ರಾಜ್ಯದ ವಿವಿಧೆಡೆ ಲೋಕಾಯುಕ್ತ ದಾಳಿ ನಡೆದಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಗದಗ ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ಗಂಗಾಧರ ಶಿರೋಳ ಅವರ ಮನೆ ಸೇರಿದಂತೆ ಅವರ ಸಂಬಂಧಿಕರ ಮನೆ ಮೇಲೆ ಲೋಕಾಯುಕ್ತ ಪೊಲೀಸರು ಇಂದು ದಾಳಿ ಮಾಡಿದ್ದಾರೆ.
ಗದಗ ನಗರದ ಹುಡ್ಕೋ ಕಾಲೊನಿಯ ಗಂಗಾಧರ ಶಿರೋರ ಅವರ ಮನೆ ಹಾಗೂ ನಗರದ ಸಂಬಂಧಿಕರ ಮತ್ತು ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ಹಾಗೂ ಹಾವೇರಿ ಜಿಲ್ಲೆಯಲ್ಲಿ ಅವರ ಸಂಬಧಿಕರ ಮನೆ ಮೇಲೆ ಲೋಕಾಯುಕ್ತ ಪೋಲಿಸರು ಏಕ ಕಾಲಕ್ಕೆ ದಾಳಿ ಮಾಡಿ, ದಾಖಲೆಗಳ ಪರಿಶೀಲನೆ ನಡೆಸಿದರು.
ಲೋಕಾಯುಕ್ತ ಎಸ್ಪಿ ಹನಮಂತರಾಯ, ಡಿವೈಎಸ್ಪಿ ವಿಜಯ ಬಿರಾದಾರ ನೇತೃತ್ವದಲ್ಲಿ ದಾಳಿ ನಡೆಯಿತು. ಲೋಕೊಪಯೋಗಿ ಇಲಾಖೆಯ ಸೆಕ್ಷನ್ ಎಂಜಿನಿಯರ್ ಅಮೀನ್ ಮುಕ್ತಾರ್ ಅವರ ಕಲಬುರುಗಿ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇದೇ ವೇಳೆ ಹೊಸಪೇಟೆ ಲೋಕಾಯುಕ್ತ ಇನ್ಸ್‌ಪೆಕ್ಟರ್ ಅಮರೇಶ್ ಹುಬ್ಬಳ್ಳಿ ಅವರ ನೇತೃತ್ವದ ತಂಡ ಬಳ್ಳಾರಿಯಲ್ಲಿರುವ ಲೋಕೊಪಯೋಗಿ ಇಲಾಖೆಯ ವೃತ್ತ ಕಚೇರಿ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದೆ.