ಶಿವಮೊಗ್ಗ: ನಗರದಲ್ಲಿ ಸ್ನೇಹಿತರ ನಡುವೆ ನಡೆದ ಕ್ಷುಲ್ಲಕ ಜಗಳವೊಂದು ಅಂತಿಮವಾಗಿ 16 ವರ್ಷದ ವಿದ್ಯಾರ್ಥಿಯೊಬ್ಬನ ಭೀಕರ ಕೊಲೆಯಲ್ಲಿ ಅಂತ್ಯವಾಗಿದೆ. ಇಲ್ಲಿನ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದಾರುಣ ಘಟನೆ ನಡೆದಿದೆ.
ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದ ಸಂಕೇತ್ (16) ಕೊಲೆಯಾದ ಬಾಲಕ. ಪರೀಕ್ಷೆಗಳು ಹತ್ತಿರವಿರುವ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ವಿಶೇಷ ತರಗತಿ ಮುಗಿಸಿ ಸಂಕೇತ್ ಮನೆಗೆ ಮರಳುತ್ತಿದ್ದನು. ಈ ವೇಳೆ ಶಾಲೆಯಿಂದ ಸ್ವಲ್ಪ ದೂರದಲ್ಲಿ ಸಂಕೇತ್‌ನನ್ನು ಅಡ್ಡಗಟ್ಟಿದ ಮೂರ್ನಾಲ್ಕು ಬಾಲಕರು ಆತನೊಂದಿಗೆ ಜಗಳ ತೆಗೆದಿದ್ದಾರೆ.

ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ಹೋದಾಗ, ಆರೋಪಿ ಬಾಲಕರು ಸಂಕೇತ್‌ನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಕೈಯಿಂದ ಬಲವಾಗಿ ಗುದ್ದಿದ ಪರಿಣಾಮ ಸಂಕೇತ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಯಿತಾದರೂ, ಆತ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾನೆ. ಹಲ್ಲೆ ನಡೆಸಿದವರು ಶಾಲೆಯನ್ನು ಅರ್ಧಕ್ಕೆ ಬಿಟ್ಟಿದ್ದ ಬಾಲಕರು ಎಂದು ಶಂಕಿಸಲಾಗಿದೆ.
ಘಟನೆ ಕುರಿತು ಪ್ರತಿಕ್ರಿಯಿಸಿದ ಶಿವಮೊಗ್ಗ ಎಸ್ಪಿ ನಿಖಿಲ್ ಅವರು, “ಸ್ನೇಹಿತರ ನಡುವಿನ ಮಾತಿನ ಚಕಮಕಿಯೇ ಈ ದುರ್ಘಟನೆಗೆ ಕಾರಣವಾಗಿದೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ,” ಎಂದು ತಿಳಿಸಿದ್ದಾರೆ.ಮಗನ ಸಾವಿನಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
