ಶಿಕಾರಿಪುರದಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟನೆ:ಹಸಿವು ಮುಕ್ತ ಸಮಾಜವೇ ಕಾಂಗ್ರೆಸ್ ಗುರಿ; ಸಚಿವ ಮಧು ಬಂಗಾರಪ್ಪ

ಶಿಕಾರಿಪುರದಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟನೆ:ಹಸಿವು ಮುಕ್ತ ಸಮಾಜವೇ ಕಾಂಗ್ರೆಸ್ ಗುರಿ; ಸಚಿವ ಮಧು ಬಂಗಾರಪ್ಪ
Facebook
Twitter
LinkedIn
WhatsApp

​ಶಿಕಾರಿಪುರ: ಕಾಂಗ್ರೆಸ್ ಪಕ್ಷವು ಅಧಿಕಾರಕ್ಕಿಂತಲೂ ಬಡವರ ಮತ್ತು ಹಸಿದವರ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡುತ್ತಾ ಬಂದಿದೆ. ಇಂದಿರಾ ಗಾಂಧಿಯವರ ಕಾಲದಿಂದಲೂ ಹಸಿವು ಮುಕ್ತ ಸಮಾಜ ನಿರ್ಮಾಣ ಮಾಡುವುದು ನಮ್ಮ ಪಕ್ಷದ ಮೂಲ ಮಂತ್ರವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

​ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ‘ಇಂದಿರಾ ಕ್ಯಾಂಟಿನ್’ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಚುನಾವಣಾ ಪೂರ್ವದಲ್ಲಿ ಜನರಿಗೆ ನೀಡಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಇದು ಕೇವಲ ರಾಜಕೀಯ ಗಿಮಿಕ್ ಅಲ್ಲ, ಬದಲಿಗೆ ಕಾಂಗ್ರೆಸ್ ಸರ್ಕಾರವು ಉಳಿಸಿಕೊಂಡು ಬಂದಿರುವ ನಿಜವಾದ ಮಾನವೀಯ ಮೌಲ್ಯಗಳ ಸಂಕೇತ. 2013ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾರಿಗೆ ತಂದ ‘ಅನ್ನಭಾಗ್ಯ’ ಯೋಜನೆ ಇಂದಿಗೂ ಬಡವರ ಪಾಲಿನ ಆಸರೆಯಾಗಿದೆ. ಶಾಲೆಗಳಲ್ಲಿ ಬಿಸಿಊಟ ಹಾಗೂ ಮೊಟ್ಟೆ ನೀಡುವ ಮೂಲಕ ಮಕ್ಕಳ ಪೌಷ್ಟಿಕಾಹಾರಕ್ಕೂ ಹೆಚ್ಚಿನ ಒತ್ತು ನೀಡಲಾಗುತ್ತಿದೆ” ಎಂದರು.

ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ಕೊಡುಗೆಗಳನ್ನು ಸ್ಮರಿಸಿದ ಸಚಿವರು, “ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಿದ್ದು, ಭೂರಹಿತರಿಗೆ ಭೂಮಿ ಮಂಜೂರು ಮಾಡಿದ್ದು ಹಾಗೂ ಗ್ರಾಮೀಣ ಕೃಪಾಂಕದಂತಹ ಐತಿಹಾಸಿಕ ತೀರ್ಮಾನಗಳು ಬಂಗಾರಪ್ಪನವರ ಬಡವರ ಪರ ಕಾಳಜಿಯನ್ನು ಎತ್ತಿ ತೋರಿಸುತ್ತವೆ. ಅವರ ಆಶಯದಂತೆಯೇ ನಾವು ಕೆಲಸ ಮಾಡುತ್ತಿದ್ದೇವೆ” ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ಧೋರಣೆಯನ್ನು ಟೀಕಿಸಿದ ಅವರು, “ಕೇಂದ್ರ ಸರ್ಕಾರವು ಬಡವರಿಗಾಗಿ ಯಾವುದೇ ಸಕಾರಾತ್ಮಕ ಕಾರ್ಯಕ್ರಮಗಳನ್ನು ರೂಪಿಸಿಲ್ಲ. ಸಿಲಿಂಡರ್ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಜೀವನ ನಡೆಸುವುದು ದುಸ್ತರವಾಗಿದೆ. ಅಡುಗೆ ಅನಿಲ ಸಿಗದೆ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ” ಎಂದು ಆರೋಪಿಸಿದರು.

ಪಟ್ಟಣದ ನಿರ್ಗತಿಕರು, ಕೂಲಿ ಕಾರ್ಮಿಕರು ಮತ್ತು ಸಾರ್ವಜನಿಕರು ಈ ಕ್ಯಾಂಟಿನ್ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು. ಕೇವಲ ₹5ಕ್ಕೆ ತಿಂಡಿ ಹಾಗೂ ₹10ಕ್ಕೆ ಗುಣಮಟ್ಟದ ಊಟ ಸಿಗಲಿದೆ. ಅಗತ್ಯ ಇರುವ ಪ್ರತಿಯೊಬ್ಬರಿಗೂ ಇದರ ಲಾಭ ತಲುಪಬೇಕು” ಎಂದು ಸಚಿವರು ಮನವಿ ಮಾಡಿದರು.

​ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ವಿರೇಶ್, ತಹಶೀಲ್ದಾರ್ ವಾಣಿ, ಪುರಸಭೆ ಮುಖ್ಯಾಧಿಕಾರಿ ಭರತ್, ವಿವಿಧ ಜನಪ್ರತಿನಿಧಿಗಳು ಹಾಗೂ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದರು.

News By: Raghu Shikari-7411515737