ನೌಕರಿ ಮಾಡುವವರೇ, ತಪ್ಪಾದ ಉಪವಾಸ ತರುವುದು ಅಪಾಯ

ನೌಕರಿ ಮಾಡುವವರೇ, ತಪ್ಪಾದ ಉಪವಾಸ ತರುವುದು ಅಪಾಯ

ವೃತ್ತಿ ಜೀವನದ ಒತ್ತಡದಲ್ಲಿ ಮಾಡುವ ಉಪವಾಸದ ಅಪಾಯಗಳ ಬಗ್ಗೆ ನೋಡೋಣ: ಉಪವಾಸ ಒಂದು ಶಾಂತ, ಸ್ಥಿರ ಮತ್ತು ವೈಶಾಲ್ಯತೆಯ ಅನುಭೂತಿ ಆಗಬೇಕು ಅನೇಕರ ವೃತ್ತಿ ಜೀವನ ಅವರ ಇಚ್ಛೆ ಇದೆಯೋ, ಇಲ್ಲವೋ ಅದು ನಿರಂತರ ಅಶಾಂತಿಯನ್ನು,ಅಸ್ಥಿರತೆಯನ್ನೂ ಹುಟ್ಟುಹಾಕುತ್ತದೆ ಮತ್ತು ವೈಶಾಲ್ಯತೆಯು ವ್ಯಾವಹಾರಿಕ ದೃಷ್ಟಿಯಿಂದ ಬಳಕೆಗೆ ಬಾರದ ಸದ್ಗುಣವಾಗಿದೆ.

ಇಲ್ಲಿ ಮಾಡುವ ಆಹಾರದ ನಿರ್ಬಂಧ ಎಂಬ ಉಪವಾಸ ಅತೀವ ಅಪಾಯವನ್ನೇ ತರುತ್ತದೆ.
ಮೆದುಳು ತರ್ಕಬದ್ಧವಾಗಿ, ವ್ಯಾವಹಾರಿಕವಾಗಿ ಕಾರ್ಯ ನಿರ್ವಹಿಸಲು ಹೆಚ್ಚು ಹೆಚ್ಚು ಗ್ಲುಕೋಸ್ ಬಳಸುತ್ತದೆ! ಅಲ್ಲದೇ ವೃತ್ತಿಯಲ್ಲಿ ಸ್ಪರ್ಧೆ ಏರ್ಪಟ್ಟರಂತೂ ಅತೀ ಹೆಚ್ಚು ಗ್ಲುಕೋಸ್ ಮತ್ತು ಆಮ್ಲಜನಕದ ಬೇಡಿಕೆ ಮೆದುಳಿನಿಂದ ಬರುತ್ತದೆ. ಆಗ ಮಾಡುವ ಆಹಾರ ನಿಯಂತ್ರಣ ರೂಪಿ ಉಪವಾಸ ಏನಾದರೂ ಸತ್ ಫಲಿತಾಂಶಗಳನ್ನು ಕೊಡಲು ಸಾಧ್ಯವೇ? 🤔

ಒಂದೆಡೆ, ನಿರಂತರ ಮೆದುಳಿನ ಬೇಡಿಕೆ ಮತ್ತು ಅದಕ್ಕೆ ತಕ್ಕಂತೆ ಹೃದಯ, ಪ್ಯಾಂಕ್ರಿಯಾಸ್, ರಕ್ತನಾಳಗಳ ಸ್ಪಂದನೆಗೆ ಶರೀರದಿಂದ ಸೂಕ್ತ ಆಹಾರ ಪೂರೈಕೆಯಾಗದೇ ಅತಿಯಾಗಿ ಬಳಲಿಹೋಗುತ್ತದೆ.

ಈ ಪ್ರಕ್ರಿಯೆಯು ನಿರಂತರ ನಡೆದರೆ, ಮೆದುಳಿನ ಸಾಮರ್ಥ್ಯ ಬಹು ಬೇಗ ಕುಂದಿಹೋಗುತ್ತದೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದರಂತೂ ಮೆದುಳಿನ ಈ ಒತ್ತಡದಿಂದ ಬರುಬರುತ್ತಾ ಜೀವನ ನರಕ ಎನ್ನಿಸತೊಡಗುತ್ತದೆ. 🙄

ರಕ್ತಧಾತು, ಮಜ್ಜೆಯವರೆಗೂ ಒಣಗುವ ಕಾರಣ, ಜೀರ್ಣಶಕ್ತಿ ಕುಂದುತ್ತಾ ಸಾಗುತ್ತದೆ. ಇಲ್ಲಿಂದ ಸರ್ವವೂ ಅನಾರೋಗ್ಯಕರವಾಗಿ ಬದಲಾಗುವ ಕ್ರಿಯೆ ಆರಂಭ. ಶಕ್ತಿ ಬೇಕೆಂದು ಶಕ್ತಿಯುತ ಆಹಾರ ಸೇವಿಸಿದರೆ ಅಜೀರ್ಣ, ಲಘು ಆಹಾರ ಸೇವನೆಯಿಂದ ತಡೆಯಲಾರದ ಸಂಕಟದಿಂದ ತಲೆನೋವು, ವಾಂತಿ…. ಹೀಗೆ ಅಲ್ಪವೂ ಅಲ್ಲದ, ಅತಿಯೂ ಅಲ್ಲದ ಆಹಾರದಿಂದ, ಒತ್ತಡರಹಿತವಾಗಿ, ಶಾಂತ ಮನಸ್ಸಿನಿಂದ ಮಾತ್ರ ಬಾಳಬೇಕಾದ ಹಂತ ತಲುಪುತ್ತೇವೆ.

ಇಲ್ಲದಿದ್ದರೆ, ಅತಿಯಾದ ಬಳಲಿಕೆ, ಮೈಭಾರ, ನಿದ್ರಾಹಾನಿ, ಕೆಲಸದಲ್ಲಿ ನಿರುತ್ಸಾಹ… ಹೀಗೆ ಆಗಲು ಕಾರಣ ಮಾಂಸಧಾತು ಶಕ್ತಿ ಕಳೆದುಕೊಳ್ಳುವುದರ ಸೂಚನೆ, ಈ ಹಂತದಲ್ಲಿ ಜೀವನ ಮುಂದುವರಿದರೆ, ಪೋಷಕಾಂಶಗಳ ಚಯಾಪಚಯ ಕ್ರಿಯೆ ಕ್ಷೀಣಿಸಿ, ಶಕ್ತಿ ಬಿಡುಗಡೆ ಮಾಡದೇ, ದೇಹದಲ್ಲಿ ಕೊಬ್ಬು ಸಂಚಯವಾಗುತ್ತದೆ.

ನಿಶಕ್ತ ದೇಹಕ್ಕೆ ಮತ್ತೊಂದು ಭಾರ ಎಂಬಂತೆ ಬರುತ್ತದೆ ಈ ಕೊಬ್ಬು ಶೇಖರಣೆ, ಯಕೃತ್ತಿನ ಕೊಬ್ಬು(ಫ್ಯಾಟೀ ಲಿವರ್) ಆರಂಭವಾದರಂತೂ ಅನೇಕ ಕಾಯಿಲೆಗಳ ಬಾಧೆ ಆರಂಭವಾಗುತ್ತದೆ.

ಹೃದ್ರೋಗದ ಮೂಲವೇ ಅಸಮರ್ಪಕ ಮೇದಸ್ಸು, ಇದು ಯಾವ ವಯಸ್ಸಿನವರನ್ನೂ‌ ಸಹ ಬಾಧಿಸುತ್ತಿದೆ.

ಮೇದಸ್ಸಿನ ಚಯಾಪಚಯದ ಮುಂದಿನ ಹಂತ ಅಸ್ಥಿಧಾತುವಿನ ಪೋಷಣೆ. ಮೇದಸ್ಸಿನ ಅಜೀರ್ಣಾವಸ್ಥೆಯ ಕಾರಣ ಅಸ್ಥಿ ಪೋಷಣೆ ಸರಿಯಾಗಿ ಆಗದೇ, ಮೂಳೆ ಸವೆತ ಆರಂಭವಾಗಿ ಬಿಡುತ್ತದೆ. ಇದು,ಹೈಪೋಥೈರಾಯ್ಡಿಸಮ್‌ಗೆ ಕಾರಣವಾಗುತ್ತದೆ. 🤔

ಇಲ್ಲಿ ಕೆಲವರು ಕಾಫೀ, ಟೀ ಸೇವನೆಗೆ ಮುಂದಾಗುತ್ತಾರೆ, ಇದು ಹೇಗಿದೆ ಎಂದರೆ ಉರಿವ ಬೆಂಕಿಗೆ ತುಪ್ಪ ಸುರಿದಂತೆ ಆಗುತ್ತದೆ.

ಶರೀರದ ಮೂಲಶಕ್ತಿ ಕ್ಷೀಣತೆ ಒಂದೆಡೆ ಆಗುತ್ತಿದೆ, ಇನ್ನೊಂದೆಡೆ ಉತ್ತೇಜಕಗಳ ಸೇವನೆ!! ಇದರಿಂದ ಮೂಳೆಗಳು ಹಗುರವಾಗಿ, ನರಗಳು ಒಣಗಿ ಅನೇಕ ಕೊರತೆಗಳ ದಾಸತ್ವಕ್ಕೆ ಶರೀರ ತಳ್ಳಲ್ಪಡುತ್ತದೆ.

ಮೇಲಿನ ಯಾವುವೂ ಕಾಯಿಲೆಗಳಲ್ಲ, ಪೋಷಕಗಳ ಕೊರತೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ, ಆದರೆ ಅದು ತೀರಿಸಲಾಗದ ಶಾಶ್ವತ ಕೊರತೆಯಾಗಿಯೇ ಉಳಿಯುತ್ತದೆ.

ಹೀಗೇ ಮುಂದುವರಿಯುತ್ತದೆ…

ವಿಶೇಷವಾಗಿ ಮಹಿಳೆಯರು ಈ ತೊಳಲಾಟದಲ್ಲಿ ಅತೀ ಹೆಚ್ಚು ಇರುವುದನ್ನು ಕಾಣುತ್ತೇವೆ. ಇರುವ ಎಲ್ಲಾ ಉಪವಾಸ ವ್ರತಗಳೂ ಮಹಿಳೆಯರಿಗೇ ಎಂಬಂತೆ ರೂಢಿಯಲ್ಲಿವೆ!! 🤔

ಈ ಅತಿಯಾದ ಅಥವಾ ಸಮತ್ವವಲ್ಲದ ಉಪವಾಸವು ಅವರಲ್ಲಿ ಗರ್ಭಕೋಶದ ರಸಧಾತುವನ್ನು ಕೊರಗಿಸುತ್ತದೆ, ಅದು ಗರ್ಭ ಮತ್ತು ಸ್ತನ್ಯ(ಎದೆಹಾಲು)ದ ಶಕ್ತಿಯನ್ನು ಹೀರಿ ಗರ್ಭ ಧರಿಸಲೂ ಮತ್ತು ಸಂತಾನದ ಪೋಷಣೆಗೂ ಹಾನಿಯನ್ನು ತರುತ್ತದೆ.

ಆತ್ಮೀಯರೇ, ಮಾನವ ಶರೀರವೇ ಸರ್ವ ಸಾಧನೆಯ ಮೂಲ, ಇದಕ್ಕಿರುವ ಅಪಾರ ಸಾಧ್ಯತೆಯನ್ನು ಅತಿಯಾಗಿ ತಿನ್ನಲೂ ಅಥವಾ ಅತಿಯಾಗಿ ಉಪವಾಸ ಕೆಡವಲೂ ಬಳಸಬಾರದು.

ಗೀತೆಯ ಧ್ವನಿ ಕೇಳಿ:
ಯುಕ್ತಾಹಾರವಿಹಾರಸ್ಯ ಯುಕ್ತಚೇಷ್ಟಸ್ಯ ಕರ್ಮಸು ।
ಯುಕ್ತಸ್ವಪ್ನಾವಬೋಧಸ್ಯ ಯೋಗೋ ಭವತಿ ದುಃಖಹಾ ॥೧೭॥
~ಅಧ್ಯಾಯ 6/17

ಡಾ. ಮಲ್ಲಿಕಾರ್ಜುನ ಡಂಬಳ
8792290274 9148702645
ATHARVA Ayurveda Hospital & Research Institute
••••••••••••••••••••••••••••••••••

Admin

Leave a Reply

Your email address will not be published. Required fields are marked *

error: Content is protected !!