ಬೆಂಗಳೂರು: ವಿಧಾನಸೌಧದ ಒಳಗೆ ಮಾಧ್ಯಮ ಪ್ರತಿನಿಧಿಗಳ ಪ್ರವೇಶಕ್ಕೆ ನಿರ್ಬಂಧ ಹೇರಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಧಾರ ‘ಪ್ರಜಾಪ್ರಭುತ್ವ ವಿರೋಧಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರವಾಗಿ ಖಂಡಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಈ ಕ್ರಮವು ಪಾರದರ್ಶಕ ಆಡಳಿತಕ್ಕೆ ಮಾರಕವಾಗಿದೆ. ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
’ಇದು ಅಸಂವಿಧಾನಿಕ ನಡೆ’
”ಮಾಧ್ಯಮಗಳನ್ನು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎಂದು ಗೌರವಿಸಲಾಗುತ್ತದೆ. ಆದರೆ, ಕಾಂಗ್ರೆಸ್ ಸರ್ಕಾರವು ಮಾಧ್ಯಮಗಳ ಹಕ್ಕುಗಳನ್ನು ಹತ್ತಿಕ್ಕುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕಿಸುತ್ತಿದೆ. ತನ್ನ ವೈಫಲ್ಯಗಳನ್ನು ಮುಚ್ಚಿಡಲು ಸರ್ಕಾರ ಇಂತಹ ಹಾದಿ ತುಳಿದಿದೆ” ಎಂದು ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ಸಚಿವರ ಕಚೇರಿಗಳಲ್ಲಿ ಕಳ್ಳತನವಾಗುತ್ತಿದೆ ಎಂಬ ಕಾರಣ ನೀಡಿ ಮಾಧ್ಯಮಗಳನ್ನು ಹೊರಗಿಟ್ಟಿರುವುದು ಹಾಸ್ಯಾಸ್ಪದ. “ಕಳ್ಳತನ ತಡೆಯಲು ಭದ್ರತೆಯನ್ನು ಬಲಪಡಿಸಬೇಕೇ ಹೊರತು, ಸುದ್ದಿಗಾರರನ್ನು ತಡೆಯುವುದಲ್ಲ. ಸತ್ಯವನ್ನು ಹೊರಹಾಕುವ ಮಾಧ್ಯಮಗಳ ಬಾಯಿ ಮುಚ್ಚಿಸಲು ಸರ್ಕಾರ ಇಂತಹ ಕುಂಟು ನೆಪಗಳನ್ನು ಹುಡುಕುತ್ತಿದೆ” ಎಂದು ಅವರು ಕುಟುಕಿದರು.

ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಪ್ರಸ್ತಾಪ:
ವಿಧಾನಸೌಧದಲ್ಲಿ ಈ ಹಿಂದೆ ನಡೆದ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆಯ ಪ್ರಕರಣವನ್ನು ಪ್ರಸ್ತಾಪಿಸಿದ ಅವರು, “ವಿಧಾನಸೌಧದ ಆವರಣದಲ್ಲಿ ದೇಶದ್ರೋಹಿ ಘೋಷಣೆ ಕೂಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಾಧ್ಯವಾಗದ ಈ ಅಯೋಗ್ಯ ಸರ್ಕಾರ, ಈಗ ಸುದ್ದಿಗಾರರ ಮೇಲೆ ಶೌರ್ಯ ಪ್ರದರ್ಶಿಸುತ್ತಿದೆ” ಎಂದು ಟೀಕಿಸಿದರು.
ಹೋರಾಟದ ಎಚ್ಚರಿಕೆ
”ಬೆಳಗಾವಿ ಅಧಿವೇಶನದ ವೇಳೆ ತಂದ ದ್ವೇಷ ಭಾಷಣ ನಿಯಂತ್ರಣ ಕಾಯ್ದೆಯಿಂದ ಹಿಡಿದು ಇಂದಿನ ನಿರ್ಬಂಧದವರೆಗೆ ಸರ್ಕಾರದ ಪ್ರತಿ ನಿರ್ಧಾರವೂ ಜನವಿರೋಧಿಯಾಗಿದೆ. ಕೂಡಲೇ ನಿರ್ಬಂಧ ಹಿಂಪಡೆಯದಿದ್ದರೆ ಬಿಜೆಪಿ ವತಿಯಿಂದ ರಾಜ್ಯಾದ್ಯಂತ ಬಲವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಸಿದರು.
News By: Raghu Shikari-7411515737
