಹೊಳೆ

ಅಭಿವೃದ್ಧಿಯೇ ಮುಖ್ಯ, ರಾಜಕಾರಣವಲ್ಲ: ಸಚಿವ ಸತೀಶ್ ಜಾರಕಿಹೊಳೆ
Facebook
Twitter
LinkedIn
WhatsApp

​ಶಿಕಾರಿಪುರ: “ನಮ್ಮ ಕೆಲಸಗಳು ಗಟ್ಟಿಯಾಗಿರಬೇಕೆಂದು ನಾವು ಬಯಸುತ್ತೇವೆ. ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಬೆರೆಸದೆ, ಜನಪರ ಕಾರ್ಯಗಳಿಗೆ ನಾವು ಮೊದಲ ಆದ್ಯತೆ ನೀಡುತ್ತೇವೆ” ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳೆ ತಿಳಿಸಿದರು.

​ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಕಲ್ಮನೆ ಗ್ರಾಮದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಶ್ರೀ ವಾಲ್ಮೀಕಿ ಮಹರ್ಷಿ ಹಾಗೂ ಬೇಡರ ಕಣ್ಣಪ್ಪ ಶಿಲಾಮೂರ್ತಿಗಳ ಪ್ರತಿಷ್ಠಾಪನೆ ಮತ್ತು ನೂತನ ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

​ಶಿಕ್ಷಣಕ್ಕೆ ಹೊಸ ಆಯಾಮ: 100 ಶಾಲೆಗಳ ನಿರ್ಮಾಣ
​ಶಿಕ್ಷಣ ಕ್ಷೇತ್ರದ ಕುರಿತು ತಮ್ಮ ದೂರದೃಷ್ಟಿಯನ್ನು ಹಂಚಿಕೊಂಡ ಸಚಿವರು, “ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನನ್ನ ಕ್ಷೇತ್ರದಲ್ಲಿ ಈಗಾಗಲೇ 100 ಸರ್ಕಾರಿ ಶಾಲೆಗಳನ್ನು ನಿರ್ಮಿಸಲಾಗಿದೆ. ಮುಂದಿನ ಎರಡುವರೆ ವರ್ಷಗಳಲ್ಲಿ ಇನ್ನೂ 100 ಶಾಲೆಗಳನ್ನು ಕಟ್ಟಿ ಮಾದರಿಯಾಗುತ್ತೇವೆ. ಸರ್ಕಾರಿ ಶಾಲೆ ಮತ್ತು ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸುವುದೇ ನಮ್ಮ ಗುರಿ,” ಎಂದರು.

​ಮಲೆನಾಡಿಗೆ 400 ಕಾಲುಸಂಕಗಳ ಕೊಡುಗೆ:

​ಮೂಲಸೌಕರ್ಯದ ಬಗ್ಗೆ ಮಾಹಿತಿ ನೀಡಿದ ಅವರು, ಕಳೆದ ಎರಡುವರೆ ವರ್ಷಗಳಲ್ಲಿ ಮಲೆನಾಡು ಭಾಗದಲ್ಲಿ ಸುಮಾರು 400 ಕಾಲುಸಂಕಗಳನ್ನು ನಿರ್ಮಿಸಲಾಗಿದೆ. ಶಿಕಾರಿಪುರ ತಾಲೂಕಿಗೆ ಎಷ್ಟು ಕಾಲುಸಂಕಗಳು ಬೇಕೋ ಅಷ್ಟು ನೀಡಲು ಸರ್ಕಾರ ತಯಾರಿದೆ ಎಂದು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಕಲ್ಮನೆ ಗ್ರಾಮದ ಪ್ರೌಢಶಾಲೆಗೆ ಎರಡು ನೂತನ ಕೊಠಡಿಗಳನ್ನು ಮಂಜೂರು ಮಾಡಿರುವುದಾಗಿ ತಿಳಿಸಿದರು.

​ಪಕ್ಷಭೇದ ಮರೆತು ಅಭಿವೃದ್ಧಿ
​ಸಂಸದ ಬಿ.ವೈ. ರಾಘವೇಂದ್ರ ಅವರ ಕೋರಿಕೆಯಂತೆ ಹೆಗ್ಗೇರಿಯ ಕೆರೆ ಏರಿಯ ಕಾಮಗಾರಿಗೆ ಆದ್ಯತೆ ನೀಡುವುದಾಗಿ ಸಚಿವರು ಹೇಳಿದರು. ಇದೇ ವೇಳೆ, ಶಿಕಾರಿಪುರದ ಕೊಟ್ರಳ್ಳಿ ಬಳಿಯ ಟೋಲ್ ಗೇಟ್ ತೆಗೆಯುವಂತೆ ಸಂಸದರು ಮನವಿ ಮಾಡಿದಾಗ, “ಇದು ನಿಮ್ಮ ಸರ್ಕಾರ ಇದ್ದಾಗ ಆಗಿದ್ದು, ಆದರೂ ಮುಂದಿನ ದಿನಗಳಲ್ಲಿ ಈ ಬಗ್ಗೆ ಗಂಭೀರವಾಗಿ ಪರಿಶೀಲನೆ ನಡೆಸಲಾಗುವುದು,” ಎಂದು ಮಾರ್ಮಿಕವಾಗಿ ಉತ್ತರಿಸಿದರು.

ಕಾರ್ಯಕ್ರಮದಲ್ಲಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಪುರಿ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಸಂಸದ ಬಿ.ವೈ. ರಾಘವೇಂದ್ರ,ಅಲೆಮಾರಿ ನಿಗಮದ ಅಧ್ಯಕ್ಷೆ ಪಲ್ಲವಿ,ರಾಜ್ಯ ಕೃಷಿಕ ಸಮಾಜದ ಅಧ್ಯಕ್ಷರಾದ ನಗರದ ಮಹಾದೇವಪ್ಪ, ಗ್ಯಾರಂಟಿ ಸಮಿತಿ ಅಧ್ಯಕ್ಷ ನಾಗರಾಜ್ ಗೌಡ,ಮುಖಂಡರಾದ ಬಿ.ಕೆ ಮಂಜಪ್ಪ,ಗೋಣಿ ಮಾಲತೇಶ್, ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಭಕ್ತಾದಿಗಳು ಇದ್ದರು.

News By: Raghu Shikari-7411515737