ಶಿವಮೊಗ್ಗ ರೇಡಿಯೋ ಇಂದಿಗೂ ಅತ್ಯಂತ ವಿಶ್ವಾಸಾರ್ಹ ಮತ್ತು ಪರಿಣಾಮಕಾರಿ ಸಂವಹನ ಮಾಧ್ಯಮವಾಗಿದ್ದು, ಭದ್ರಾವತಿ ಆಕಾಶವಾಣಿಗೆ ಹೈ-ಟೆಕ್ ಎಫ್.ಎಂ ಪ್ರೇಷಕ ಅಳವಡಿಸುವ ಮೂಲಕ ಕಟ್ಟಕಡೆಯ ವ್ಯಕ್ತಿಯನ್ನು ತಲುಪುವ ದೃಢ ಹೆಜ್ಜೆ ಇಡಲಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಎಲ್. ಮುರುಗನ್ ತಿಳಿಸಿದರು.
ಶಿವಮೊಗ್ಗ ನಗರದ ವಿದ್ಯಾನಗರದಲ್ಲಿ ಗುರುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಭದ್ರಾವತಿ ಆಕಾಶವಾಣಿಯ ನೂತನ 10 ಕಿಲೋ ವ್ಯಾಟ್ ಸಾಮರ್ಥ್ಯದ ಎಫ್.ಎಂ. ಪ್ರೇಷಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೋಟಿ ಜನರಿಗೆ ಶ್ರವಣಾನಂದ ಭದ್ರಾವತಿ ಆಕಾಶವಾಣಿಗೆ ಇದೊಂದು ವಿಶೇಷ ಉಡುಗೊರೆ. ಈ ನೂತನ ತಂತ್ರಜ್ಞಾನದಿಂದಾಗಿ ಶಿವಮೊಗ್ಗ ಸೇರಿದಂತೆ ಸುತ್ತಮುತ್ತಲಿನ 8 ಜಿಲ್ಲೆಗಳ ಸುಮಾರು 1 ಕೋಟಿ ಜನರಿಗೆ ಸ್ಪಷ್ಟವಾದ ರೇಡಿಯೋ ಸಂಕೇತಗಳು ಲಭ್ಯವಾಗಲಿವೆ.
ದೇಶದ ಶೇ 92ರಷ್ಟು ಭಾಗವನ್ನು ತಲುಪುತ್ತಿರುವ ರೇಡಿಯೋ, ಆಧುನಿಕ ಕಾಲದಲ್ಲೂ ತನ್ನ ಪ್ರಾಮುಖ್ಯತೆ ಉಳಿಸಿಕೊಂಡಿದೆ’ ಎಂದು ಸಚಿವರು ಬಣ್ಣಿಸಿದರು.ಕೇಂದ್ರ ಸರ್ಕಾರವು ಡಿಜಿಟಲ್ ಮೂಲಸೌಕರ್ಯ ವೃದ್ಧಿಗಾಗಿ ₹2,000 ಕೋಟಿ ವ್ಯಯಿಸುತ್ತಿದ್ದು, ಕಲೆ, ಸಂಸ್ಕೃತಿ ಮತ್ತು ಸಾಫ್ಟ್‌ವೇರ್ ಒಳಗೊಂಡ ‘ಆರೆಂಜ್ ಎಕಾನಮಿ’ಗೆ ಹೆಚ್ಚಿನ ಒತ್ತು ನೀಡುತ್ತಿದೆ. ಇದರ ಭಾಗವಾಗಿ 25 ಸಾವಿರ ಶಾಲೆಗಳಿಗೆ ‘ಕ್ರಿಯೇಟಿವ್ ಲ್ಯಾಬ್’ ನೀಡಲಾಗುತ್ತಿದೆ ಎಂದರು.

ವಜ್ರ ಮಹೋತ್ಸವದ ಸಂಭ್ರಮಕ್ಕೆ ಎಫ್.ಎಂ ಕಳೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ‘ಭದ್ರಾವತಿ ಆಕಾಶವಾಣಿಯ ವಜ್ರ ಮಹೋತ್ಸವದ ಸಂದರ್ಭದಲ್ಲೇ ಈ ಎಫ್.ಎಂ ಸೌಲಭ್ಯ ದೊರೆತಿರುವುದು ಸಂತಸದ ವಿಷಯ. 2024ರ ಜನವರಿಯಲ್ಲಿ ಇದಕ್ಕೆ ಅಡಿಗಲ್ಲು ಹಾಕಲಾಗಿತ್ತು, ಈಗ ಅದು ಸಾಕಾರಗೊಂಡಿದೆ. ವಿದ್ಯಾನಗರದ 150 ಮೀಟರ್ ಎತ್ತರದ ದೂರದರ್ಶನ ಟವರ್ ಬಳಸಿಕೊಂಡು 101.4 ಮೆಗಾ ಹರ್ಟ್ಸ್ (MHz) ತರಂಗಾಂತರದಲ್ಲಿ ಪ್ರಸಾರ ಆರಂಭವಾಗಲಿದೆ’ ಎಂದು ಮಾಹಿತಿ ನೀಡಿದರು.

ಪಾರ್ಕ್‌ಗಳಲ್ಲಿ ರೇಡಿಯೋ: ನಗರದ ಪ್ರಮುಖ ಉದ್ಯಾನವನಗಳಲ್ಲಿ (ಪಾರ್ಕ್) ರೇಡಿಯೋ ಸ್ಟೇಷನ್ ಅಳವಡಿಸಲು ಕೇಂದ್ರ ಸಚಿವರು ಒಪ್ಪಿಗೆ ಸೂಚಿಸಿರುವುದು ಶ್ಲಾಘನೀಯ ಎಂದು ಸಂಸದರು ಇದೇ ವೇಳೆ ತಿಳಿಸಿದರು.
News by: Raghu Shikari-7411515737
