ಶಿವಮೊಗ್ಗ ಜಿಲ್ಲೆಯಲ್ಲಿ ಸೇವೆಗಳ ಭಾಗಶಃ ನಿರ್ಭಂದಕ್ಕೆ ಚಿಂತನೆ:ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್..!

ಶಿವಮೊಗ್ಗ ಜಿಲ್ಲೆಯಲ್ಲಿ ಸೇವೆಗಳ ಭಾಗಶಃ ನಿರ್ಭಂದಕ್ಕೆ ಚಿಂತನೆ:ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್..!

ಶಿವಮೊಗ್ಗ, : ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿ ಹಾಗೂ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಗತ್ಯ ವಸ್ತುಗಳ ಸೇವೆಯನ್ನು ಹೊರತುಪಡಿಸಿ ಇತರ ಎಲ್ಲಾ ಸೇವೆಗಳನ್ನು ಭಾಗಶಃ ನಿರ್ಬಂಧಿಸಲು ಕ್ರಮ ಕೈಗೊಳ್ಳಲಾಗುವುದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದರು.

ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಹಾಲು, ತರಕಾರಿ, ಔಷಧಿ, ದಿನಸಿ ವಸ್ತುಗಳು ಸೇರಿದಂತೆ ಅಗತ್ಯ  ಸೇವೆಗಳ ಅಂಗಡಿ ಮುಂಗಟ್ಟುಗಳನ್ನು ಮಾತ್ರ ಬೆಳಿಗ್ಗೆ 10ರಿಂದ ಮಧ್ಯಾಹ್ನ 2ಗಂಟೆಯವರೆಗೆ ತೆರೆಯಲು ಅವಕಾಶ ಮಾಡಲಾಗುವುದು. ಇನ್ನಿತರ ಉತ್ಪಾದನಾ ವಸ್ತುಗಳ ಮಳಿಗೆಗಳನ್ನು ಮಾರ್ಚ್ 31ರವರೆಗೆ ಮುಚ್ಚಲು ಸೂಚಿಸಲಾಗುವುದು. 

ರಾತ್ರಿ 8ಗಂಟೆಯಿಂದ ಬೆಳಿಗ್ಗೆ 7ಗಂಟೆಯವರೆಗೆ ಬಸ್ ಸೇವೆಯನ್ನು ನಿರ್ಬಂಧಿಸಲಾಗುವುದು. ಸಾರ್ವಜನಿಕರು ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಮನೆಯಿಂದ ಹೊರಬರಬೇಕು ಎಂದು ಅವರು ಈ ಸಂದರ್ಭದಲ್ಲಿ ಮನವಿ ಮಾಡಿದರು.

ಕಾರ್ಯಪಡೆ ರಚನೆ:

ಕರೋನಾ ವೈರಸ್ ಹರಡುವಿಕೆಯನ್ನು ತಡೆಯಲು ಜಿಲ್ಲೆಯಲ್ಲಿ ಎರಡು ಕಾರ್ಯಪಡೆಗಳನ್ನು ರಚಿಸಲಾಗಿದೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳು, ಚಿಕಿತ್ಸೆ ಪ್ರಕ್ರಿಯೆ ಇತ್ಯಾದಿಗಳನ್ನು ನಿರ್ವಹಿಸಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಕಾರ್ಯಪಡೆ ರಚಿಸಲಾಗಿದೆ. ಇದೇ ರೀತಿ ಜಿಲ್ಲಾಡಳಿತಕ್ಕೆ ವೈದ್ಯಕೀಯ ಸಲಹೆಗಳು ಮತ್ತು ನೆರವು ಒದಗಿಸಲು ಖಾಸಗಿ ಆಸ್ಪತ್ರೆಗಳ ಹಿರಿಯ ವೈದ್ಯರನ್ನು ಒಳಗೊಂಡ ಮೆಡಿಕಲ್ ಕಾರ್ಯಪಡೆ ರಚಿಸಲಾಗಿದೆ. ಈ ಕಾರ್ಯಪಡೆ ಪ್ರತಿ ದಿನ ಬೆಳಿಗ್ಗೆ 10ಗಂಟೆಗೆ ಸಭೆ ಸೇರಿ ಕಾರ್ಯ ಯೋಜನೆ ರೂಪಿಸಲಿದೆ ಎಂದರು.

ಖಾಸಗಿ ಆಸ್ಪತ್ರೆ ಸೌಲಭ್ಯ ಬಳಕೆ:

ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ವೆಂಟಿಲೇಟರ್ ಸೇರಿದಂತೆ ಎಲ್ಲಾ ವೈದ್ಯಕೀಯ ಸೇವೆಗಳ ವಿವರಗಳನ್ನು ಪಡೆಯಲಾಗಿದ್ದು, ಅಗತ್ಯ ಬಿದ್ದರೆ ಈ ಸೌಲಭ್ಯಗಳನ್ನು ಬಳಸಿಕೊಳ್ಳುವ ಕುರಿತು ಸೂಚನೆ ನೀಡಲಾಗಿದೆ. ಅಗತ್ಯ ಬಿದ್ದರೆ ಖಾಸಗಿ ವೈದ್ಯರ ಸೇವೆಯನ್ನು ಪಡೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಕೀಟ ನಾಶಕ ಸಿಂಪಡಿಸುವಿಕೆ:

ನಗರ ವ್ಯಾಪ್ತಿಯಲ್ಲಿ ಕೀಟನಾಶಕ ಸಿಂಪಡಿಸುವಿಕೆ ಕಾರ್ಯವನ್ನು ನಿರಂತರವಾಗಿ ಮಾಡಬೇಕು. ಬಸ್ ನಿಲ್ದಾಣ, ಬಸ್‍ಗಳಿಗೆ ಸಹ ಕೀಟನಾಶಕ ಸಿಂಪಡಿಸುವಿಕೆ ಪ್ರತಿದಿನ ಮಾಡಲು ಸೂಚನೆ ನೀಡಲಾಗಿದೆ. ಹೂ ಹಣ್ಣು ಸೇರಿದಂತೆ ಎಲ್ಲಾ ಮಾರುಕಟ್ಟೆಗಳಿಗೆ ನಿಗದಿಪಡಿಸಲಾದ ವ್ಯವಹಾರ ಅವಧಿ ಮುಗಿದ ಬಳಿಕ ಸಂಪೂರ್ಣವಾಗಿ ಕೀಟನಾಶಕ ಸಿಂಪಡಿಸುವ ಕಾರ್ಯ ಕೈಗೊಳ್ಳಬೇಕು. ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ದೊಡ್ಡ ಗ್ರಾಮ ಪಂಚಾಯತ್‍ಗಳ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯವನ್ನು ನಿರಂತರವಾಗಿ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದರು.

ಲಾಡ್ಜ್‍ಗಳಿಗೆ ಸೂಚನೆ:

ತಮ್ಮಲ್ಲಿಗೆ ಬರುವ ಪ್ರತಿಯೊಬ್ಬರ ಪ್ರಯಾಣ ಇತಿಹಾಸ ಸೇರಿದಂತೆ ಸಮಗ್ರ ವಿವರಗಳನ್ನು ಪಡೆದ ಬಳಿಕ ಮಾತ್ರ ಕೋಣೆ ಒದಗಿಸುವಂತೆ ಎಲ್ಲಾ ಲಾಡ್ಜ್ ಮಾಲಕರಿಗೆ ಸೂಚನೆ ನೀಡಲಾಗಿದೆ. ವಿದೇಶಗಳಿಂದ ಅಥವಾ ಕರೋನಾ ಪೀಡಿತ ಜಿಲ್ಲೆಗಳಿಂದ ಆಗಮಿಸುವವರ ವಿವರಗಳನ್ನು ಸ್ಥಳೀಯ ಆಡಳಿತಕ್ಕೆ ತಕ್ಷಣ ನೀಡಲು ತಿಳಿಸಲಾಗಿದೆ. ಪ್ರತಿಯೊಬ್ಬರು ನೀಡಿರುವ ಮಾಹಿತಿಯನ್ನು ಪರಿಶೀಲಿಸಲಾಗುವುದು ಎಂದು ಅವರು ಹೇಳಿದರು.

ಹಬ್ಬ ಸರಳವಾಗಿ ಆಚರಿಸಿ:

ಯುಗಾದಿ ಹಬ್ಬವನ್ನು ಪ್ರತಿಯೊಬ್ಬರೂ ಸರಳವಾಗಿ ಆಚರಿಸುವ ಮೂಲಕ ಕರೋನಾ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಬೇಕು ಎಂದು ಅವರು ಮನವಿ ಮಾಡಿದರು.

ಎಲ್ಲಾ ಪ್ರಮುಖ ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲಾಗಿದ್ದು, ಕರೋನಾ ತಡೆಗಟ್ಟಲು ಎಲ್ಲರೂ ಸಹಕರಿಸುವ ಭರವಸೆ ನೀಡಿದ್ದಾರೆ.

ಭಿಕ್ಷುಕರ ಪುನರ್ವಸತಿ:

ನಗರ ವ್ಯಾಪ್ತಿಯಲ್ಲಿರುವ ಎಲ್ಲಾ ಭಿಕ್ಷುಕರನ್ನು ಸಮಾಜ ಕಲ್ಯಾಣ ಇಲಾಖೆಯ ಪುನರ್ವಸತಿ ಕೇಂದ್ರಕ್ಕೆ ಸೇರಿಸುವಂತೆ ಸೂಚನೆ ನೀಡಲಾಗಿದೆ ಎಂದರು.
ಹಕ್ಕಿ ಜ್ವರ: ನೆರೆಯ ಜಿಲ್ಲೆಯಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೋಳಿ ಮಾಂಸ ಮತ್ತು ಮೊಟ್ಟೆ ಮಾರಾಟದ ಮೇಲೆ ನಿರ್ಬಂಧ ವಿಧಿಸಲಾಗಿದೆ.

ಕೆಎಫ್‍ಡಿ ನಿಯಂತ್ರಣದಲ್ಲಿದೆ:

ಮಂಗನ ಕಾಯಿಲೆ ನಿಯಂತ್ರಣದಲ್ಲಿದ್ದು, ನಿರಂತರ ನಿಗಾ ವಹಿಸಲಾಗಿದೆ. ಸೋಂಕು ಪೀಡಿತರಿಗೆ ಮಣಿಪಾಲ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಚೆಕ್‍ಪೋಸ್ಟ್:

ಮಂಗಳೂರಿನಲ್ಲಿ ಕರೋನಾ ಪಾಸಿಟಿವ್ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಆಗಮಿಸುವ ವಾಹನಗಳನ್ನು ಹಾಗೂ ದಾವಣಗೆರೆಯಲ್ಲಿ ಕೋಳಿ ಜ್ವರ ಪ್ರಕರಣ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ತಪಾಸಣೆ ನಡೆಸಲು ಗಡಿಭಾಗದಲ್ಲಿ ಚೆಕ್‍ಪೋಸ್ಟ್ ತೆರೆಯಲಾಗುವುದು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶಾಂತರಾಜು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಮತ್ತಿತರರು ಉಪಸ್ಥಿತರಿದ್ದರು.

Admin

Leave a Reply

Your email address will not be published. Required fields are marked *

error: Content is protected !!