ಶಿಕಾರಿಪುರ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ 84ನೇ ಜನ್ಮದಿನದ ಅಂಗವಾಗಿ ಫೆಬ್ರವರಿ 27 ರಂದು ಪಟ್ಟಣದ ಕುಮದ್ವತಿ ಕಾಲೇಜಿನ ಏಕಲವ್ಯ ಕ್ರೀಡಾಂಗಣದಲ್ಲಿ ಅದ್ಧೂರಿ ಸಮಾರಂಭ ಆಯೋಜಿಸಲಾಗಿದೆ.
ಈ ಸಂಭ್ರಮಕ್ಕೆ ಮೆರುಗು ನೀಡಲು ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ತಂಡದವರಿಂದ ‘ಸಂಗೀತ ಸುಧೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿ.ಎಸ್. ಯಡಿಯೂರಪ್ಪ ಅಭಿಮಾನಿಗಳ ಬಳಗದ ಸಂಚಾಲಕ ಕೆ.ಎಸ್. ಗುರುಮೂರ್ತಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 4 ಗಂಟೆಗೆ ‘ಸಮಾಜ ಗೌರವ ಸಮರ್ಪಣೆ’ ಕಾರ್ಯಕ್ರಮ ನಡೆಯಲಿದೆ. ರಾಜಕೀಯ ಕ್ಷೇತ್ರದಲ್ಲಿ ಕಳೆದ 50 ವರ್ಷಗಳಿಂದ ಯಡಿಯೂರಪ್ಪ ಅವರು ಸಲ್ಲಿಸಿರುವ ಸುದೀರ್ಘ ಸೇವೆಯನ್ನು ಸ್ಮರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ಸರ್ವಧರ್ಮೀಯರಿಂದ ಗೌರವ:
ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ ಹಾಗೂ ಶಿಕಾರಿಪುರ ಕ್ಷೇತ್ರದ ಶಾಸಕರಾಗಿ ಶಿಕ್ಷಣ, ಆರೋಗ್ಯ ಮತ್ತು ನೀರಾವರಿ ಯೋಜನೆಗಳಿಗೆ ಕಾಯಕಲ್ಪ ನೀಡಿದ ಯಡಿಯೂರಪ್ಪ ಅವರಿಗೆ ಎಲ್ಲ ಸಮುದಾಯದ ಮುಖಂಡರು ಸೇರಿ ಗೌರವ ಸಲ್ಲಿಸಲಿದ್ದಾರೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಂಸದ ಬಿ.ವೈ. ರಾಘವೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಹಲವು ರಾಜಕೀಯ ಮುಖಂಡರು ಪಾಲ್ಗೊಳ್ಳಲಿದ್ದಾರೆ.
ಆನಂದಪುರ ಮುರುಘಾ ಮಠದ ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ ಹಾಗೂ ವಿವಿಧ ಮಠಾಧೀಶರು ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
News By: Raghu Shikari-7411515737