ಬೆಂಗಳೂರು, ಜೂ.21: ಪುಂಡಾನೆ ಸೆರೆ ಕಾರ್ಯಾಚರಣೆ ವೇಳೆ ಹುತಾತ್ಮನಾದ ದಸರಾ ಅಂಬಾರೆ ಹೊರುತ್ತಿದ್ದ ಆನೆ ಅರ್ಜುನನ ಸ್ಮಾರಕವನ್ನು ನಾಗರಹೊಳೆ ಅರಣ್ಯದ ಡಿ.ಬಿ. ಕುಪ್ಪೆಯ ಬಳ್ಳೆ ಶಿಬಿರದಲ್ಲಿ ಜೂ.23ರಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಉದ್ಘಾಟಿಸಲಿದ್ದಾರೆ.
ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಯಸಳೂರು ಬಳಿ ಪುಂಡಾನೆ ಸೆರೆ ಕಾರ್ಯಾಚರಣೆ ವೇಳೆ 2023ರ ಡಿಸೆಂಬರ್ 4ರಂದು ಹುತಾತ್ಮನಾದ ಕ್ಯಾಪ್ಟನ್ ಎಂದೇ ಖ್ಯಾತವಾಗಿದ್ದ ದಸರಾ ಆನೆ ಅರ್ಜುನನ್ನು ದಬ್ಬಳ್ಳಿಕಟ್ಟೆಯ ನೆಡುತೋಪಿನಲ್ಲಿ ಸಮಾಧಿ ಮಾಡಲಾಗಿತ್ತು.
ಅರ್ಜುನನ ಸಮಾಧಿಗೆ ಪೂಜೆ ಸಲ್ಲಿಸಿದ್ದ ಈಶ್ವರ ಖಂಡ್ರೆ ಅವರು ದಬ್ಬಳ್ಳಿಕಟ್ಟೆಯಲ್ಲಿ ಮತ್ತು ಅರ್ಜುನ ವಾಸವಾಗಿದ್ದ ಬಳ್ಳೆ ಶಿಬಿರದಲ್ಲಿ ಸ್ಮಾರಕವನ್ನು ನಿರ್ಮಿಸುವುದಾಗಿ ಹೇಳಿದ್ದರು.
ಈಗ ಎರಡೂ ಕಡೆ ಸ್ಮಾರಕ ಸಿದ್ಧವಾಗಿದ್ದು, ಸೋಮವಾರ ಬಳ್ಳೆಯಲ್ಲಿ ಮೊದಲಿಗೆ ಸ್ಮಾರಕದ ಉದ್ಘಾಟನೆ ನೆರವೇರಲಿದೆ.
1968ರಲ್ಲಿ ಕಾಕನಕೋಟೆಯಲ್ಲಿ ನಡೆದ ಖೆಡ್ಡಾ ಕಾರ್ಯಾಚರಣೆಯಲ್ಲಿ ಅರ್ಜುನನನ್ನು ಸೆರೆಹಿಡಿಯಲಾಗಿತ್ತು.
ಅಲ್ಲಿ ಪಳಗಿದ ನಂತರ, 1990 ರ ದಶಕದಿಂದ ಮೈಸೂರಿನ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದ ಅರ್ಜುನ 8 ಬಾರಿ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಹೊತ್ತು, ಜನಮನ ಗೆದ್ದಿದ್ದ.
ಅರ್ಜುನ ಸ್ಮಾರಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.
News By: Raghu Shikari-7411515737