ತಪ್ಪಾದ ಉಪವಾಸ ತರುವುದು ಅಪಾಯ…!

ತಪ್ಪಾದ ಉಪವಾಸ ತರುವುದು ಅಪಾಯ…!

ಬಹಳ ಜನ ಸ್ತ್ರೀಯರು ಉಪವಾಸ ವ್ರತ ಮಾಡುತ್ತಾರೆ, ವಯಸ್ಸು 40 ದಾಟಿದ ಮೇಲೆ, ಇನ್ನಿಲ್ಲದ ಅಪಾಯಕರ ಕಾಯಿಲೆಗಳನ್ನು ತಂದುಕೊಳ್ಳುತ್ತಾರೆ! 🤔

ಹೌದು, ಉಪವಾಸದ ಉದ್ದೇಶ, ವಿಧಿ-ವಿಧಾನದ ತಪ್ಪಾದ ಗ್ರಹಿಕೆ ಮತ್ತು ವಿದ್ಯೆ ಎಷ್ಟಿದ್ದರೂ ತಾರ್ಕಿಕವಾಗಿ ಯೋಚಿಸದೇ ಆಚರಣೆಗೆ ಕಟ್ಟುಬೀಳುವ ಮೂಢತೆಯ ಕಾರಣ, ಇಂದು ಹಲವಾರು ಸ್ತ್ರೀಯರು 40 ರ ನಂತರ ಬಹಳ ತೊಂದರೆ ತಂದುಕೊಳ್ಳುತ್ತಿದ್ದಾರೆ, ಆಗ ಕೊರಗಿದರೂ ಸಹ ಉಪವಾಸದಿಂದ ಕಳೆದುಕೊಂಡ ಶಕ್ತಿಯನ್ನು ಮರುಪೂರಣ ಮಾಡಲು ಕಷ್ಟಸಾಧ್ಯ. ಕೆಲವರು ಸರಿಮಾಡಲು ಬಾರದ ಹಂತದ ಕಾಯಿಲೆಗೂ ತಲುಪುತ್ತಿದ್ದಾರೆ!

ಉಪವಾಸ ಎಂದರೇನು:?
ಉಪ ವಸತಿ ಇತಿ ಉಪವಾಸ
ಉಪ: ಸನಿಹ
ವಸತಿ: ವಾಸಿಸುವುದು ಭಗವಂತನ ಸನಿಹ ವಾಸಿ ಸುವುದನ್ನು “ಉಪವಾಸ” ಎಂದು ಕರೆಯುತ್ತಾರೆ.

ಉಪವಾಸದ ವಿಧಿಗಳೇನು?:
ಯಾವುದಾದರೂ ನಿಮ್ಮ ಮನಸ್ಸಿಗೆ ಒಗ್ಗುವ, ಸರಳವಾಗಿ ಅದನ್ನು ಏಕಾಗ್ರಗೊಳಿಸುವ ತಂತ್ರಗಳಿಂದ ಭಗವಂತನಲ್ಲೇ ಮನಸ್ಸನ್ನು ಇಟ್ಟುಕೊಂಡು ದಿನ ಕಳೆಯುವುದು. ಇದೇ ವಿಧಾನ, ಇದಕ್ಕೆ ಒಬ್ಬೊಬ್ಬರಿಗೆ ಒಂದೊಂದು ಮಾರ್ಗ ಇದೆ. ಎಲ್ಲರಿಗೂ ಒಂದೇ ಮಾರ್ಗ ಸರಿಯಾದುದಲ್ಲ.

ಉಪವಾಸ ವ್ರತದಲ್ಲಿ ಆಗುತ್ತಿರುವ ತಪ್ಪುಗಳೇನು?:
ಉಪವಾಸ ವಿಧಾನದಲ್ಲಿ ಆಹಾರ ಸೇವನೆಯನ್ನು ಮಿತಗೊಳಿಸುವುದು ಎಲ್ಲರಿಗೂ ಅನಿವಾರ್ಯವಾದ “ಸಾಮಾನ್ಯ ಸಂಗತಿ” ಆಗಿರುವ ಕಾರಣ ಎಲ್ಲರೂ ಅದನ್ನೇ ಉಪವಾಸ ಎಂದುಕೊಂಡಿದ್ದಾರೆ.

ಉಪವಾಸ ಎಂದರೆ ಕೇವಲ ಆಹಾರವನ್ನು ತಿನ್ನದಿರುವುದು, ಎಂಬ ಭಾವನೆ.
ಅನ್ನವನ್ನು ಬಿಟ್ಟು ಎಲ್ಲಾ ತಿನ್ನಬಹುದು ಎಂಬ ಭಾವನೆ.
ವಿಚಿತ್ರ ರೋಗಕಾರಕ, ಹಾನಿಕಾರಕ ಅಂಶ ಎಂದರೆ — ಚಹಾ, ಕಾಫೀಗಳು ಉಪವಾಸಕ್ಕೆ ಸಹಕಾರಿ ಎಂದು ಭಾವಿಸಿರುವುದು?!! 🤔
ಆದರೆ, ನೆನಪಿಡಿ, ಆಹಾರವಿಲ್ಲದೇ ಚಹಾ, ಕಾಫೀಗಳ ಸೇವನೆಯಿಂದ ಆಗುವ ಅಪಾಯವನ್ನು ಯಾವ ವಿಧಾನಗಳಿಂದಲೂ ತಡೆಯಲು ಅಸಾಧ್ಯ..!

ಅಕ್ಕಿಯಿಂದ ತಯಾರಿಸಿದ ಅನ್ನವನ್ನು ಹೊರತುಪಡಿಸಿ ಎಲ್ಲವನ್ನೂ ಸೇವಿಸುವುದು!!
ಅದೇ ಅಕ್ಕಿಯಿಂದ ತಯಾರಾದ “ಅವಲಕ್ಕಿ” ಶ್ರೇಷ್ಠ…!!!
ಇನ್ನೂ ಏನೇನೋ… ಭಾವದಿಂದ ಶರೀರವನ್ನು ಸೊರಗಿಸುವುದು, ರೋಗಗ್ರಸ್ತವಾಗಿಸುವುದು ಸಾಮಾನ್ಯವಾಗಿಬಿಟ್ಟಿದೆ.

ಇರಲಿ, ಉಪವಾಸದ ಉದ್ದೇಶ ನೋಡೋಣ:
ಈ ಮನಸ್ಸನ್ನು ಒಂದೆಡೆ ಸ್ಥಿರವಾಗಿ ಇರಿಸುವುದೇ ಉಪವಾಸದ ಉದ್ದೇಶ. ಇದಕ್ಕೆ ಸಹಕರಿಸುವ ಅಂಶಗಳೆಲ್ಲವೂ ಉಪವಾಸದ ವಿಧಿಗಳು ಎನಿಸಿಕೊಳ್ಳುತ್ತವೆ.

ಆಹಾರ ಸೇವನೆಯು ಇಂದ್ರಿಯಗಳಿಗೆ ಶಕ್ತಿಯನ್ನು ತುಂಬುತ್ತದೆ, ಶಕ್ತಿ ಪಡೆದ ಇಂದ್ರಿಯಗಳು ನಿಲ್ಲದೇ ಓಡುತ್ತವೆ, ಚಂಚಲವಾಗುತ್ತವೆ, ಆದ್ದರಿಂದ ಆಹಾರವನ್ನು ಮಿತಗೊಳಿಸಬೇಕು.

ಹಾಗೆಯೇ, ಆಹಾರವೇ ಸಿಗದ ಇಂದ್ರಿಯಗಳು ಆಹಾರ ಸಿಗುವುದಕ್ಕಿಂತಲೂ ಅತಿಯಾಗಿ ಚಂಚಲವಾಗುತ್ತವೆ, ಆಹಾರದ ತೀವ್ರ ಕೊರತೆ ಬಿದ್ದರೆ ಅವು ಕಳ್ಳತನ ಮಾಡಿಯಾದರೂ ಹೊಟ್ಟೆ ತುಂಬಿಸಿಕೊಳ್ಳಲು ಪ್ರೇರೇಪಿಸುತ್ತವೆ. ಹಿಂದಿನ ಕಾಲದ ಹೆಚ್ಚಿನ ಕಳ್ಳತನಗಳೆಲ್ಲಾ ಆದದ್ದು “ಕೇವಲ ಆಹಾರಕ್ಕಾಗಿ” ಮಾತ್ರ!

ಉಪವಾಸ ಮಾಡಿ ಇಂದ್ರಿಯಗಳಲ್ಲಿ ಆಹಾರದ ತೀವ್ರ ಆಸೆ ಹುಟ್ಟಿಸಿದರೆ ಅದು ಕಳ್ಳತನವಲ್ಲದೇ ಮತ್ತೇನು? ಈ ಕಳ್ಳತನ ಯಾರಿಗೂ ಗೋಚರವಲ್ಲ ಆದರೆ, ನಮಗೆ ನಾವೇ‌ ಮೋಸ ಮಾಡಿಕೊಂಡಂತೆ ಅಲ್ಲವೇ?

ದಯಮಾಡಿ ಆಳವಾಗಿ ಚಿಂತನೆ ಮಾಡಿ, ಲಘುವಾಗಿ ಜೀರ್ಣಗೊಳ್ಳುವ ಆಹಾರವನ್ನು ಮಿತವಾಗಿ ಕೊಟ್ಟಾಗ, ಇಂದ್ರಿಯಗಳು ಶಾಂತವಾಗಿ ನಿಮಗೆ ಸಹಕರಿಸುತ್ತವೆ, ಆಗ ಯಾವುದರ ಚಿಂತನೆ ಮಾಡಬೇಕೆಂದು ನೀವು ಪ್ರೇರೇಪಣೆ ಪಡೆಯುತ್ತೀರೋ ಆ ಕಡೆಗೆ ಮನಸ್ಸು ಸುಲಭವಾಗಿ ಹರಿಯುತ್ತದೆ.

ಭಗವದ್ಗೀತೆಯ 6 ನೇ ಅಧ್ಯಾಯದಲ್ಲಿ ಶ್ರೀಕೃಷ್ಣ ಭಗವಂತ ಹೇಳಿರುವ ವ್ಯಾಖ್ಯೆಯನ್ನೊಮ್ಮೆ ಗಮನಿಸಿ — “ನಾತ್ಯಶ್ನತಸ್ತು ಯೋಗೋSಸ್ತಿ ನ ಚಾತ್ಯಂತಮನಶ್ನತಃ ।” ನ ಚಾತಿಸ್ವಪ್ನಶೀಲಸ್ಯ ಜಾಗ್ರತೋ ನೈವ ಚಾರ್ಜುನ ॥೧೬॥”

ಅತಿಯಾದ ಆಹಾರ ಸೇವಿಗೆ ಯೋಗ(ಅಂದರೆ ಭಗವಂತನ ಸಂಯೋಗ) ಸಾಧ್ಯವಿಲ್ಲ, ಹಾಗೆಯೇ ಅತಿಯಾಗಿ ಉಪವಾಸ ಮಾಡಿದವನಿಗೂ ಯೋಗ ಸಾಧ್ಯವಿಲ್ಲ.ಇಲ್ಲಿ ಉಪವಾಸ ಮತ್ತು ಯೋಗ ಎರಡೂ ಪೂರಕ ಪದಗಳಾಗಿವೆ.

“ಯಾವುದೇ ಜ್ಞಾನಾರ್ಜನೆಗೆ ಅತಿ ಆಹಾರ ಸೇವನೆ ಅಥವಾ ನಿರಾಹಾರ ಪೂರಕವಲ್ಲ. ಅದರಲ್ಲೂ ಉತ್ತೇಜಕಗಳಾದ, ಮನಸ್ಸನ್ನು ಚಂಚಲಗೊಳಿಸುವ
ಚಹಾ
ಕಾಫೀ
ಬೇಕರಿ ಪದಾರ್ಥ
ಬಿಸ್ಕೆಟ್‌ಗಳು
ದೋಸೆ, ಇಡ್ಲಿಗಳು

ಎಲ್ಲಾ ಹುಳಿ, ಖಾರ, ಉಪ್ಪಿನ ಅಂಶಗಳು ಶರೀರಕ್ಕೆ ಅತ್ಯಂತ ಹಾನಿಕರ ಮತ್ತು ಸರ್ವದಾ ಉಪವಾಸ ಪ್ರಕ್ರಿಯೆಗೆ ಮಾರಕಗಳು.

ಆಹಾರದ ವಿಷಯದಲ್ಲಿ ಉಪವಾಸದ ಉಪಸಂಹಾರ:
ಸ್ನಿಗ್ಧ(ತುಪ್ಪ ಹಾಕಿದ)
ದ್ರವ(ನೀರಾಗಿರುವ)
ಉಷ್ಣ(ಬಿಸಿಯಾಗಿರುವ)
ಅನಭಿಷ್ಯಂದಿ(ತಾಜಾವಾಗಿ ತಯಾರಾದ)
ಮಿತ(ಹಸಿವು ಉದ್ದೀಪನಗೊಳ್ಳುವುದನ್ನು ತಡೆಯುವಷ್ಟು ಪ್ರಮಾಣದ ಆಹಾರ)…
ಸೇವನೆ ಉಪವಾಸ ವ್ರತದಲ್ಲಿ ಶ್ರೇಷ್ಠವಾಗಿದೆ…

ಅಂದರೆ, ಶುದ್ಧ ಅಕ್ಕಿಯ ಗಂಜಿಯ ಸೇವನೆ ಉಪವಾಸಕ್ಕೆ ಅತ್ಯಂತ ಯೋಗ್ಯವಾಗಿದೆ ಗಂಜಿಯನ್ನು ಅತ್ಯಲ್ಪ ಪ್ರಮಾಣದಲ್ಲಿ ಕೊಡಿ, ಮತ್ತೆ ಹಸಿವು ಬಾಧಿಸಲಾರಂಭಿಸಿದರೆ ಮತ್ತೆ ಸ್ವಲ್ಪ ಕೊಡಿ, ದಿನವೆಲ್ಲಾ ಹೀಗೆ ಕಳೆಯಿರಿ…

ಮತ್ತುಇಲ್ಲಿ ಸುಮ್ಮನಾಗುವ ಮನಸ್ಸನ್ನು ನಿಮ್ಮ ನಿಮ್ಮ ಮನಸ್ಸಿನಲ್ಲಿ ನೀವು ಪ್ರೀತಿಯಿಂದ ಸ್ವೀಕರಿಸಿದ ದೈವಶಕ್ತಿಯ ಬಗ್ಗೆ ಚಿಂತನೆ ಹರಿಸಿ, ಕೊನೆಗೆ ಚಿಂತನೆ ನಿಂತು ಸ್ಥಿರವಾಗುವ ಮನಸ್ಸನ್ನೇ “ಉಪವಾಸ” ಎನ್ನುತ್ತಾರೆ.

ವೃತ್ತಿ ಜೀವನದ ಒತ್ತಡದಲ್ಲಿ ಮಾಡುವ ಉಪವಾಸದ ಬಗ್ಗೆ ನಾಳಿನ ಸಂಚಿಕೆಯಲ್ಲಿ ನೋಡೋಣ…

ಡಾ. ಮಲ್ಲಿಕಾರ್ಜುನ ಡಂಬಳ
8792290274 9148702645
ATHARVA Ayurveda Hospital & Research Institute
••••••••••••••••••••••••••••••••••

Admin

Leave a Reply

Your email address will not be published. Required fields are marked *

error: Content is protected !!