ಭಾರತೀಯ ಸಂಸ್ಕೃತಿ ಹಬ್ಬಗಳ ಮಹತ್ವ ನಿಮಗೆ ತಿಳಿದಿದೆಯೇ..??

ಭಾರತೀಯ ಸಂಸ್ಕೃತಿ ಹಬ್ಬಗಳ ಮಹತ್ವ ನಿಮಗೆ ತಿಳಿದಿದೆಯೇ..??

ಪುರಾತನ ತತ್ವಶಾಸ್ತ್ರವು ‘ವಸುದೈವ ಕುಟುಂಬಕಂ’ ಎಂಬ ಉಕ್ತಿಯನ್ನು ಸಾರಿ ಹೇಳಿದೆ. ಇದರ ಅರ್ಥ ಜಗತ್ತೇ ಒಂದು ಕುಟುಂಬವಿದ್ದಂತೆ ಎಂದು. ಮಾನವೀಯತೆ, ಸಹಬಾಳ್ವೆ, ಸಹೋದರತ್ವ, ಸಹಾನುಭೂತಿ, ಭವ್ಯತೆ, ಸಹನೆ ಮತ್ತು ಸಾಮರಸ್ಯ ಇವೆಲ್ಲವನ್ನೂ ಒಳಗೊಂಡಿರುವ ವ್ಯವಸ್ಥೆಯೇ ಈ ಸಮಾಜ.

ಕುಟುಂಬ ವ್ಯವಸ್ಥೆಯು ಆಯಾ ಪ್ರದೇಶಕ್ಕೆ ತಕ್ಕ ಹಾಗೆ ಅತ್ಯಂತ ತ್ವರಿತಗತಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೆ ಮಾನವೀಯ ಮೌಲ್ಯಗಳನ್ನು ಕಲಿಸುತ್ತದೆ. ಹಾಗಾಗಿ ಕುಟುಂಬದ ಪ್ರತಿಯೊಬ್ಬ ವ್ಯಕ್ತಿಯು ತಾಳ್ಮೆ, ಶಾಂತಿಯುತ ಬಾಳ್ವೆ, ಕಷ್ಟ ಸಹಿಷ್ಣುತೆಗಳಿಂದ ಸಮೃದ್ಧಯುತವಾದ ಪ್ರಪಂಚದ ನಿರ್ಮಾಣಕ್ಕೆ ಸಾಕ್ಷಿಯಾಗುತ್ತಾನೆ.

ಹಿಂದೂ ಸಮಾಜವು ಒಂದು ಗುರುತರ ಸಂಸ್ಥೆಯಾಗಿದ್ದು, ಇದು ಇಂದಿಗೂ ಸಮಾಜದ ಭಾಗವಾಗಿ ಉಳಿದಿರುತ್ತದೆ. ಪ್ರಾಚೀನ ಕಾಲದಿಂದಲೂ ಭಾರತೀಯ ಸಂಸ್ಕೃತಿಯು ಹಿಂದೂ ಕುಟುಂಬ ಪದ್ದತಿಯೊಂದಿಗೆ ಸೇರಿಕೊಂಡಿರುತ್ತದೆ‌

ಹಬ್ಬಗಳ ಮಹತ್ವ ನಿಮಗೆ ತಿಳಿದಿದೆಯೇ?

ಕುಟುಂಬ ವ್ಯವಸ್ಥೆಯಲ್ಲಿ ಹಬ್ಬಗಳನ್ನು ಆಚರಿಸುವ ಪ್ರಕ್ರಿಯೆ ಬಹಳ ಹಿಂದಿನಿಂದ ರೂಢಿಗತವಾಗಿದೆ. ಆಯಾ ಪ್ರದೇಶಕ್ಕೆ ತಕ್ಕ ಹಾಗೆ ಹಬ್ಬಗಳನ್ನು ಅನೇಕ ರೀತಿಯಲ್ಲಿ ಅವರವರ ಧರ್ಮಕ್ಕನುಸಾರವಾಗಿ ವರ್ಷವಿಡೀ ಆಚರಿಸಲಾಗುತ್ತದೆ.

ದೀಪಾವಳಿ ಮತ್ತು ಹೋಳಿಯಂತಹ ಹಬ್ಬಗಳನ್ನು ಈಗ ಕೇವಲ ಭಾರತವಲ್ಲದೇ ಪ್ರಪಂಚದಾದ್ಯಂತ ಆಚರಿಸಲಾಗುತ್ತಿದೆ.

ಅಲ್ಲದೇ ಹಲವು ಮತಪಂಥಗಳ ಜನರು ಶತಶತಮಾನಗಳಿಂದ ಇಲ್ಲಿ ನೆಲೆಸಿರುವ ಕಾರಣ ಅವರ ಹಬ್ಬಗಳೂ ಆಚರಣೆಯಲ್ಲಿವೆ. ಆಯಾಯ ಸಂಪ್ರದಾಯಸ್ಥರಿಗೆ ಮೀಸಲಾದ ಹಬ್ಬಗಳನ್ನು ಮುಕ್ತವಾಗಿ ಆಚರಿಸಲಾಗುವುದು.

ಒಟ್ಟಿನಲ್ಲಿ ಭಾರತದಲ್ಲಿ ಪ್ರತಿದಿನವೂ ಒಂದಲ್ಲ ಒಂದು ದಿನ ಹಬ್ಬ ಆಚರಿಸಲಾಗುತ್ತದೆ.

ಮೂಲತಃ ಈ ಹಬ್ಬಗಳು ವಿಜಯೋತ್ಸವಗಳಾಗಿರಬೇಕು. ದುಷ್ಟಶಕ್ತಿಯನ್ನು ದಮನ ಮಾಡಿದುದರ ಜ್ಞಾಪಕಾರ್ಥವಾಗಿ ಇವು ಆಚರಣೆಯಲ್ಲಿ ಬಂದಿರಬೇಕು.

ಕೆಲವೊಂದು ಹಬ್ಬಗಳು ಅಂಥ ವಿಜಯಕ್ಕೆ ಕಾರಣರಾದ ಮಹಾ ಪುರುಷರು ಹುಟ್ಟಿದ ದಿನಗಳಾಗಿವೆ. ಇವುಗಳಲ್ಲಿ ಕೆಲವು ಹಬ್ಬಗಳನ್ನು ಸಾಮೂಹಿಕವಾಗಿ ಆಚರಿಸಲಾಗುವುದು.

ತಳಿರು ತೋರಣಗಳಿಂದ ಮನೆಯನ್ನುಅಲಂಕರಿಸುವುದು ಹಬ್ಬದ ಕುರುಹು. ಎಳೆಬಟ್ಟಿನ ರಂಗವಲ್ಲಿ, ಮಾವಿನ ಹಸಿರೆಲೆಯ ತೋರಣ ಹಬ್ಬದ ತೋರ್ ಬೆರಳಿದ್ದಂತೆ.

ಒಂದೊಂದು ಹಬ್ಬದಲ್ಲೂ ವಿಶಿಷ್ಟವಾದ ಪೂಜೆ, ಸಿಹಿ ಅಡಿಗೆಯಂತೂ ಆಗಲೇಬೇಕು. ಹೀಗೆ ಹಬ್ಬದ ಆಚರಣೆಯಲ್ಲಿ ಕಲೋಪಾಸನೆಗೂ ಸೌಂದರ್ಯಪ್ರಜ್ಞೆಗೂ ರಸಿಕತೆಗೂ ಸಾಮಾಜಿಕ ಚೈತನ್ಯದ ಜಾಗೃತಿಗೂ ಸಾಕಷ್ಟು ಎಡೆ ದೊರೆತಿದೆ.

ಹಳೆಯ ಭಕ್ತಿ ಶ್ರದ್ಧೆಯಳಿಸಿ ಹೋಗಿವೆ ಮಾಸಿ|
ಸುಳಿದಿಲ್ಲವಾವ ಹೊಸ ದರ್ಶನದ ಹೊಳಪುಂ ||
ಪಳಗಿದ್ದ ಮನೆಬಿದ್ದ ಕುಂಟ ಕುರುಡನ ತೆರದಿ|
ತಳಮಳಿಸುತಲಿದೆ ಲೋಕ- ಮಂಕುತಿಮ್ಮ||*

ಹಿಂದಿನ ಕಾಲದಲ್ಲಿ ಇದ್ದಂತಹ ಶ್ರದ್ಧೆ, ಶಕ್ತಿಗಳನ್ನು ನಾವು ಈಗ ಕಾಣುತ್ತಿಲ್ಲ. ಕಾಲ ಬದಲಾಗುತ್ತಿದ್ದರೂ, ಹಳೆ ನಂಬಿಕೆಗಳು ಅವುಗಳ ಬಲಗಳನ್ನು ಕಳೆದುಕೊಳ್ಳುತ್ತಿದ್ದರೂ, ಹೊಸ ನಂಬಿಕೆಗಳೇನು ಹುಟ್ಟುತ್ತಿಲ್ಲ.

ಇದರ ಪರಿಣಾಮ, ಬಹುಕಾಲ ಓಡಾಡಿಕೊಂಡು ಅಭ್ಯಸವಾಗಿದ್ದ ಮನೆಯಲ್ಲಿ ಇರುವ ಕುಂಟ ಅಥವಾ ಕುರುಡ, ಆ ಮನೆ ಬಿದ್ದು ಹೋದರೆ, ಓಡಾಡುವುದು ಕಷ್ಟವಾಗುವಂತೆ, ಜನಗಳಿಗೆ ಹಳೆಯ ನಂಬಿಕೆ ಹೋಗಿ, ‌ಹೊಸದಾವುದೂ ಇಲ್ಲದಿರುವುದರಿಂದ, ಪ್ರಪಂಚ ಒಂದು ವಿಧವಾದ ಚಿಂತೆ ಮತ್ತು ಗಾಬರಿಗಳಿಗೆ ಸಿಕ್ಕಿಹಾಕಿಕೊಂಡಿದೆ.

ಒಟ್ಟಾರೆಯಾಗಿ ಹೇಳಬೇಕೆಂದರೆ ಹಬ್ಬ ಹರಿದಿನಗಳ ಮೂಲಕ ರೂಢಿಯಲ್ಲಿರುವ ಹಳೆಯ ಸಂಪ್ರದಾಯಗಳಲ್ಲಿ ಅರ್ಥರಹಿತವಾಗಿರುವ ಕೆಲವು ಅಂಶಗಳನ್ನು ಕೈಬಿಡಬೇಕು.

ಅದರ ನೈಜಾರ್ಥ ಹಾಗೂ ಒಳಾರ್ಥಗಳನ್ನು ತಿಳಿದುಕೊಂಡು ಆಚರಣೆಗಳನ್ನು ರೂಢಿಸಿಕೊಂಡು ಹೋದಲ್ಲಿ ಮುಂದಿನ ಪೀಳಿಗೆ ಬೌದ್ಧಿಕವಾಗಿ, ದೈಹಿಕವಾಗಿ ದೃಢವಾಗಬಲ್ಲದು. ಇದರಿಂದ ಸಮಾಜ ಅಂತೆಯೇ ದೇಶವು‌ ಸದೃಢವಾಗಬಲ್ಲದು.

ನನ್ನಭಾರತಶ್ರೇಷ್ಠ_ಭಾರತ

ಪ್ರಭಂಜನ‌
ರಾಜ್ಯ‌ ಸಂಯೋಜಕರು, ವಿವೇಕ ಶಿಕ್ಷಣ‌ ವಾಹಿನಿ.

Admin

Leave a Reply

Your email address will not be published. Required fields are marked *

error: Content is protected !!