ಮಧುಮೇಹ ನಿವಾರಿಸಿಕೊಳ್ಳಲು ಎಲ್ಲರೂ ಪ್ರಯತ್ನಿಸಿದರೆ ತಪ್ಪೇನು?

ಮಧುಮೇಹ ನಿವಾರಿಸಿಕೊಳ್ಳಲು ಎಲ್ಲರೂ ಪ್ರಯತ್ನಿಸಿದರೆ ತಪ್ಪೇನು?

ಆಸ್ಪತ್ರೆ ರಹಿತ ಆರೋಗ್ಯಯುತ ಜೀವನಕ್ಕೆ ಆಯುರ್ವೇದ

ಮಧುಮೇಹ ನಿವಾರಿಸಿಕೊಳ್ಳಲು ಎಲ್ಲರೂ ಪ್ರಯತ್ನಿಸಿ, ಶೇ. 50 ಜನರಲ್ಲಿ ಅನಾಯಾಸವಾಗಿ ಯಶಸ್ಸು ಸಿಗುತ್ತದೆ. ಉಳಿದವರಲ್ಲಿ ಆರೋಗ್ಯ ವೃದ್ಧಿಯಾಗುತ್ತದೆ…

ಇಂದಿನ ನೂರು ಜನ ಮಧುಮೇಹಿಗಳಲ್ಲಿ 50 ಜನರಲ್ಲಿ ಕಫಜ ಪ್ರಮೇಹ ಇದೆ, ಇವರು ಕೇವಲ ಆಹಾರ ಮತ್ತು ಜೀವನ ಪದ್ಧತಿಯಿಂದಲೇ ಮಧುಮೇಹವನ್ನು ನಿವಾರಿಸಿಕೊಳ್ಳಬಹುದು! ಈ 50 ಜನರಲ್ಲಿ ನೀವೂ ಒಬ್ಬರಾಗಿರಬಹುದು! ಮಧುಮೇಹ ಹೋಗುತ್ತದೆ ಎಂದರೆ ಪ್ರಯತ್ನಿಸಬಾರದೇಕೆ? ಯಶಸ್ಸು ಸಿಗದಿದ್ದರೂ, ಖಂಡಿತಾ ಎಲ್ಲರಿಗೂ ಆರೋಗ್ಯದಲ್ಲಿ ಅತ್ಯದ್ಭುತ ಸುಧಾರಣೆ ಕಂಡುಬರುತ್ತದೆ!

ಏನು ಪ್ರಯತ್ನ ಮಾಡಬೇಕು:

ನಿತ್ಯವೂ ಸ್ವಲ್ಪ ಸ್ವಲ್ಪವೇ ವ್ಯಾಯಾಮ ಆರಂಭಿಸಿ, ನಿತ್ಯವೂ ಚೆನ್ನಾಗಿ ಬೆವರು ಬರುವ ತನಕ ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಿ.

ಎಣ್ಣೆ ಪದಾರ್ಥಗಳ ಸೇವನೆ ಬಿಡುವುದಲ್ಲ, ಅದರ ಸರಿಯಾದ ವಿಧಾನ ತಿಳಿದುಕೊಂಡು ಬಳಸಿರಿ.

ಗೋಧಿ, ಮೈದಾ, ಉದ್ದಿನಬೇಳೆಗಳು ಎಲ್ಲಾ ರೀತಿಯಿಂದಲೂ ಹುಳಿಬಿಡುವ ಕಾರಣ ಪಿತ್ತವನ್ನು ಅತ್ಯಂತ ಹೆಚ್ಚು ವಿಕಾರಗೊಳಿಸಿ ಮಧುಮೇಹವನ್ನು ಹೆಚ್ಚಿಸುವವು, ಆದ್ದರಿಂದ ದಯಮಾಡಿ ಅವುಗಳನ್ನು ತ್ಯಜಿಸಿರಿ.

ನೇರ ಹುಳಿಗಳಾದ ಉಪ್ಪಿನಕಾಯಿ, ಹುಣಸೆಹಣ್ಣು, ಟೊಮ್ಯಾಟೊ ಇವುಗಳನ್ನು ಮಿತಪ್ರಮಾಣದಲ್ಲಿ ಬಳಸಿ.
ಹಸಿಯದಲೆ ಊಟ ಮಾಡದಿರಿ, ಹಸಿದೂ ಸಹ ಉಪವಾಸ ಮಾಡದಿರಿ.
ಯಾವ ಕಾಲದಲ್ಲೂ ಹಸಿವೆಯ ಪ್ರಮಾಣಕ್ಕಿಂತ ತುಸು ಕಡಿಮೆ ಪ್ರಮಾಣದ ಆಹಾರ ಸೇವಿಸಿ.

ನಿಮ್ಮ ಮಧುಮೇಹ ನಿಯಂತ್ರಕ ಮಾತ್ರೆಗಳ ಡೋಜ್‌ ಅನ್ನು ನಿಧಾನವಾಗಿ ಕಡಿಮೆ ಮಾಡಿ, ಒಮ್ಮೆಲೇ ಬಿಡಬೇಡಿ ಅಥವಾ ನಿರಂತರ ಅದೇ ಪ್ರಮಾಣವನ್ನು ಮುಂದುವರಿಸುವುದೂ ಸಹ ಬೇಡ.

ನಿಮ್ಮ ಮನಸ್ಸನ್ನು ಬೇರೆಯವರ ನಡವಳಿಕೆಗಳ ಮೇಲೆ ನೋಯಿಸಬೇಡಿ, ದುಃಖ ಕೊಡಬೇಡಿ, ಕೊರಗಬೇಡಿ, ಕುಸಿದುಹೋಗದಿರಿ… ಕೇವಲ ನಿಮ್ಮ ಜೀವನ ಹೇಗೆ ರೂಪುಗೊಳ್ಳಬೇಕಿದೆಯೋ ಅದನ್ನೇ ಪ್ರಯತ್ನಿಸಿ. ಜೊತೆಗಾರರ ಸಹಕಾರ-ನಿರೀಕ್ಷೆಯಲ್ಲಿ ನೊಂದು, ಬೆಂದುಹೋಗದಿರಿ. ಇದು ಮಧುಮೇಹ ಮಾತ್ರವಲ್ಲ ಸರ್ವ ವ್ಯಾಧಿಗಳ ಸಮೂಲ ಕಾರಣವಾಗಿದೆ..ಆನಂದದಿಂದ ಇರುವುದನ್ನು ಪ್ರಯತ್ನಿಸಿ.

ಹೀಗೆ ಮಾಡುತ್ತಾ, ಮಾಡುತ್ತಾ ಇರಿ ಮತ್ತು ನಿಯಮಿತವಾಗಿ ರಕ್ತದ ಸಕ್ಕರೆ ಪ್ರಮಾಣ ಪರೀಕ್ಷಿಸುತ್ತಾ, ಮಾತ್ರೆಗಳ ಪ್ರಮಾಣ ಕಡಿಮೆ ಮಾಡುತ್ತಾ ಸುಮ್ಮನೇ ಮೇಲಿನ ವಿಧಾನವನ್ನು ಅನುಸರಿಸುತ್ತಾ ಇರಿ, ಯಾವ ಅವಸರವೂ ಬೇಡ, ಕುತೂಹಲ ಮತ್ತು ನಿರೀಕ್ಷೆಯಂತೂ ಖಂಡಿತಾ ಬೇಡ, ಒಂದೊಮ್ಮೆ ಮಾತ್ರೆಗಳು ನಿಂತುಹೋಗುವುದನ್ನು ನೀವೇ ಕಂಡುಕೊಳ್ಳುವಿರಿ!

ವಿಶ್ವ ಹೃದಯಾಶೀರ್ವಾದವಂ ಬಯಸಿ

~ಡಾ. ಮಲ್ಲಿಕಾರ್ಜುನ ಡಂಬಳ
ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ; ಶಿವಮೊಗ್ಗ, ದಾವಣಗೆರೆ

Admin

Leave a Reply

Your email address will not be published. Required fields are marked *

error: Content is protected !!