ಪ್ರಜ್ವಲ್ ರೇವಣ್ಣರನ್ನು ಹುಡುಕಿ ಕೊಟ್ಟವರಿಗೆ ಒಂದು ಲಕ್ಷ ಬಹುಮಾನ ಘೋಷಣೆ

ಪ್ರಜ್ವಲ್ ರೇವಣ್ಣರನ್ನು ಹುಡುಕಿ ಕೊಟ್ಟವರಿಗೆ ಒಂದು ಲಕ್ಷ ಬಹುಮಾನ ಘೋಷಣೆ

ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಒಟ್ಟು ಮೂರು ಅತ್ಯಾಚಾರ ಕೇಸ್‌ಗಳು ದಾಖಲಾಗಿವೆ. ಆದರೆ ಅವರು ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಅವರನ್ನು ಹುಡುಕಿ ಕೊಟ್ಟವರಿಗೆ ಒಂದು ಲಕ್ಷ ರೂ.ಬಹುಮಾನ ನೀಡುವುದಾಗಿ ಜನತಾ ಪಕ್ಷ ಘೋಷಿಸಿದೆ.


ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಪಕ್ಷ, ಈ ಘೋಷಣೆಯ ನೋಟಿಸ್‌ ಅನ್ನು ಬೆಂಗಳೂರಿನಲ್ಲಿ ವಿವಿಧಡೆ ಅಂಟಿಸಲು ಮುಂದಾಗಿದೆ. ರೆಡ್ಡಿ ಪೆಟ್ರೋಲ್‌ ಬಂಕ್‌ನಿಂದ ಶಿವಾನಂದ ಸರ್ಕಲ್‌, ಚಾಲುಕ್ಯ ಸರ್ಕಲ್‌, ಎಂ.ಎಸ್‌.ಬಿಲ್ಡಿಂಗ್‌, ಕೆ.ಆರ್‌.ಸರ್ಕಲ್‌, ಫ್ರೀಡಂ ಪಾರ್ಕ್‌, ಮೌರ್ಯ ಸರ್ಕಲ್‌, ಆನಂದದರಾವ್‌ ಸರ್ಕಲ್‌ವರೆಗೆ ನೋಟಿಸ್‌ ಅಂಟಿಸಲಿದೆ.
ಪ್ರಕಟಣೆಯಲ್ಲಿ ಏನಿದೆ?
ಮಹಿಳೆಯರ ಮೇಲಿನ ಲೈಂಗಿಕ-ಮಾನಸಿಕ ದೌರ್ಜನ್ಯ ಹಾಗೂ ಪೆನ್‌ಡ್ರೈವ್‌ ಹಗರಣಕ್ಕೆ ಸಂಬಂಧಿಸಿದಂತೆ ಹಾಸನದ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.

ಈ ಹಗರಣ ದೇಶಾದ್ಯಂತ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಖ್ಯಾತಿ ಪಡೆದಿದೆ. ಇದರಿಂದಾಗಿ ಹಾಸನ ಜಿಲ್ಲೆಯ, ಕರ್ನಾಟಕ ರಾಜ್ಯದ ಸಮಸ್ತ ಕನ್ನಡಿಗರ ಘನತೆಗೆ ಧಕ್ಕೆ ಉಂಟಾಗಿದೆ. ಪ್ರಭಾವಿ ಕುಟುಂಬದ ಹಾಗೂ ಜನಪ್ರತಿನಿಧಿಯೇ ಈ ರೀತಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿರುವ ಆರೋಪ ಹೊತ್ತಿರುವುದು ನಿಜಕ್ಕೂ ನಾಚಿಗೆಗೇಡಿನ ವಿಷಯ. ಪ್ರಕರಣದ ಸತ್ಯಾಸತ್ಯತೆ ಏನೇ ಇದ್ದರೂ, ಆರೋಪಿಯಾದವರು ತನಿಖೆಯನ್ನು ಎದುರಿಸಿದ ತಾನು ನಿರಪರಾಧಿ ಎನ್ನುವುದನ್ನು ನಿರೂಪಿಸಬೇಕು. ಜವಾಬ್ದಾರಿಯುತ ಸಂಸದ ಹುದ್ದೆಯಲ್ಲಿರುವ ವ್ಯಕ್ತಿಯೇ ತಲೆಮರೆಸಿಕೊಂಡಿರುವುದು ತಪ್ಪು ಸಂದೇಶ ರವಾನಿಸಿದಂತಾಗುತ್ತದೆ.


ಕನ್ನಡಿಗರ, ಕರ್ನಾಟಕದ ಘನತೆಯನ್ನು ಮುಖ್ಯವಾಗಿ ಸಂವಿಧಾನದ ಘನತೆಯನ್ನು ಎತ್ತಿ ಹಿಡಿಯುವ ಸಲುವಾಗಿ ರಾಷ್ಟ್ರದ ಪ್ರಜ್ಞಾವಂತ ರಾಜಕೀಯ ಪಕ್ಷವಾದ ನಮ್ಮ ಜನತಾ ಪಕ್ಷದ ವತಿಯಿಂದ ಈ ಪ್ರಕರಣದ ಮುಖ್ಯ ಆರೋಪಿ ಪ್ರಜ್ವಲ್‌ ರೇವಣ್ಣ ಅವರನ್ನು ಹುಡುಕಿ ಕೊಟ್ಟವರಿಗೆ 1 ಲಕ್ಷ ರೂ. ಬಹುಮಾನ ಸಹಿತ ಸನ್ಮಾನವನ್ನು ಘೋಷಿಸುತ್ತಿದ್ದೇವೆ ಎಂದು ನೋಟಿಸ್‌ನಲ್ಲಿ ಬರೆಯಲಾಗಿದೆ.

Admin

Leave a Reply

Your email address will not be published. Required fields are marked *

error: Content is protected !!