ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ರಸಪ್ರಶ್ನೆ ಸ್ಪರ್ಧೆ ನಡೆಸುವಂತೆ ಶಿಕ್ಷಣ ಇಲಾಖೆ ಸುತ್ತೋಲೆ

ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ರಸಪ್ರಶ್ನೆ ಸ್ಪರ್ಧೆ ನಡೆಸುವಂತೆ ಶಿಕ್ಷಣ ಇಲಾಖೆ ಸುತ್ತೋಲೆ


ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.


2024-25ನೇ ಸಾಲಿನ ಯೋಜನಾ ಅನುಮೋದನಾ ಮಂಡಳಿಯಿಂದ “ರಾಷ್ಟ್ರೀಯ ಅವಿಷ್ಕಾರ್ ಅಭಿಯಾನ” ಕಾರ್ಯಕ್ರಮದಡಿ ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲು ಪ್ರಾಥಮಿಕ ವಿಭಾಗಕ್ಕೆ ರೂ.35.00 ಲಕ್ಷಗಳು ಹಾಗೂ ಪ್ರೌಢಶಾಲಾ ವಿಭಾಗಕ್ಕೆ ರೂ.35.00 ಲಕ್ಷಗಳು ಒಟ್ಟು ರೂ.70.00 ಲಕ್ಷಗಳ ಅನುದಾನ ಅನುಮೋದನೆಯಾಗಿರುತ್ತದೆ.

ರಸಪ್ರಶ್ನೆ ಸ್ಪರ್ಧೆಯು ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಆಸಕ್ತಿಯನ್ನು ಬೆಳೆಸುವಂತಹ ಚಟುವಟಿಕೆಗಳನ್ನು ಮತ್ತು ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಅವರಲ್ಲಿ ಗಣಿತ, ವಿಜ್ಞಾನ, ತಂತ್ರಜ್ಞಾನ ಸಾಮಾನ್ಯ ಜ್ಞಾನ, ಭಾಷೆ, ಭಾರತ ದೇಶದ ಪರಂಪರೆ ಹಾಗೂ ಇತರೆ ವಿಷಯಗಳಲ್ಲಿ ಅರಿವಿನ ಮಟ್ಟವನ್ನು ಹೆಚ್ಚಿಸಲು ಪೂರಕವಾಗಿದ್ದು, ಈ ನಿಟ್ಟಿನಲ್ಲಿ ಸ್ಪರ್ಧೆ ಆಯೋಜಿಸುವಂತೆ ಸೂಚಿಸಲಾಗಿದೆ.
ಸ್ಪರ್ಧೆಯ ಹಂತಗಳು
ಶಾಲಾ, ತಾಲ್ಲೂಕು, ಜಿಲ್ಲಾ, ವಿಭಾಗ ಹಾಗೂ ರಾಜ್ಯ ಹಂತಗಳಲ್ಲಿ ರಸಪ್ರಶ್ನೆ ಸ್ಪರ್ಧೆಯನ್ನು ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಆಯೋಜಿಸುವುದು ಎಂದು ತಿಳಿಸಲಾಗಿದೆ.


ಜೂನಿಯರ್ ಹಂತ – (5-7 ನೇ ತರಗತಿಯ ವಿದ್ಯಾರ್ಥಿಗಳಿಗಾಗಿ)
ಸೀನಿಯರ್ ಹಂತ – (8-10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ)
ಪ್ರತಿ ಶಾಲೆಯಿಂದ ಶಾಲಾ ಹಂತದ ಸ್ಪರ್ಧೆಗೆ ಶಿಕ್ಷಕರು ಗಣಿತ, ವಿಜ್ಞಾನ, ತಂತ್ರಜ್ಞಾನ, ಭಾರತದ ಇತಿಹಾಸ-ಪರಂಪರೆ, ಭೌಗೋಳಿಕ, ಸಾಂಸ್ಕೃತಿಕ, ಸಾಹಿತ್ಯ, ಭಾಷೆ, ಕಲೆ, ಸಾಮಾನ್ಯ ಜ್ಞಾನ, ಕ್ರೀಡೆ, ಮಾನಸಿಕ ಸಾಮರ್ಥ್ಯ, ಪ್ರಚಲಿತ ವಿದ್ಯಾಮಾನ ಇತ್ಯಾದಿ ವಿಷಯಗಳನ್ನೊಳಗೊಂಡಂತೆ ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡು (ಕನಿಷ್ಠ 50 ಬಹು ಆಯ್ಕೆಯ ಪ್ರಶ್ನೆಗಳು) ಉತ್ತರ ಸಹಿತ ಸಿದ್ಧಪಡಿಸಿ, ಮುಖ್ಯಶಿಕ್ಷಕರಿಂದ ಅನುಮೋದಿಸಿಕೊಂಡು ವಿದ್ಯಾರ್ಥಿಗಳಿಗೆ ಸ್ಪರ್ಧೆಯನ್ನು ಹಮ್ಮಿಕೊಳ್ಳುವುದು ಎಂದು ತಿಳಿಸಲಾಗಿದೆ.
ಶಾಲಾ ಹಂತದ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿ ವಿಜೇತರಾದ 3 ವಿದ್ಯಾರ್ಥಿಗಳ ಹೆಸರನ್ನು ಶಿಕ್ಷಕರು ವಿದ್ಯಾರ್ಥಿಗಳ SATS ID, ಮೊಬೈಲ್ ಸಂಖ್ಯೆ, ಭಾವಚಿತ್ರ ಹಾಗೂ ಬ್ಯಾಂಕ್ ಖಾತೆಯ ವಿವರವನ್ನು ಮೊಬೈಲ್/ಲ್ಯಾಪ್ ಟಾಪ್/ಕಂಪ್ಯೂಟರ್ನ್ನು ಬಳಸಿ ವಿದ್ಯಾವಾಹಿನಿ Portal ನಲ್ಲಿ ನೋಂದಣಿ ಮಾಡುವುದು ಹಾಗೂ ವಿದ್ಯಾವಾಹಿನಿ Portal ನಲ್ಲಿ ಪ್ರಮಾಣಪತ್ರವನ್ನು ಡೌನ್ಲೋಡ್ ಮಾಡಿ ವಿದ್ಯಾರ್ಥಿಗಳಿಗೆ ನೀಡಿ ಮಕ್ಕಳನ್ನು ಪ್ರೋತ್ಸಾಹಿಸಬೇಕೆಂದು ತಿಳಿಸಲಾಗಿದೆ.


ಶಾಲಾ ಮಟ್ಟದಿಂದ ತಾಲ್ಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾದ ಸ್ಪರ್ಧಿಗಳಿಗೆ ನಿಗದಿಪಡಿಸಿದ ದಿನಾಂಕದಂದು ಶಾಲೆಯಲ್ಲಿ ಶಾಲಾ ಸಮಯದಲ್ಲಿ ಮುಖ್ಯ ಶಿಕ್ಷಕರ ಸಮ್ಮುಖದಲ್ಲಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸುವುದು. ಬಹುಲಾಗಿನ್ಗಳಿಗೆ ಅವಕಾಶವಿರುವುದಿಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ತಾಲ್ಲೂಕು ಮಟ್ಟದ ಸ್ಪರ್ಧೆಯಲ್ಲಿ ಜೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ 3 ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರವನ್ನು ನೀಡಲಾಗುವುದು. ಬಹುಮಾನದ ಮೊತ್ತವನ್ನು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಹಿಸಲಾಗುವುದು. ತಾಲ್ಲೂಕು ಹಂತದ ರಸಪ್ರಶ್ನೆ ಸ್ಪರ್ಧೆಯಲ್ಲಿ ಜೂನಿಯರ್ ಹಾಗೂ ಸೀನಿಯರ್ ವಿಭಾಗದಿಂದ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆ ಮಾಡಲಾಗುವುದು ಎಂದು ಸರಕಾರಿ ಸುತ್ತೋಲೆ ತಿಳಿಸಿದೆ.

Admin

Leave a Reply

Your email address will not be published. Required fields are marked *

error: Content is protected !!