ಶಿಕಾರಿಪುರ: ತಾಲೂಕಿನ ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮಗಳಲ್ಲಿ ಚಿರತೆ ದಾಳಿ ಮುಂದುವರಿದಿದ್ದು, ಕಳೆದ 24 ಗಂಟೆಗಳಲ್ಲಿ ಇಬ್ಬರು ರೈತರು ಗಾಯಗೊಂಡಿದ್ದಾರೆ. ಈ ಘಟನೆಗಳಿಂದಾಗಿ ಅಡಗಂಟಿ ಮತ್ತು ತಡಸನಹಳ್ಳಿ ಭಾಗದ ರೈತರಲ್ಲಿ ತೀವ್ರ ಭೀತಿ ಆವರಿಸಿದೆ.
ಘಟನೆಯ ವಿವರ:
ಅಡಗಂಟಿ ಗ್ರಾಮದ ನಿವಾಸಿ ಸುದೀಪ್ (24) ಎಂಬುವವರು ಶುಕ್ರವಾರ ಸಂಜೆ ತಮ್ಮ ಜಮೀನಿನಲ್ಲಿ ಮೇವು ಕೊಯ್ಯುತ್ತಿದ್ದಾಗ ಚಿರತೆ ಏಕಾಏಕಿ ದಾಳಿ ನಡೆಸಿದೆ. ಘಟನೆಯಲ್ಲಿ ಮೈಕೈಗೆ ತರಚಿದ ಗಾಯಗಳಾಗಿದ್ದು, ಅವರನ್ನು ಶಿರಾಳಕೊಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಸದ್ಯ ಶಿವಮೊಗ್ಗದ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

ಮತ್ತೊಂದು ಘಟನೆಯಲ್ಲಿ, ಶನಿವಾರ ಬೆಳಿಗ್ಗೆ ತಡಸನಹಳ್ಳಿ ಗ್ರಾಮದ ಮೃತ್ಯುಂಜಯ (37) ಎಂಬುವವರು ಮೇವು ತರಲು ಹೋಗುತ್ತಿದ್ದಾಗ ಅಡಗಂಟಿ ಮತ್ತು ತಡಸನಹಳ್ಳಿ ಗ್ರಾಮಗಳ ಮಧ್ಯೆ ಚಿರತೆ ದಾಳಿ ಮಾಡಿದೆ. ಇವರಿಗೂ ಗಾಯಗಳಾಗಿದ್ದು, ಶಿರಾಳಕೊಪ್ಪದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಗಲು ಹೊತ್ತಿನಲ್ಲೇ ಚಿರತೆ ಪ್ರತ್ಯಕ್ಷವಾಗಿ ದಾಳಿ ಮಾಡುತ್ತಿರುವುದರಿಂದ ಕೃಷಿ ಚಟುವಟಿಕೆಗಳಿಗೆ ತೆರಳಲು ರೈತರು ಆತಂಕ ಪಡುತ್ತಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ದಾಳಿ ನಡೆಸುತ್ತಿರುವ ಚಿರತೆಯನ್ನು ಸೆರೆಹಿಡಿಯಲು ಮುಂದಾಗಬೇಕಾಗಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
News By: Raghu Shikari-7411515737