ಶಿಕಾರಿಪುರ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವನಿಧಿ ವಿಶೇಷ ನೋಂದಣಿ ಅಭಿಯಾನ ಕೈಗೊಂಡಿದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಜ.20ವರೆಗೆ ಕಾಲೇಜಿನಲ್ಲಿ ಸಹಾಯಕೇಂದ್ರ ಸ್ಥಾಪಿಸಲಾಗಿದೆ.
ಯುವನಿಧಿ ಅರ್ಜಿ ಸಲ್ಲಿಸುವ ಯುವಕ/ಯುವತಿಯರು 2022, 2023 ಹಾಗೂ 2024ರಲ್ಲಿ ಪದವಿ/ ಸ್ನಾತಕೋತ್ತರ ಪದವಿ/ ಡಿಪ್ಲೊಮಾದಲ್ಲಿ ಉತ್ತೀರ್ಣರಾಗಿರಬೇಕು. ಕನಿಷ್ಟ 6 ತಿಂಗಳ ಅವಧಿಯವರೆಗೆ ಸರ್ಕಾರಿ/ಖಾಸಗಿ ಉದ್ಯೋಗ ಹೊಂದಿರಬಾರದು. ಉನ್ನತ ವಿದ್ಯಾಭ್ಯಾಸ ಮುಂದುವರಿಸಿರಬಾರದು ಎಂಬ ನಿಬಂಧನೆಗಳಿವೆ.
ಅರ್ಹ ಯುವಕ/ಯುವತಿಯರು ಕಾಲೇಜಿನ ಪ್ಲೇಸ್‌ಮೆಂಟ್ ಅಧಿಕಾರಿ, ಎಲ್ಲಾ ವಿಭಾಗಗಳ ಮುಖ್ಯಸ್ಥರು, ಸ್ಥಳೀಯ ಸೈಬರ್ ಕೇಂದ್ರಗಳು, ಸೇವಾಸಿಂಧು ಪೋರ್ಟಲ್ ಹಾಗೂ ತಮ್ಮ ಮೊಬೈಲ್ ಮೂಲಕವೂ ನೋಂದಣಿ ಮಾಡಿಕೊಳ್ಳಬಹುದು. ಎಸ್‌ಎಸ್‌ಎಲ್‌ಸಿ/ಪಿಯುಸಿ/ಪದವಿ/ಸ್ನಾತಕೋತ್ತರ ಪದವಿ/ ಡಿಪ್ಲೊಮಾ ಪ್ರಮಾಣ ಪತ್ರ ಹಾಗೂ ಪ್ರತಿ ಮಾಹೆಗೆ ದಿ.1 ರಿಂದ 25 ರೊಳಗೆ ಮಾಸಿಕ ಸ್ವಯಂ ಘೋಷಣೆ ನೀಡುವುದು ಕಡ್ಡಾಯವಾಗಿದೆ ಎಂದು ಶಿಕಾರಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.