ಗದಗ/ಶಿರಹಟ್ಟಿ: ಸಣ್ಣ ನೀರಾವರಿ ಇಲಾಖೆಯ ಗುತ್ತಿಗೆ ಕಾಮಗಾರಿಯ ಬಿಲ್ ಮಂಜೂರಾತಿಗಾಗಿ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರು ಶನಿವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಗುತ್ತಿಗೆದಾರರೊಬ್ಬರಿಂದ ₹5 ಲಕ್ಷ ನಗದು ಸ್ವೀಕರಿಸುತ್ತಿದ್ದ ವೇಳೆ ಶಾಸಕರನ್ನು ಅಧಿಕಾರಿಗಳು ‘ರೆಡ್‌ಹ್ಯಾಂಡ್’ ಆಗಿ ಹಿಡಿದಿದ್ದಾರೆ.
₹11 ಲಕ್ಷಕ್ಕೆ ಬೇಡಿಕೆ: ₹5 ಲಕ್ಷ ಪಡೆಯುವಾಗ ಅಂದರ್
ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿ ನಡೆದಿದ್ದ ಕಾಮಗಾರಿಗೆ ಸಂಬಂಧಿಸಿದಂತೆ ವರ್ಗ-1ರ ಗುತ್ತಿಗೆದಾರರೊಬ್ಬರಿಂದ ಶಾಸಕರು ಒಟ್ಟು ₹11 ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ಈ ಪೈಕಿ ಮೊದಲ ಕಂತಿನ ರೂಪದಲ್ಲಿ ₹5 ಲಕ್ಷ ಹಣವನ್ನು ಪಡೆಯುತ್ತಿದ್ದಾಗ ಲೋಕಾಯುಕ್ತ ಎಸ್‌ಪಿ ಸಿದ್ದಲಿಂಗಪ್ಪ ನೇತೃತ್ವದ ತಂಡ ದಿಢೀರ್ ದಾಳಿ ನಡೆಸಿತು.

ಶಾಸಕರ ಜೊತೆಗೆ ಅವರ ಆಪ್ತ ಸಹಾಯಕರಾದ (ಪಿಎ) ಮಂಜುನಾಥ್ ಮತ್ತು ಗುರು ಎಂಬುವವರನ್ನೂ ಸಹ ಲೋಕಾಯುಕ್ತರು ವಶಕ್ಕೆ ಪಡೆದಿದ್ದಾರೆ.
ಆಸ್ಪತ್ರೆಯ ಮೇಲೂ ದಾಳಿ: ದಾಖಲೆಗಳ ಪರಿಶೀಲನೆ
ಬಂಧನದ ಬೆನ್ನಲ್ಲೇ ಶಾಸಕರಿಗೆ ಸೇರಿದ ಬಾಲಾಜಿ ಆಸ್ಪತ್ರೆ’ಯ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಮಹತ್ವದ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಶಾಸಕರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಶಾಸಕರೇ ಲಂಚ ಪಡೆಯುವಾಗ ಸಿಕ್ಕಿಬಿದ್ದಿರುವುದು ಇಡೀ ಜಿಲ್ಲೆಯ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
News By: Raghu Shikari-7411515737
