ಹಣ್ಣು ಮತ್ತು ತರಕಾರಿ ಬೆಳೆ ನಷ್ಟ ಪರಿಹಾರಧನಕ್ಕಾಗಿ ಅರ್ಜಿ ಆಹ್ವಾನ..!

ಹಣ್ಣು ಮತ್ತು ತರಕಾರಿ ಬೆಳೆ ನಷ್ಟ ಪರಿಹಾರಧನಕ್ಕಾಗಿ ಅರ್ಜಿ ಆಹ್ವಾನ..!

ಶಿವಮೊಗ್ಗ: ಜಿಲ್ಲಾ ತೋಟಗಾರಿಕೆ ಇಲಾಖೆಯು ಪ್ರಸ್ತುತ ಕೊರೋನಾ ಲಾಕ್‍ಡೌನ್ ಕಾರಣದಿಂದ ಜಿಲ್ಲೆಯಲ್ಲಿನ ಹಣ್ಣು ಮತ್ತು ತರಕಾರಿ ಬೆಳೆಗಾರರು ಮಾರುಕಟ್ಟೆಯಿಲ್ಲದೇ ನಷ್ಟಹೊಂದಿದ್ದು, ಅಂತಹ ಬೆಳೆಗಾರರಿಗೆ ಸರ್ಕಾರವು ಪರಿಹಾರ ಹಾಗೂ ಮುಂಬರುವ ದಿನಗಳಲ್ಲಿ ಹಣ್ಣು ಮತ್ತು ತರಕಾರಿ ಬೆಳೆಯಲು ಉತ್ತೇಜಿಸಿ, ಪ್ರೋತ್ಸಾಹಿಸುವ ಸಲುವಾಗಿ ರೈತರಿಗೆ ಪ್ರತಿ ಹೆಕ್ಟೇರ್‍ಗೆ ರೂ. 15,000/-ಗಳ ಪರಿಹಾರ ಘೋಷಿಸಿದ್ದು, ಅಂತಹ ಬೆಳೆಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ.

ಹಣ್ಣಿನ ಬೆಳೆಗಳಾದ ಅನಾನಸ್, ಪಪ್ಪಾಯ, ಅಂಜೂರ, ಕಲ್ಲಂಗಡಿ, ಬಾಳೆ, ಖರ್ಬೂಜ ಮತ್ತು ತರಕಾರಿ ಬೆಳೆಗಳಾದ ಬೂದುಗುಂಬಳ, ಎಲೆಕೋಸು, ಹೂಕೋಸು, ಹಸಿರುಮೆಣಸಿನಕಾಯಿ, ಟೊಮ್ಯಾಟೊ ಬೆಳೆಗಳನ್ನು ಬೆಳೆದು ಬೆಳೆ ಸಮೀಕ್ಷೆಯಲ್ಲಿ ನಮೂದಾಗಿರುವ ರೈತರುಗಳಿಗೆ ಅವಕಾಶವಿರುತ್ತದೆ. ಅಂತಹ ರೈತರುಗಳು ಸಮೀಪದ ತಾಲ್ಲೂಕು ತೋಟಗಾರಿಕೆ ಕಛೇರಿಯನ್ನು ಸಂಪರ್ಕಿಸಿ ಅಗತ್ಯ ದಾಖಲೆಗಳಾದ ಪಹಣಿ, ಆಧಾರ್ ಕಾರ್ಡ್, ರೈತರ ಬ್ಯಾಂಕ್ ಖಾತೆ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿಗಳನ್ನು ಹಾಗೂ ಸ್ವಯಂ ದೃಢೀಕೃತ ಘೋಷಣಾ ಪತ್ರಗಳನ್ನು ಜೂನ್ 16 ರೊಳಗೆ ನೀಡುವುದು. ಒಬ್ಬ ಫಲಾನುಭವಿಯು ಒಂದು ಹೆಕ್ಟೇರ್‍ವರೆಗೂ ಪರಿಹಾರಧನ ಪಡೆಯಲು ಅವಕಾಶವಿರುತ್ತದೆ.

2019-20ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಬೆಳೆ ಸಮೀಕ್ಷೆಗೆ ಅನುಗುಣವಾಗಿ ಹಣ್ಣು ತರಕಾರಿ ಬೆಳೆದು, ಕೊಯ್ಲಿಗೆ ಬಂದಿದ್ದು, ಮಾರುಕಟ್ಟೆಯಿಲ್ಲದೇ ನಷ್ಟ ಉಂಟಾಗಿದ್ದಲ್ಲಿ, ಅಂತಹ ಬೆಳೆಗಾರರಿಗೆ ಪರಿಹಾರ ನೀಡಲಾಗುವುದು. ಸರ್ಕಾರವು 2019-20ನೇ ಸಾಲಿನಲ್ಲಿ ಈಗಾಗಲೇ ಮುಂಗಾರು ಹಾಗೂ ಹಿಂಗಾರು ಸಾಲುಗಳ ಬೆಳೆ ಸರ್ವೇ ಕಾರ್ಯ ಮುಗಿಸಿರುತ್ತದೆ ಹಾಗೂ ಬೇಸಿಗೆ ಸರ್ವೇ ಕಾರ್ಯವು ಸಹ ಮುಗಿಯುವ ಹಂತದಲ್ಲಿರುತ್ತದೆ. ಈ ಸರ್ವೇಯಲ್ಲಿ ನಮೂದಾಗಿರುವ ಹಣ್ಣು ಮತ್ತು ತರಕಾರಿ ಬೆಳೆದ ರೈತರಿಗೆ ಪರಿಹಾರ ನೀಡಲಾಗುವುದು. ಕಲ್ಲಂಗಡಿ ಮತ್ತು ಖರ್ಬೂಜ ಬೇಸಿಗೆ ಬೆಳೆಯಾಗಿದ್ದು, ಬೆಳೆ ಸಮೀಕ್ಷೆಯಲ್ಲಿ ನಮೂದಾಗಿಲ್ಲದಿದ್ದರೇ, ರೈತರಿಂದ ಅರ್ಜಿ ಪಡೆದು ತೋಟದಲ್ಲಿರುವ ಬೆಳೆಯನ್ನು ಪರಿಶೀಲಿಸಿ, ಪರಿಹಾರಧನ ನೀಡಲಾಗುವುದು.

ಹೋಬಳಿವಾರು ಹಾಗೂ ಗ್ರಾಮವಾರು ಬೆಳೆ ಸಮೀಕ್ಷೆಯಲ್ಲಿನ ಹಣ್ಣು ಮತ್ತು ತರಕಾರಿ ಬೆಳೆಗಾರರ ದೃಢೀಕರಿಸಿದ ಪಟ್ಟಿಯನ್ನು ಗ್ರಾಮ ಪಂಚಾಯಿತಿ, ರೈತ ಸಂಪರ್ಕ ಕೇಂದ್ರ ಹಾಗೂ ತಾಲ್ಲೂಕು ತೋಟಗಾರಿಕೆ ಇಲಾಖೆ ಕಛೇರಿಯ ನಾಮಫಲಕದಲ್ಲಿ ಪ್ರದರ್ಶಿಸಲಾಗುವುದು. ಈ ಪಟ್ಟಿಗಳಲ್ಲಿ ವ್ಯತ್ಯಾಸಗಳಿದ್ದು, ರೈತರು ಆಕ್ಷೇಪಣೆಗಳು ಇದ್ದಲ್ಲಿ, ಅಂತಹ ಆಕ್ಷೇಪಣೆಗಳನ್ನು ಜೂನ್-16 ರೊಳಗೆ ಸಂಬಂಧಪಟ್ಟ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಗೆ ಸಲ್ಲಿಸಬಹುದಾಗಿರುತ್ತದೆ.

ಬಾಳೆ ಬೆಳೆಗೆ ಸಂಬಂಧಿಸಿದಂತೆ ಮಾರ್ಚ್ 2ನೇ ವಾರದ ನಂತರದ ಕಟಾವಿಗೆ ಬಂದಿರುವ ಬೆಳೆಗೆ ಮಾತ್ರ ಪರಿಹಾರ ನೀಡಲಾಗುವುದು. ಈ ರೀತಿ ಬೆಳೆಯನ್ನು ಪರಿಶೀಲಿಸಲು, ಹೋಬಳಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಮಿತಿಗಳಿದ್ದು, ಸಮಿತಿಗಳು ಪರಿಶೀಲಿಸಿದ ನಂತರ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಸಮಿತಿಯು ಅಂತಿಮವಾಗಿ ತೀರ್ಮಾನಿಸಿ, ಪರಿಹಾರಧನ ವಿತರಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಹಾಗೂ ಹೋಬಳಿ ಮಟ್ಟದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಅಥವಾ ದೂ.ಸಂ.: 08182-222633 ನ್ನು ಸಂಪರ್ಕಿಸುವುದು.

Admin

Leave a Reply

Your email address will not be published. Required fields are marked *

error: Content is protected !!