ಬಿಜೆಪಿ ರಾಜ್ಯಾಧ್ಯಕ್ಷರನ್ನು ಬದಲಾವಣೆ ಮಾಡಿದ್ರೆ ಚುನಾವಣೆಗೆ ಸ್ಪರ್ಧಿಸೋಲ್ಲ : ಕೆ.ಎಸ್ ಈಶ್ವರಪ್ಪ

ಬಿಜೆಪಿ ರಾಜ್ಯಾಧ್ಯಕ್ಷರನ್ನು ಬದಲಾವಣೆ ಮಾಡಿದ್ರೆ ಚುನಾವಣೆಗೆ ಸ್ಪರ್ಧಿಸೋಲ್ಲ : ಕೆ.ಎಸ್ ಈಶ್ವರಪ್ಪ

ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷರನ್ನು ಬದಲಾವಣೆ ಮಾಡಿದರೆ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದೇ ಇಲ್ಲ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಎಂದು ಘೋಷಣೆ ಮಾಡಿಕೊಂಡಿರುವ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದರು.

ಇಂದು‌ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ‌ ಅವರು ನಾನು ನಾಳೆ ಕೇಂದ್ರ ಗೃಹಸಚಿವ ಅಮಿತ್ ಶಾ ಅವರೊಂದಿಗೆ ದೆಹಲಿಯಲ್ಲಿ ಚರ್ಚೆ ಮಾಡುತ್ತೇನೆ. ಆದರೆ ಚುನಾವಣೆ ಕಣದಿಂದ ಹಿಂದೆ ಸರಿಯುವುದಿಲ್ಲ. 

ಅಮಿತ್ ಶಾ ರಂತಹ ದೊಡ್ಡವರು ಕರೆದಾಗ ಅವರಿಗೆ ಗೌರವ ಕೊಡಬೇಕಾದದ್ದು ನನ್ನ ಧರ್ಮ ಹಾಗಾಗಿಯೇ ನಾನು ಹೋಗುತ್ತೇನೆ. ಆದರೆ, ಅವರಿಗೆ ನಾನು ಸ್ಪಷ್ಟವಾಗಿ ಮನವರಿಕೆ ಮಾಡಿಕೊಡುತ್ತೇನೆ. ಒಂದೇ ಕುಟುಂಬದ ಕೈಯಲ್ಲಿ ಪಕ್ಷವಿದೆ. ಕಾಂಗ್ರೆಸ್ ಸಂಸ್ಕೃತಿಯಂತೆ ರಾಜ್ಯ ಬಿಜೆಪಿ ಬೆಳೆಯುತ್ತಿದೆ.

ಅಪ್ಪ-ಮಕ್ಕಳ ಕೈಯಲ್ಲಿರುವ ಪಕ್ಷವನ್ನು‌ ಮುಕ್ತಿಗೊಳಿಸಬೇಕಾಗಿದೆ ಎಂಬ ಅಂಶವನ್ನು ಅವರಿಗೆ ತಿಳಿಸುತ್ತೇನೆ ಎಂದರು. ನಾನು ಚುನಾವಣೆ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಾನು ಪಕ್ಷೇತರನಾಗಿ ಸ್ಪರ್ಧೆ ಮಾಡಲು ಅಮಿತ್‍ಶಾ ಅವರಿಗೆ ಒಪ್ಪಿಗೆ ಕೊಡಲು ನಾನು ನಾಳೆ ಮನವಿ ಮಾಡಿಕೊಳ್ಳುತ್ತೇನೆ ಎಂದರು.

ನಾಳೆ ಅಮಿತ್ ಶಾ ಅವರಿಗೆ ರಾಜ್ಯ ಬಿಜೆಪಿ ಅಧ್ಯಕ್ಷರನ್ನು ಬದಲಾವಣೆ ಮಾಡುವಂತೆ ಮನವಿ ಮಾಡುತ್ತೇನೆ ಎಂದ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿ ರಾಜ್ಯಾಧ್ಯಕ್ಷರನ್ನು ನಾಳೆ ಬೆಳಿಗ್ಗೆಯೇ ಬದಲಾವಣೆ ಮಾಡಿದರೆ ಸ್ಪರ್ಧೆಯಿಂದ ಹಿಂದೆ ಸರಿಯುವೆ. ನನ್ನ ಉದ್ದೇಶ ಪಕ್ಷ ಸರಿಯಾಗಬೇಕು ಎನ್ನುವುದು.

ಚುನಾವಣೆ ನಂತರ ಬದಲಾವಣೆ ಮಾಡುವುದಾಗಿ ಹೇಳಿದರೆ ಅದನ್ನು ನಾನು ಒಪ್ಪುವುದಿಲ್ಲ. ಚುನಾವಣೆ ನಂತರ ನಾನು ಯೋಚನೆ ಮಾಡ್ತೀನಿ. ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದ ಕಿರಿಯರಿಗೆ ಗೌರವ ಕೊಡುವುದಕ್ಕೆ ನಾನು ದೆಹಲಿಗೆ ಹೋಗುತ್ತಿದ್ದೇನೆ. 

ಅಮಿತ್ ಶಾ ಮತ್ತು ಪ್ರಧಾನಿ ಮೋದಿಯವರು ನನ್ನ ವಿಚಾರಗಳನ್ನು ಒಪ್ಪುತ್ತಾರೆ. ಅವರನ್ನು ಒಪ್ಪಿಸಿಯೇ ನಾನು ಚುನಾವಣೆಗೆ ನಿಲ್ಲುವೆ ಎಂದು ಹೇಳಿದರು.

ಅಪ್ಪ-ಮಕ್ಕಳ ಕೈಯಲ್ಲಿ ಪಕ್ಷವಿದೆ. ಹಿಂದುತ್ವಕ್ಕೆ ಅವಮಾನವಾಗಿದೆ. ದಲಿತರಿಗೆ-ಹಿಂದುಳಿದವರಿಗೆ ಅನ್ಯಾಯವಾಗಿದೆ. ಈ ಎಲ್ಲಾ ಅಂಶಗಳನ್ನೂ ಕೂಡ ಅಮಿತ್ ಶಾ ಅವರ ಗಮನಕ್ಕೆ ತರುತ್ತೇನೆ.

ರಾಜ್ಯಾಧ್ಯಕ್ಷರ ಬದಲಾವಣೆ ಮಾಡಿದರೆ, ಈಶ್ವರಪ್ಪ ಚುನಾವಣೆಗೆ ನಿಂತಿದ್ದರಿಂದಲೇ ರಾಜ್ಯಾಧ್ಯಕ್ಷರ ಬದಲಾವಣೆಯಾಯಿತು ಎಂಬ ಸಂದೇಶ ಕಾರ್ಯಕರ್ತರಿಗೆ ಹೋಗುತ್ತದೆ. 

ಪಕ್ಷ ಸರಿದಾರಿಗೆ ಬರಲಿದೆ. ಹಾಗಾಗಿ ನಾಳೆಯೇ ರಾಜ್ಯಾಧ್ಯಕ್ಷರ ಬದಲಾವಣೆ ಮಾಡಿದರೆ ಚುನಾವಣೆಯಿಂದ ಹಿಂದೆ ಸರಿಯುವೆ ಎಂದು ಪುನರುಚ್ಚರಿಸಿದರು.

ಬಿ.ಎಸ್.ವೈ. ಹತ್ತಿರ ಹೋಗುತ್ತೀರ ಎಂಬ ಪ್ರಶ್ನೆಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ಅವರು, ‘ರಂಗಣ್ಣನ (ಅಮಿತ್ ಶಾ) ಹತ್ತಿರವೇ ಹೋಗುತ್ತಿರುವೆ. 

ಈ ಸಿಂಗ (ಯಡಿಯೂರಪ್ಪ) ಹತ್ತಿರ ಏಕೆ ಹೋಗಲಿ? ಯಡಿಯೂರಪ್ಪ ನಮ್ಮ ಮನೆಗೆ ಬರುತ್ತಾರಂತೆ. ಹತ್ತು ವರ್ಷದಿಂದ ನಮ್ಮ ಮನೆ ಅವರಿಗೆ ಗೊತ್ತಿರಲಿಲ್ಲವೇ? ಯಾವಾಗ ಬಂದಿದ್ದರು? ಯಾವಾಗ ನನ್ನ ಜೊತೆ ಮಾತನಾಡಿದ್ದಾರೆ? ಅವರು ನಂಬಿಕೆಗೆ ಅರ್ಹರಲ್ಲ. ಅವರು ನಮ್ಮ ಮನೆಗೆ ಬರುವುದೂ ಬೇಡ. ಹಿಂದೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಮಾವೇಶ ನಡೆದಾಗ ‘ಬ್ರಿಗೇಡ್ ಬೇಡ’ ಎಂದು ಹಠ ಹಿಡಿದು ಕುಳಿತಿದ್ದರು’ ಎಂದು ಬಿ.ಎಸ್.ವೈ. ವಿರುದ್ಧ ಹರಿಹಾಯ್ದರು.

Admin

Leave a Reply

Your email address will not be published. Required fields are marked *

error: Content is protected !!