ತಿದ್ದುಪಡಿಯೊಂದಿಗೆ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ 2024ಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ

ತಿದ್ದುಪಡಿಯೊಂದಿಗೆ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ 2024ಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ
Facebook
Twitter
LinkedIn
WhatsApp

ಬೆಂಗಳೂರು:ಸಣ್ಣಪುಟ್ಟ ತಿದ್ದುಪಡಿಯೊಂದಿಗೆ ‘ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ 2024’ ಅನ್ನು ವಿಧಾನಸಭೆಯಲ್ಲಿ ಗುರುವಾರ ಅಂಗೀಕರಿಸಲಾಯಿತು.

ಉಭಯ ಸದನಗಳಲ್ಲಿ ಅಂಗೀಕಾರ ರೂಪದಲ್ಲಿದ್ದ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ 2024ಕ್ಕೆ ಸಣ್ಣ ತಿದ್ದುಪಡಿ ತಂದಿದ್ದು, ಅದನ್ನು ಪುನರ್ ಪರ್ಯಾಲೋಚಿಸಬೇಕೆಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿಧಾನಸಭೆಯಲ್ಲಿ ಗುರುವಾರ ಮಂಡಿಸಿದರು.

“ಈ ಮಸೂದೆ ವಿಚಾರವಾಗಿ ನಡೆದ ಚರ್ಚೆಯ ವೇಳೆ ಅಶ್ವತ್ಥ್ ನಾರಾಯಣ ಅವರು ಕೈಗಾರಿಕೆಗಳ ಬಗ್ಗೆ ಪ್ರಸ್ತಾಪ ಮಾಡಿದ್ದರು. ನಾನು ಈ ವಿಚಾರವನ್ನು ಕೈಗಾರಿಕಾ ಸಚಿವರೊಂದಿಗೆ ಚರ್ಚೆ ಮಾಡಿದೆ. ಅಂತಿಮವಾಗಿ ಯೋಜನಾ ಪ್ರಾಧಿಕಾರ ಪೂರ್ವಾನುಮತಿ ಆಧಾರದ ಮೇಲೆ ಮಾಸ್ಟರ್ ಪ್ಲಾನ್ ಮಾಡಬೇಕು ಎಂದು ಸೇರಿಸಲಾಗಿದೆ.

ಇಲ್ಲಿ ಕೈಗಾರಿಕೆಗಳು ಬೆಂಗಳೂರು ನಗರದ ಒಳಗೆ ಇದ್ದರೂ ಸ್ಥಳೀಯ ಸಂಸ್ಥೆಗಳ ವಿಶ್ವಾಸದೊಂದಿಗೆ ಮಾಡಬೇಕು ಎಂದು ತಿದ್ದುಪಡಿ ಮಾಡಲಾಗಿದೆ. ಇನ್ನು ವಾರ್ಡ್ ಸಂಖ್ಯೆ ಆಧರಿಸಿ ನಾಮನಿರ್ದೇಶನ ವಿಚಾರವಾಗಿ ಏಳು ಸದಸ್ಯರನ್ನು ಲಾಟರಿ ಮೂಲಕ ಆಯ್ಕೆ ಮಾಡಲು ತೀರ್ಮಾನ ಮಾಡಲಾಗಿದೆ” ಎಂದು ತಿಳಿಸಿದರು. ನಂತರ ಇದನ್ನು ಅಂಗೀಕರಿಸಲಾಯಿತು.