ಶಿವಮೊಗ್ಗ: ಬಾಡಿಗೆ ಕಾರಿನ ಹಣ ಪಾವತಿಸಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ವಿಶೇಷ ಭೂ ಸ್ವಾಧೀನಾಧಿಕಾರಿ ಹಾಗೂ ಅವರ ಪರವಾಗಿ ಹಣ ಸ್ವೀಕರಿಸುತ್ತಿದ್ದ ಗ್ರಾಮ ಸಹಾಯಕ ಇಂದು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಘಟನೆಯ ಹಿನ್ನೆಲೆ:
ಓಟಿಘಟ್ಟ ಗ್ರಾಮದ ನಿವಾಸಿ ಶ್ರೀ ಕೇಶವಮೂರ್ತಿ ಎ.ಬಿ. ಎಂಬುವವರು ತಮ್ಮ ಮಾಲೀಕತ್ವದ ‘ಮಾರುತಿ ಎರ್ಟಿಗಾ’ ಕಾರನ್ನು ಶಿವಮೊಗ್ಗದ ಎನ್.ಹೆಚ್-206 ವಿಶೇಷ ಭೂ ಸ್ವಾಧೀನಾಧಿಕಾರಿಗಳ ಕಚೇರಿಗೆ ಕಳೆದ ಎರಡು ವರ್ಷಗಳಿಂದ ಬಾಡಿಗೆಗೆ ನೀಡಿದ್ದರು. ಪ್ರತಿ ತಿಂಗಳು ಕಾರಿನ ಬಾಡಿಗೆ ಮೊತ್ತವನ್ನು ಚೆಕ್ ಮೂಲಕ ನೀಡಲಾಗುತ್ತಿತ್ತು. ಆದರೆ, ನವೆಂಬರ್ 2025ರ ಬಾಡಿಗೆ ಹಣವನ್ನು ಬಿಡುಗಡೆ ಮಾಡಲು ವಿಶೇಷ ಭೂ ಸ್ವಾಧೀನಾಧಿಕಾರಿ ಸಿದ್ದಲಿಂಗ ರೆಡ್ಡಿ (ಕೆ.ಎ.ಎಸ್) ಅವರು ದೂರುದಾರರಿಂದ 40,000 ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ಅಧಿಕಾರಿ ಲಂಚ ಕೇಳಿದ ಹಿನ್ನೆಲೆಯಲ್ಲಿ ಕೇಶವಮೂರ್ತಿಯವರು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಲೋಕಾಯುಕ್ತ ಟ್ರ್ಯಾಪ್:
ದೂರಿನ ಅನ್ವಯ ಇಂದು ಸಂಜೆ ಶಿವಮೊಗ್ಗ ನಗರದ ನೆಹರೂ ಕ್ರೀಡಾಂಗಣದ ಬಳಿ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದರು. ಸಿದ್ದಲಿಂಗ ರೆಡ್ಡಿ ಅವರ ಸೂಚನೆಯಂತೆ, ಹೊಳಲೂರು ನಾಡಕಚೇರಿಯ ಗ್ರಾಮ ಸಹಾಯಕ ರಾಜೇಶ್ ಅವರು ದೂರುದಾರರಿಂದ 40,000 ರೂ. ಲಂಚದ ಹಣವನ್ನು ಸ್ವೀಕರಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಹಣದ ಸಮೇತ ವಶಕ್ಕೆ ಪಡೆದಿದ್ದಾರೆ.
ಅಧಿಕಾರಿಗಳ ಬಂಧನ:
ಈ ಪ್ರಕರಣದಲ್ಲಿ ಎ1 ಆರೋಪಿಯಾಗಿ ವಿಶೇಷ ಭೂ ಸ್ವಾಧೀನಾಧಿಕಾರಿ ಸಿದ್ದಲಿಂಗ ರೆಡ್ಡಿ ಹಾಗೂ ಎ2 ಆರೋಪಿಯಾಗಿ ಗ್ರಾಮ ಸಹಾಯಕ ರಾಜೇಶ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯಡಿ ಇಬ್ಬರ ಮೇಲೂ ಪ್ರಕರಣ ದಾಖಲಿಸಲಾಗಿದೆ.
ತನಿಖಾ ತಂಡ:
ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಎಂ.ಎಸ್. ಕೌಲಾಪುರೆ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಬಿ.ಪಿ. ಚಂದ್ರಶೇಖರ್ ಅವರ ನೇತೃತ್ವದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆದಿದೆ. ತಂಡದಲ್ಲಿ ಇನ್ಸ್‌ಪೆಕ್ಟರ್‌ಗಳಾದ ಕೆ.ಪಿ. ರುದ್ರೇಶ್, ಗುರುರಾಜ್ ಮೈಲಾರ್ ಹಾಗೂ ಇತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
