ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ದಿನಗೂಲಿ ನೌಕರ ಸಾವು: ಕುಟುಂಬಸ್ಥರಿಂದ ಪ್ರತಿಭಟನೆ

ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ದಿನಗೂಲಿ ನೌಕರ ಸಾವು: ಕುಟುಂಬಸ್ಥರಿಂದ ಪ್ರತಿಭಟನೆ

ಸೊರಬ: ಮೆಸ್ಕಾಂ ಇಲಾಖೆಯ ನಿರ್ಲಕ್ಷ್ಯಕ್ಕೆ ದಿನಗೂಲಿ ನೌಕರನೊಬ್ಬ ಮೃತ ಪಟ್ಟಿರುವುದಕ್ಕೆ ಆಕ್ರೋಶಗೊಂಡ ಆತನ ಕುಟುಂಬಸ್ಥರು ಮತ್ತು ಎಣ್ಣೆಕೊಪ್ಪ ಗ್ರಾಮಸ್ಥರು ಮೆಸ್ಕಾಂ ಇಲಾಖೆಯ ಉಪ ವಿಭಾಗ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ತಾಲೂಕಿನ ಆನವಟ್ಟಿಯಲ್ಲಿ ಸೋಮವಾರ ನಡೆಯಿತು.


ಘಟನೆ ಹಿನ್ನೆಲೆ: ಎಣ್ಣೆಕೊಪ್ಪ ಗ್ರಾಮದ ರವಿ ದುರ್ಗಪ್ಪ ಎಂಬ 24 ವರ್ಷದ ಯುವಕ ವಿದ್ಯುತ್ ಗುತ್ತಿಗೆದಾರರ ಬಳಿ ದಿನಗೂಲಿ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದನು. ಕುಬಟೂರು ಗ್ರಾಮದಲ್ಲಿ ಡಿ.17 ರಂದು ವಿದ್ಯುತ್ ಪರಿವರ್ತಕ ಅಳವಡಿಕೆ ವೇಳೆ ಏಕಾಏಕಿ ವಿದ್ಯುತ್ ಪ್ರವಹಿಸಿದ ಪರಿಣಾಮ ವಿದ್ಯುತ್ ತಗುಲಿ ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದನು. ಆನವಟ್ಟಿಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಸೋಮವಾರ ಮೃತಪಟ್ಟಿದ್ದಾನೆ. ಕುಟುಂಬಸ್ಥರಿಗೆ ಆಧಾರವಾಗಿದ್ದ ಯುವಕನ ಸಾವಿಗೆ ಮೆಸ್ಕಾಂ ಇಲಾಖೆಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರೇ ನೇರ ಹೊಣೆ ಎಂದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆರೋಪಿಸಿದರು.


ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಕೆ. ಮಹಾಲಿಂಗಪ್ಪ ಮಾತನಾಡಿ, ಮೆಸ್ಕಾಂ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿ ತನದಿಂದ ಯುವಕನೊಬ್ಬ ಮೃತಪಟ್ಟಿದ್ದಾನೆ. ಘಟನೆಯಿಂದ ಕುಟುಂಬಕ್ಕೆ ಮೂಲಧಾರವೇ ಇಲ್ಲದಂತಾಗಿದೆ. ಕೂಡಲೇ ನಿರ್ಲಕ್ಷ್ಯ ತೋರಿದ ಮೆಸ್ಕಾಂ ಅಧಿಕಾರಿಗಳ ವಿರುದ್ಧ ಮೇಲಧಿಕಾರಿಗಳು ಕ್ರಮ ಕೈಗೊಂಡು, ಮೃತ ದಿನಗೂಲಿ ನೌಕರನ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.


ತಾಪಂ ಮಾಜಿ ಅಧ್ಯಕ್ಷ ರುದ್ರಪ್ಪ ಕಡ್ಲೇರ್ ಮಾತನಾಡಿ, ಮೆಸ್ಕಾಂ ಇಲಾಖೆಯ ಆನವಟ್ಟಿ ಉಪ ವಿಭಾಗದಲ್ಲಿ ಅನೇಕ ವಿದ್ಯುತ್ ಅವಘಡಗಳು ಸಂಭವಿಸುತ್ತಿವೆ. ಆದರೂ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಇದೀಗ ಬಾಳಿ ಬದುಕಬೇಕಾದ ಯುವಕನೊಬ್ಬನ ಸಾವಿಗೆ ಅಧಿಕಾರಿಗಳು ಕಾರಣರಾಗಿದ್ದಾರೆ. ಇಲಾಖಾ ಮೇಲಧಿಕಾರಿಗಳು ಮೃತ ಯುವಕನ ಕುಟುಂಬಸ್ಥರಿಗೆ ನ್ಯಾಯಕೊಡಿಸುವಲ್ಲಿ ವಿಫಲರಾಗಿದ್ದಾರೆ. ಇದನ್ನು ವಿರೋಧಿಸಿ ಮಂಗಳವಾರ ಯುವಕನ ಶವವನ್ನು ಇಲಾಖೆಯ ಕಚೇರಿಯ ಮುಂಭಾಗದಲ್ಲಿಟ್ಟು ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಕೇಂದ್ರ ಸಮಿತಿ ಸದಸ್ಯ ಮಹಾಲಿಂಗೇಗೌಡ, ಜಿಲ್ಲಾ ನಿರ್ದೇಶಕ ಸಮೀರ್ ಬಾಷಾ, ಎಸ್.ಕೆ. ಲೋಕೇಶ್, ಮಹೇಶ್ ಕವಲಿ, ಎಚ್.ಎಂ. ಮುತ್ತೇಶ, ಹನುಮಂತಪ್ಪ, ರಾಘವೇಂದ್ರ ಆಚಾರ್, ದಿವಾಕರಯ್ಯ, ಶಿವಯೋಗಿಸ್ವಾಮಿ, ಕುಟುಂಬಸ್ಥರಾದ ಅಶ್ವಿನಿ, ಜಯಮ್ಮ, ಸಾವಿತ್ರಮ್ಮ, ಖಂಡ್ಯಪ್ಪ, ಗ್ರಾಮಸ್ಥರಾದ ಹೊನ್ನಪ್ಪ, ಮಂಜಪ್ಪ ಉದ್ರಿ, ಧರ್ಮಾನಾಯ್ಕ್, ಮೈಲಾರಿ ನಾಯ್ಕ್, ಎನ್.ರವಿ, ಬಸವಣ್ಯಪ್ಪ ಉಪ್ಪಾರ್, ಅಶೋಕ್, ಆನಂದ, ಸುರೇಶ, ಪರಸಪ್ಪ, ಸೇರಿದಂತೆ ಮತ್ತಿತರರಿದ್ದರು.

News by Raghu shikari-7411515737

Admin

Leave a Reply

Your email address will not be published. Required fields are marked *

error: Content is protected !!