ಶಿವಮೊಗ್ಗ :ಶೀಘ್ರದಲ್ಲಿ ವಿಮಾನಯಾನ ಕಾರ್ಯಾರಂಭಗೊಳಿಸಲು ಕ್ರಮ : ಸಚಿವ ಕೆ.ಎಸ್.ಈಶ್ವರಪ್ಪ..!

ಶಿವಮೊಗ್ಗ :ಶೀಘ್ರದಲ್ಲಿ ವಿಮಾನಯಾನ ಕಾರ್ಯಾರಂಭಗೊಳಿಸಲು ಕ್ರಮ : ಸಚಿವ ಕೆ.ಎಸ್.ಈಶ್ವರಪ್ಪ..!

ಶಿವಮೊಗ್ಗ : ಜಿಲ್ಲೆಯ ಸೋಗಾನೆ ಸಮೀಪ ನಿರ್ಮಾಣ ಹಂತದಲ್ಲಿರುವ ವಿಮಾನ ನಿಲ್ದಾಣ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಂಡು ಸಾರ್ವಜನಿಕ ಸೇವೆ ಮುಕ್ತಗೊಳಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್‍ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ವಿಮಾನ ನಿಲ್ದಾಣ ಕಾಮಗಾರಿಯ ಪ್ರಗತಿ ಪರಿಶೀಲಿಸಿದ ವಿವರ ನೀಡಿ ಮಾತನಾಡಿದ ಅವರು ಮೊದಲ ಹಂತದ ಕಾಮಗಾರಿಗಳಿಗಾಗಿ ಸರ್ಕಾರದಿಂದ ಕಾಯ್ದಿರಿಸಲಾದ ಒಟ್ಟು 220ಕೋಟಿ ರೂ.ಗಳಲ್ಲಿ 150ಕೋಟಿ ರೂ.ವೆಚ್ಚದ ಕಾಮಗಾರಿಗಳು ಭರದಿಂದ ಸಾಗಿವೆ.

ಉಳಿದಂತೆ ಕಚೇರಿ, ಕಟ್ಟಡ ಕಾಮಗಾರಿಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲಿ ಆರಂಭಗೊಳ್ಳಲಿವೆ ಎಂದರು.

ಅಂದು ಕೊಂಡಂತೆ ಎಲ್ಲಾ ಕಾಮಗಾರಿಗಳು ನಡೆದಲ್ಲಿ 2021ರ ವರ್ಷಾರಂಭದಲ್ಲಿ ವಿಮಾನ ಸಂಚಾರ ಆರಂಭಗೊಳ್ಳಲಿದೆ ಎಂದ ಅವರು, ಜಿಲ್ಲೆಯ ಜನರ ಬಹುದಿನಗಳ ಕನಸಾಗಿದ್ದು, ಸ್ಥಗಿತಗೊಂಡಿದ್ದ ಕಾಮಗಾರಿಗೆ ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು ಅಗತ್ಯ ಅನುದಾನ ಬಿಡುಗಡೆ ಮಾಡುವ ಮೂಲಕ ಕಾಮಗಾರಿಗಳಿಗೆ ವೇಗ ಹೆಚ್ಚಿಸಿದ್ದಾರೆ ಎಂದರು.

ಪ್ರಸ್ತುತ ರನ್‍ವೇ, ಕಾಂಪೌಂಡ್ ಕಾಮಗಾರಿಗಳು ನಡೆಯುತ್ತಿವೆ. ಕಟ್ಟಡ ಕಾಮಗಾರಿಗಳು ಸದ್ಯದಲ್ಲಿ ಆರಂಭಗೊಳ್ಳಲಿವೆ. ಮುಂದಿನ ದಿನಗಳಲ್ಲಿ ಕಾಮಗಾರಿಗಳಿಗೆ ಇನ್ನಷ್ಟು ವೇಗ ಹೆಚ್ಚಿಸಲಾಗುವುದು.

ಈ ವಿಷಯಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗುವುದು ಅಲ್ಲದೇ ಮುಂದಿನ ದಿನಗಳಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಗುತ್ತಿಗೆದಾರರಿಗೂ ತೀವ್ರಗತಿಯಲ್ಲಿ ಕಾಮಗಾರಿಗಳು ಪೂರ್ಣಗೊಳಿಸಲು ಸೂಚಿಸಲಾಗುವುದು ಎಂದರು.

Admin

Leave a Reply

Your email address will not be published. Required fields are marked *

error: Content is protected !!