ಕೇಂದ್ರ ಬಜೆಟ್‌ ಮಂಡನೆ ಯಾವ ಕ್ಷೇತ್ರಕ್ಕೆ ಎಷ್ಟು? ಯಾರಿಗೆ ಲಾಭನಷ್ಟ ..?

ಕೇಂದ್ರ ಬಜೆಟ್‌ ಮಂಡನೆ ಯಾವ ಕ್ಷೇತ್ರಕ್ಕೆ ಎಷ್ಟು? ಯಾರಿಗೆ ಲಾಭನಷ್ಟ ..?
Facebook
Twitter
LinkedIn
WhatsApp

ನವದೆಹಲಿ :ಲೋಕಸಭೆಯಲ್ಲಿಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಎನ್‌ಡಿಎ ಸರ್ಕಾರದ ಮೂರನೇ ಅವಧಿಯ ಮೊದಲ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದರು.

ಈ ಬಾರಿಯ ಬಜೆಟ್ ಕೃಷಿ ವಲಯ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ಹೂಡಿಕೆ ವಲಯ ಸೇರಿದಂತೆ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ವಿಶೇಷತೆಗಳನ್ನು ಹೊಂದಿದೆ. ಬಜೆಟ್ ಮಂಡನೆಯ ಆರಂಭದಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಈ ಬಾರಿಯ ಬಜೆಟ್ ಬೆಳವಣಿಗೆಗೆ ಹೊಸ ಶಕ್ತಿ ನೀಡುವ ಒಳಗೊಳ್ಳುವ ಅಭಿವೃದ್ಧಿ ಖಾತ್ರಿಪಡಿಸುವ, ಖಾಸಗಿ ಹೂಡಿಕಯನ್ನು ಉತ್ತೇಜಿಸುವ ಮತ್ತು ಮಧ್ಯಮವರ್ಗದವರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವುದರ ಮೇಲೆ ಕೇಂದ್ರೀಕರಿಸಿದೆ ಎಂದರು.

ಬಜೆಟ್‌ನ ಪ್ರಮುಖ ನಿರ್ಧಾರಗಳಲ್ಲಿ ಸಚಿವರು, 12 ಲಕ್ಷದ ವರೆಗಿನ ಆದಾಯ ಹೊಂದಿರುವವರಿಗೆ ತೆರರಿಗೆ ವಿನಾಯಿತಿಯನ್ನು ಘೋಷಿಸಿದ್ದಾರೆ. ತೆರಿಗೆ ವಿನಾಯಿತಿದಾರರನ್ನು ಪರಿಷ್ಕರಿಸಿರುವ ಹಣಕಾಸು ಸಚಿವರು, 12 ಲಕ್ಷ ರೂಪಾಯಿ ಆದಾಯದವರಿಗೆ ತೆರಿಗೆ ವಿನಾಯಿತಿ ಸೇರಿದಂತೆ ೪ ಲಕ್ಷ ಆದಾಯ ಹೊಂದಿರುವವರಿಗೆ ಯಾವುದೇ ತೆರಿಗೆ ಇರುವುದಿಲ್ಲ. 4ರಿಂದ 8ಲಕ್ಷ ರೂಪಾಯಿಗೆ ಶೇಕಡ 5, 8 ರಿಂದ 12 ಲಕ್ಷ ರೂಪಾಯಿ ಶೇಕಡ 10, 12 ರಿಂದ 16 ಲಕ್ಷ ರೂಪಾಯಿ ಆದಾಯದವರಿಗೆ ಶೇಕಡ 15ರಷ್ಟು ತೆರಿಗೆ, 16 ರಿಂದ 20 ಲಕ್ಷ ಆದಾಯದವರಿಗೆ ಶೇಕಡ 30, 20 ರಿಂದ 24 ಲಕ್ಷ ಆದಾಯದವರಿಗೆ ಶೇಕಡ 24, 24ಕ್ಕಿಂತ ಹೆಚ್ಚಿನ ಆದಾಯದವರಿಗೆ ಶೇಕಡ 30ರಷ್ಟು ತೆರಿಗೆ ಘೋಷಿಸಿದ್ದಾರೆ. ಈ ತೆರಿಗೆ ನೀತಿ ಬದಲಾವಣೆಗಳು ಮಧ್ಯಮವರ್ಗದ ತೆರಿಗೆದಾರರಿಗೆ ಪ್ರಯೋಜನಕಾರಿಯಾಗಲಿವೆ.

ಈ ಬಾರಿಯ ಬಜೆಟ್‌ಗೆ, ಕೃಷಿ, ಎಂಎಸ್‌ಎಂಇ, ಹೂಡಿಕೆ ಮತ್ತು ರಫ್ತು ವಲಯ ಚಾಲಕ ಶಕ್ತಿಯಾಗಿದೆ ಎಂದರು. ಕೃಷಿ ವಲಯಕ್ಕೆ ಈ ಬಜೆಟ್‌ನಲ್ಲಿ ವಿಶೇಷ ಒತ್ತು ನೀಡಲಾಗಿದ್ದು, ಪ್ರಧಾನಮಂತ್ರಿ ಧನ ಧಾನ್ಯ ಕೃಷಿ ಯೋಜನೆಯಡಿ 100 ಕಡಿಮೆ ಇಳುವರಿ ಜಿಲ್ಲೆಗಳನ್ನು ಗುರುತಿಸಿ ಸುಸ್ಥಿರ ಕೃಷಿ ಮತ್ತು ಸಂಗ್ರಹಣೆ ಮೂಲಸೌಕರ್ಯವರ್ಧನೆಗೆ ಒತ್ತು ನೀಡಲಾಗಿದೆ. ಇದರಿಂದ 1.7 ಕೋಟಿ ರೈತರಿಗೆ ಪ್ರಯೋಜನವಾಗಲಿದೆ.

ಗ್ರಾಮೀಣ ಭಾಗದಲ್ಲಿ ರೈತರಿಗೆ ಆರ್ಥಿಕ ನೆರವು ಘೋಷಿಸಲಾಗಿದೆ. ಕಾಟನ್ ಉತ್ಪಾದನೆಗೆ ನೂತನ ಯೋಜನೆ ಘೋಷಣೆ ಮಾಡುವ ಮೂಲಕ ಸುಸ್ಥಿರ ಗುಣಮಟ್ಟದ ಹತ್ತಿ ವಿಧಗಳ ಉತ್ಪಾದನೆಗೆ ಪ್ರೋತ್ಸಾಹದ ಜತೆಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ರೈತರಿಗೆ ನೀಡುವ ಸಾಲದ ಮಿತಿ 3ಲಕ್ಷದಿಂದ 5ಲಕ್ಷಕ್ಕೆ ಏರಿಕೆ ಮಾಡಲಾಗಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಮಂಡಿಸಿದರು.

ಆತ್ಮನಿರ್ಭರತಾ ಯೂರಿಯಾ ಮೂಲಕ ಈಶಾನ್ಯ ಪ್ರದೇಶದಲ್ಲಿ ಮೂರು ಯೂರಿಯಾ ಘಟಕಗಳ ಪುನರಾರಂಭ ಹಾಗೂ ಅಸ್ಸಾಂನ ನಾಮರೂಪ್‌ನಲ್ಲಿ 12.7 ಲಕ್ಷ ಮೆಟ್ರಿಕ್ ಟನ್ ವಾರ್ಷಿಕ ಸಾಮರ್ಥ್ಯದ ಘಟಕ ಸ್ಥಾಪಿಸಲಾಗುವುದು. ಸಣ್ಣ ಉದ್ದಿಮೆಗಳಿಗೆ ಸಾಲ ಖಾತ್ರಿ ೫ ಕೋಟಿಯಿಂದ 10 ಕೋಟಿಯ ವರೆಗೆ ಹಾಗೂ ಮುಂದಿನ 5 ವರ್ಷಗಲ್ಲಿ ಹೆಚ್ಚುವರಿ ಒಂದೂವರೆ ಲಕ್ಷ ಕೋಟಿಗೆ ಏರಿಸಲಾಗಿದೆ.

ಬಿಹಾರದಲ್ಲಿ ಮಖಾನಾ ಬೋರ್ಡ್ ಸ್ಥಾಪನೆ ಮೂಲಕ ಮಖಾನ ಉತ್ಪಾದನೆ ಮತ್ತು ಸಂಸ್ಕರಣೆಗೆ ಉತ್ತೇಜನ ನೀಡಲಾಗಿದೆ. ಗ್ರಾಮೀಣ ಆರ್ಥಿಕತೆಯಲ್ಲಿ ಪ್ರಮುಖ ಭಾಗವಾಗಿರುವ. ಭಾರತೀಯ ಅಂಚೆಯನ್ನು ದೊಡ್ಡ ಭಾರತೀಯ ಲಾಜೆಸ್ಟಿಕ್ ಸಂಸ್ಥೆಯಾಗಿ ಪರಿವರ್ತಿಸಲಾಗುವುದು ಎಂದರು. ಭಾರತದ ರಫ್ತಿಗೆ ಎಂಎಸ್‌ಎಂಇಯಿಂದ 45 ಪ್ರತಿಶತ ಕೊಡುಗೆ ಹರಿದು ಬಂದಿದೆ ಎಂದ ಹಣಕಾಸು ಸಚಿವರು, ಎಂಎಸ್‌ಎಂಇಗಳ ಹೂಡಿಕೆ ಮತ್ತು ಒಟ್ಟಾರೆ ವ್ಯವಹಾರದ ಪ್ರಮಾಣವನ್ನು ಹೆಚ್ಚಿಸಲಾಗುವುದು ಎಂದರು.

ಪಾದರಕ್ಷೆ ಹಾಗೂ ಚರ್ಮ ಉದ್ಯಮಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರತ್ಯೇಕ ಯೋಜನೆಯನ್ನು ಜಾರಿಗೊಳಿಸಲಾಗುವುದು. ಇದರಿಂದ 22 ಲಕ್ಷ ಜನರಿಗೆ ಉದ್ಯೋಗಾವಕಾಶ ದೊರೆಯಲಿದೆ. ಆ ಮೂಲಕ ೪ ಲಕ್ಷ ಕೋಟಿ ವಹಿವಾಟಿಗೆ ದಾರಿ ಮಾಡಿಕೊಡಲಿದ್ದು, 1.1 ಲಕ್ಷ ಕೋಟಿ ರಫ್ತಿಗೆ ಸಹಕಾರಿಯಾಗಲಿದೆ. ಇದರ ಜತೆಗೆ ಭಾರತವನ್ನು ಜಾಗತಿಕ ಆಟಿಕೆಗಳ ಉತ್ಪಾದನಾ ತಾಣವನ್ನಾಗಿ ರೂಪಿಸಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.

ಐಐಟಿಗಳ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. 23 ಐಐಟಿಗಳಲ್ಲಿ ಒಟ್ಟು ವಿದ್ಯಾರ್ಥಿಗಳ ಸಂಖ್ಯೆಯನ್ನು ಶೇಕಡ 100 ರಷ್ಟು ಹೆಚ್ಚಿಸಲಾಗಿದೆ. ಇದು ಕಳೆದ 10 ವರ್ಷಗಳಲ್ಲಿ 65 ಸಾವಿರ ಇದ್ದ ಈ ಸಂಖ್ಯೆ ಈಗ 1.35 ಲಕ್ಷಕ್ಕೆ ಏರಿದೆ. 2018 ರ ನಂತರ ಸ್ಥಾಪಿಸಲಾಗಿರುವ 5 ಐಐಟಿಗಳಲ್ಲಿ ಹೆಚ್ಚುವರಿ ಮೂಲಸೌಕರ್ಯವನ್ನು ನಿರ್ಮಿಸಿ,6 ಸಾವಿರದ 500 ವಿದ್ಯಾರ್ಥಿಗಳಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ಪಿಎಂ ಫೆಲೋಶಿಪ್ ಯೋಜನೆಯಡಿ ಹೆಚ್ಚಿನ ಆರ್ಥಿಕ ನೆರವಿನೊಂದಿಗೆ ಐಐಟಿ ಮತ್ತು ಐಐಎಸ್‌ಸಿ ಗಳಲ್ಲಿ 10 ಸಾವಿರ ಫೆಲೋಶಿಪ್‌ಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಬಿಹಾರದಲ್ಲಿ ರಾಷ್ಟ್ರೀಯ ಆಹಾರ ತಂತ್ರಜ್ಞಾನ ಸಂಸ್ಥೆ ಸ್ಥಾಪಿಸಲಾಗುವುದು, ಮೇಕ್ ಇನ್ ಇಂಡಿಯಾ ಯೋಜನೆಗೆ ಪುಷ್ಠಿ ನೀಡಲು ನೂತನ ರಾಷ್ಟ್ರೀಯ ಉತ್ಪಾದನಾ ಯೋಜನೆಯನ್ನು ಜಾರಿಗೊಳಿಸಲಾಗುವುದು. ಇದು ಸ್ವಚ್ಛ ತಂತ್ರಜ್ಞಾನ ಉತ್ಪಾದನೆಗೂ ಸಹಕಾರಿಯಾಗಲಿದೆ ಎಂದು ಸಚಿವರು ಹೇಳಿದರು.

ಸಕ್ಷಮ್ ಅಂಗನವಾಡಿ ಪೋಷಣ್ 2.0 ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುವುದು. ಇದರಿಂದ ಮಕ್ಕಳು, ಗರ್ಭಿಣಿಯಲು, ಬಾಣಂತಿಯರಿಗೆ ಪ್ರಯೋಜನವಾಗಲಿದೆ. ಮುಂದಿನ ೫ ವರ್ಷಗಳ ಅವಧಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ 50ಸಾವಿರ ಅಟಲ್ ಟಿಂಕರಿಂಗ್ ಲ್ಯಾಬ್‌ಗಳ ಸ್ಥಾಪನೆ, ಪಾಟ್ನಾ ಐಐಟಿಯ ಮೂಲಸೌಕರ್ಯ ಸಮಾರ್ಥ್ಯವೃದ್ಧಿಗೆ ಒತ್ತು ನೀಡಲಾಗಿದೆ.

ಜಿಲ್ಲಾ ಆಸ್ಪತ್ರೆಗಳಲ್ಲಿ ಮುಂದಿನ ಮೂರು ವರ್ಷಗಳಲ್ಲಿ 300 ಡೇ ಕೇರ್ ಕ್ಯಾನ್ಸರ್ ಕೇಂದ್ರಗಳ ಸ್ಥಾಪನೆ ಕುರಿತು ಘೋಷಿಸಿದರು. ಪ್ರಮುಖ ನಿರ್ಧಾರವೊಂದರಲ್ಲಿ ಕ್ಯಾನ್ಸರ್ ಹಾಗೂ ಇತರ ಅತಿವಿರಳ ಕಾಯಿಲೆಗಳ ರೋಗಿಗಳಿಗೆ ತೆರಿಗೆ ರಹಿತ ಔಷಧಿಗಳ ಪಟ್ಟಿಗೆ ಇನ್ನೂ ೩೬ ಔಷಧಿಗಳ ಸೇರ್ಪಡೆಗೊಳಿಸಲಾಗಿದೆ.