ಬೆಂಗಳೂರು: ಮತ್ತಿಕರೆಯ ಜೆಪಿ ಪಾರ್ಕ್‌ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರ ʼಬೆಂಗಳೂರು ನಡಿಗೆʼ ಕಾರ್ಯಕ್ರಮದಲ್ಲಿ ಭಾರೀ ಹೈಡ್ರಾಮಾ ನಡೆದಿದೆ. ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಅವರು ವೇದಿಕೆ ಕಾರ್ಯಕ್ರಮದಲ್ಲಿ ಡಿಕೆಶಿ ಮತ್ತು ಸರ್ಕಾರದ ವಿರುದ್ಧ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದಾರೆ.

ಡಿಕೆಶಿವಕುಮಾರ್ ಅವರು ಇಂದು ವಾಕ್ ಮಾಡುತ್ತಾ ಜೆಪಿ ಪಾರ್ಕ್‌ಗೆ ಆಗಮಿಸಿದರು. ಆರ್‌ಎಸ್‌ಎಸ್ ಪಥಸಂಚಲನ ಮುಗಿಸಿದ್ದ ಶಾಸಕ ಮುನಿರತ್ನ ಸಮವಸ್ತ್ರದಲ್ಲೇ ಜನರ ಮಧ್ಯೆ ಕುಳಿತಿದ್ದರು. ಮುನಿರತ್ನ ಅವರು ಕಾರ್ಯಕ್ರಮದಲ್ಲಿ ಕುಳಿತಿರುವುದನ್ನು ನೋಡಿದ ಡಿಕೆಶಿ ಅವರು ಕರಿ ಟೋಪಿ ಎಂಎಎಲ್ ಬಾರಪ್ಪ ಎಂದು ವೇದಿಕೆಗೆ ಆಹ್ವಾನಿಸಿದರು.

ಆಹ್ವಾನಿಸಿದ ಹಿನ್ನೆಲೆಯಲ್ಲಿ ಮುನಿರತ್ನ ವೇದಿಕೆಗೆ ಹೋಗಿ ಡಿಕೆಶಿ ಬಳಿ ಮೈಕ್ ಕೇಳಿದರು. ಆದರೆ ಡಿಕೆಶಿ ಮೈಕ್ ನೀಡದೇ ಇಲ್ಲಿ ಕುಳಿತುಕೊಳ್ಳಿ ಎಂದರು. ಇದಕ್ಕೆ ಒಪ್ಪದ ಮುನಿರತ್ನ ಮೈಕ್ ನೀಡುವಂತೆ ಕೇಳಿದರು. ಕೊನೆಗೆ ಮುನಿರತ್ನ ಅವರು ಮೈಕ್ ಪಡೆದು, ಆರ್‌ಎಸ್‌ಎಸ್ ಪಥಸಂಚಲನ ಮುಗಿಸಿ ಈ ಕಾರ್ಯಕ್ರಮಕ್ಕೆ ಹಾಜರಾಗಿದ್ದೇನೆ.

ನನಗೆ ಈ ಕಾರ್ಯಕ್ರಮಕ್ಕೆ ಯಾವುದೇ ಆಹ್ವಾನ ಇಲ್ಲ. ಆದರೆ ನನ್ನ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾರಣ ನಾನೊಬ್ಬ ಪ್ರಜೆಯಾಗಿ ಭಾಗವಹಿಸಿದ್ದೇನೆ ಎಂದು ಹೇಳಿ ವೇದಿಕೆಯಿಂದ ಇಳಿದು ಮತ್ತೆ ಜನರ ಮಧ್ಯೆ ಕುಳಿತರು.
