ಹೆಸರುಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ ಎಂದು ಘೋಷಣೆ : ಈಶ್ವರ ಖಂಡ್ರೆ

ಕಾಡ್ಗಿಚ್ಚು ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮವಹಿಸಲು ಈಶ್ವರ ಖಂಡ್ರೆ ಸೂಚನೆ
Facebook
Twitter
LinkedIn
WhatsApp

ಬೆಂಗಳೂರು: ಭವಿಷ್ಯದ ದೃಷ್ಟಿಯಿಂದ ಬೆಂಗಳೂರಿಗೆ ಅತ್ಯಾವಶ್ಯಕವಾಗಿರುವ ಹೆಸರಘಟ್ಟ ಕೆರೆ ಮತ್ತು ಸುತ್ತಲಿನ ಪ್ರದೇಶವನ್ನು ‘ಗ್ರೇಟರ್ ಹೆಸರುಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು’ ಎಂದು ಘೋಷಿಸಿದ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟದ ಎಲ್ಲ ಸಹೋದ್ಯೋಗಿಗಳಿಗೆ ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ಧನ್ಯವಾದ ಅರ್ಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 133 ಪ್ರಭೇದದ ಪಕ್ಷಿಗಳು, 40 ಸ್ಥಳೀಯ ಹಾಗೂ ನೈಸರ್ಗಿಕ ಸಸ್ಯಗಳು ಮತ್ತು ಚಿರತೆ, ತೋಳ, ಕಾಡುಪಾಪ ಮೊದಲಾದ ವನ್ಯಜೀವಿಗಳಿಗೆ ಆಶ್ರಯತಾಣವಾದ ಈ ಕಾನನ ಮತ್ತು ಹುಲ್ಲುಗಾವಲು ಪ್ರದೇಶದ ಸಂರಕ್ಷಣೆ ತಮ್ಮ ಆದ್ಯತೆಯ ವಿಷಯವಾಗಿತ್ತು ಎಂದು ಹೇಳಿದರು.
ಈ ಪ್ರದೇಶದಲ್ಲಿ ಹೆಸರಘಟ್ಟ ಕೆರೆ, ಬ್ಯಾತ ಕೆರೆ ಸೇರಿದಂತೆ ಹಲವು ಕೆರೆಗಳಿದ್ದು ವಲಸೆ ಹಕ್ಕಿಗಳ ಸಂತಾನೋತ್ಪತ್ತಿಯ ತಾಣವೂ ಆಗಿದೆ. ಬೆಂಗಳೂರು ನಗರದ ಜನತೆಯ ನೀರಿನ ಅವಶ್ಯಕತೆ ಪೂರೈಸುತ್ತಿದ್ದ ಹೆಸರಘಟ್ಟ ಕೆರೆ ಭವಿಷ್ಯದಲ್ಲೂ ರಾಜಧಾನಿಯ ಪ್ರಮುಖ ಜಲ ಮೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಬೆಂಗಳೂರು ನಗರ ಜಿಲ್ಲೆ ಯಲಹಂಕ ಉತ್ತರ ತಾಲೂಕಿನ ಒಟ್ಟು 5678.32 ಎಕರೆ ಪ್ರದೇಶವನ್ನು ವನ್ಯಜೀವಿ ಸಂರಕ್ಷಣಾ ಅಧಿನಿಯಮ 1972ರ ಕಲಂ 36(ಎ) ಅನ್ವಯ ‘ಗ್ರೇಟರ್ ಹೆಸರುಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು’ ಎಂದು ಘೋಷಿಸಲಾಗಿದ್ದು, ಈಗ ಇಡೀ ಪ್ರದೇಶ ಸುರಕ್ಷಿತವಾಗಿರುತ್ತದೆ ಎಂದರು.

ಕಳೆದ ಅಕ್ಟೋಬರ್ 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿಯ ಸಭೆಯಲ್ಲಿ ‘ಗ್ರೇಟರ್ ಹೆಸರುಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು’ ಎಂದು ಘೋಷಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿತ್ತು. ನಿನ್ನೆ ಸಚಿವ ಸಂಪುಟ ಸಭೆ ಇದಕ್ಕೆ ಅಧಿಕೃತ ಮುದ್ರೆ ಒತ್ತಿದೆ ಎಂದು ತಿಳಿಸಿದರು.

ನೈಸರ್ಗಿಕ ಹುಲ್ಲುಗಾವಲಿನ ರಕ್ಷಣೆ:
ಈ ಘೋಷಣೆಯಿಂದ ಅಪರೂಪದ ನೈಸರ್ಗಿಕ ಹುಲ್ಲುಗಾವಲಿನ ಸಂರಕ್ಷಣೆ ಆಗಲಿದೆ ಎಂದ ಈಶ್ವರ ಖಂಡ್ರೆ, ಪಕ್ಷಿ ಮತ್ತು ಕೀಟಗಳ ಸಂರಕ್ಷಣೆಗೆ ಹುಲ್ಲುಗಾವಲಿನ ರಕ್ಷಣೆ ಅತ್ಯಗತ್ಯ. ಬೆಂಗಳೂರಿನೊಳಗೇ ಇರುವ ಇಂತಹ ಸುಂದರ ಹುಲ್ಲುಗಾವಲನ್ನು ರಕ್ಷಿಸಲು ತಾವು ಎಲ್ಲ ಒತ್ತಡಗಳನ್ನೂ ಮೀರಿ ನಿರ್ಧಾರ ಕೈಗೊಂಡಿದ್ದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸ್ಥಳೀಯರಿಗೆ ತೊಡಕಿಲ್ಲ:
‘ಗ್ರೇಟರ್ ಹೆಸರುಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು’ ಎಂದು ಘೋಷಣೆ ಮಾಡಿರುವುದರಿಂದ ಸ್ಥಳೀಯರಿಗೆ ಯಾವುದೇ ತೊಡಕಾಗುವುದಿಲ್ಲ. ಆದರೆ ಈ ಘೋಷಣೆ ಅತ್ಯಮೂಲ್ಯವಾದ ಭೂಮಿಯ ಒತ್ತುವರಿ ಮತ್ತು ಅಪರೂಪದ ಪಕ್ಷಿ, ಪ್ರಾಣಿಗಳ ಕಳ್ಳಬೇಟೆಯನ್ನು ನಿಯಂತ್ರಿಸುತ್ತದೆ ಎಂದು ಹೇಳಿದರು.
5010 ಎಕರೆಯಿಂದ 5678 ಎಕರೆಗೆ

ಹೆಚ್ಚಳ:
ಕಳದ ಅಕ್ಟೋಬರ್ ನಲ್ಲಿ ವನ್ಯಜೀವಿ ಮಂಡಳಿಯ ಅನುಮೋದನೆ ಬಳಿಕ ಇಡೀ ಪ್ರದೇಶದ ವಾಸ್ತವ ಮೋಜಣಿ ನಡೆಸಿ ನಕ್ಷೆ ತಯಾರಿಸಲು ಸೂಚಿಸಲಾಗಿತ್ತು, ಸರ್ವೆಯಲ್ಲಿ 5010 ಎಕರೆಗೆ ಬದಲಾಗಿ 5678.32 ಎಕರೆ ಪ್ರದೇಶವಿರುವುದು ಖಾತ್ರಿಯಾಯಿತು. ಈಗ ಇಡೀ ಪ್ರದೇಶವನ್ನು ಸಂರಕ್ಷಿತ ಮೀಸಲು ಎಂದು ಘೋಷಿಸಲಾಗಿದೆ ಎಂದೂ ಈಶ್ವರ ಖಂಡ್ರೆ ತಿಳಿಸಿದರು.