ಆರೋಗ್ಯದ ತಳಹದಿ ಅಡುಗೆಮನೆ- ಸಂಚಿಕೆ- ೦6

ಆರೋಗ್ಯದ ತಳಹದಿ ಅಡುಗೆಮನೆ- ಸಂಚಿಕೆ- ೦6

ಆಹಾರದ ಸಂಸ್ಕರಣೆ ಮತ್ತು ಸಂಸ್ಕಾರದ ವಿಷಯದಲ್ಲಿ ಸ್ಪರ್ಶ ಮಾಡುವಾಗಿನ ಮನಸ್ಥಿತಿ ಅಥವಾ ಅಲೋಚನೆಯ ಪ್ರಭಾವಗಳ ಸೂಕ್ಷ್ಮತೆಯ ಬಗ್ಗೆ ನೋಡಿದೆವು.. ಈಗ ನೀರಿನ ಬಗ್ಗೆ ನೋಡೋಣ.. ಅಡುಗೆಯ ಪ್ರತಿಹಂತವೂ ನೀರಿನಿಂದಲೇ ನಡೆಯುವುದು.. ನೀರಿಲ್ಲದಿದ್ದರೆ ಆಹಾರವೂ ಇಲ್ಲ ನಾವುಗಳಂತೂ ಇಲ್ಲವೇ ಇಲ್ಲ… ನಾವೆಲ್ಲ ಅದೆಷ್ಟರಮಟ್ಟಿಗೆ ಕಳಪೆ ಮನಸ್ಥಿತಿಯನ್ನು ಇಟ್ಟುಕೊಂಡಿದ್ದೇವೆಂದರೆ, ನೀರನ್ನು ನಮ್ಮ ದಿನನಿತ್ಯದ ಕೆಲಸಗಳಿಗೆ ದೇವರು ಕೊಟ್ಟ ಕನಿಷ್ಠ ಸವಲತ್ತು ಅಂತ ನಂಬಿದ್ದೇವೆ..

ವಾಸ್ತವ ಏನೆಂದರೆ, ನೀರು ಇರುವುದರಿಂದ ಮತ್ತು ನೀರಿಗಿರುವ ಅನಂತ ಕರುಣೆ ಮತ್ತು ಸೌಮ್ಯತೆಯಿಂದಾಗಿ ಈ ಭೂಮಿಯ ಮೇಲೆ ನಾವೆಲ್ಲರೂ ಮೂಡಲು, ಬಾಳಲು ಸಾಧ್ಯವಾಗಿದೆ… ಅಂದ ಮೇಲೆ.. ನೀರಿನ ಸ್ಥಾನ ಎಲ್ಲಿರಬೇಕು… ಸಣ್ಣ ಪುಟ್ಟ ಉಪಕಾರ/ ಸಹಾಯ ಮಾಡಿ ಅತಿಯಾಗಿ ಪ್ರತಿಸ್ಪಂದನೆ , ಗೌರವಾದಿಗಳ ನಿರೀಕ್ಷಿಸುವ ನಾವುಗಳು ನೀರನ್ನು ಎಷ್ಟರಮಟ್ಟಿಗೆ ಗೌರವಿಸುತ್ತಿದ್ದೇವೆ…
ನೀರಿನೊಂದಿಗಿನ ಒಡನಾಟವು ಸ್ಪರ್ಶಕ್ಕಿಂತಲೂ ಸೂಕ್ಷ್ಮ ಸಂವೇದನೆಯ ವಿಷಯ..
ಆಧ್ಯಾತ್ಮಿಕ ಪಯಣದಲ್ಲಿ ಮಹಾನ್ ಗುರುಗಳು ಮಾರ್ಗದರ್ಶನ ನೀಡುತ್ತಾರೆ- ನೀರಿಗೆ ಅತ್ಯಂತ ಹೆಚ್ಚಿನ ಸ್ಮರಣಾಶಕ್ತಿಯಿದೆ…
ನೀರು, ತನ್ನ ಸಂಪರ್ಕಕ್ಕೆ ಬರುವದಕ್ಕೆಲ್ಲ ಹೇಗೆ ಬಹುಬೇಗನೆ ಪ್ರಭಾವ ಬೀರುವುದೋ; ಹಾಗೆಯೇ ಪ್ರಭಾವವನ್ನು ಹೀರಿಕೊಳ್ಳುವುದಂತೆ..

ಜೀವಿಯ ಉಗಮಕ್ಕೆ ನೀರೇ ಸೆಲೆ… ಇಷ್ಟು ಮಾತ್ರದಿಂದಲೇ ನೀರಿನ ಶಕ್ತಿಯನ್ನು ವರ್ಣಿಸಿದಂತಾಗುವುದಿಲ್ಲ… ನಮ್ಮ ಸೌರ ಮಂಡಲದಲ್ಲಿ ಭೂಮಿಯನ್ನು ಹೊರತುಪಡಿಸಿ ಇರುವ ಗ್ರಹಗಳಲ್ಲೆಲ್ಲ ಕಾಣುವ ಪ್ರಮುಖ ಕೊರತೆ ಅಥವಾ ಜೀವಿಗಳನ್ನು ಹೊಂದದಿರುವ ಅವುಗಳ ಅಸಾಮರ್ಥ್ಯ- ಮೂಲಭೂತ ನೀರಿನ ಅಭಾವ… ಭೂಮಿಯಲ್ಲಿ ಜೀವಾಂಕುರವು ಕಣ್ಣಿಗೆ ಕಾಣದಷ್ಟು ಸೂಕ್ಷ್ಮ ಜೀವಿಯಿಂದ ಹಿಡಿದು ನಮ್ಮೆಲ್ಲರ ಉಪಸ್ಥಿತಿಯ ಹಂತಕ್ಕೆಲ್ಲ ಈ ಜಲವೇ ಆಧಾರ ಮತ್ತು ನೆಲೆ.. ಅದಕ್ಕೇ ಅಲ್ಲವೇ ನೀರಿಗೆ ಜೀವಸೆಲೆ ಅಂತ ಕರೆದಿರುವುದು.. ಇಷ್ಟೆಲ್ಲಾ ಅಗಾಧವಾಗಿರುವ ನೀರಿನ ಬಗೆಗೆ ಬರೆಯಲು ಬಾರದಿರುವ ಕಾರಣ ಈ ಲೇಖನವು ಇಷ್ಟು ವಿಳಂಬವಾಗಿ ಹೊರಬರುತ್ತಿದೆ…

ನೀರು ನಮ್ಮೆಲ್ಲರಿಗೂ ಎಷ್ಟು ಹಾಸುಹೊಕ್ಕಾಗಿದೆ ಎಂದರೆ, ಅದರ ಮಹಿಮೆಯನ್ನು ನಾವೆಲ್ಲರೂ ಸಹ ಅವಗಣಿಸುತ್ತಿದ್ದೇವೆ.. ಇದಕ್ಕೆಲ್ಲಾ ಮುಖ್ಯ ಕಾರಣ, ನೀರನ್ನು ನಮ್ಮೆಲ್ಲರ ತಾಯಿ ಎಂದು ಸಲಿಗೆ ಬಿಟ್ಟುಕೊಂಡಿರುವುದು… ಕ್ಷಮೆಯ ಮೂರ್ತಿ ರೂಪಿಣಿ ಧರಣಿಯಾದರೆ, ಕ್ಷಮೆಯು ದ್ರವೀಭವಿಸಿದ ರೂಪ ಗಂಗಾಮಾಯಿ ನೀರು.. ಇವರಿಬ್ಬರಷ್ಟು ಅವಗಣನೆಗೆ ಗುರಿಯಾದವರು ಬಹುಶಃ ಈ ಪ್ರಪಂಚದಲ್ಲಿ ಬೇರೆ ಯಾರೂ ಸಹ ಇರಲಿಕ್ಕಿಲ್ಲ…
ಭೂಮಿ ಮತ್ತು ನೀರಿನ ಉದಾರತೆಯ ಪರಿಣಾಮದಿಂದಲೇ, ನಾವಿಂದು ಅವರುಗಳ ಬಗ್ಗೆ ಅಸಡ್ಡೆ ತೋರಿ ಬದುಕುತ್ತಿದ್ದು, ಅವರ ಬಗ್ಗೆ ವಿಶೇಷವಾಗಿ ತಿಳಿಯಬೇಕಾದ ಪರಿಸ್ಥಿತಿಗೆ ಬಂದು ನಿಂತಿದ್ದೇವೆ…. ಇದಕ್ಕೆಲ್ಲ.. ನಮ್ಮ ( ಮಾನವ) ಸಂಕುಲಕ್ಕಿರುವ ಶ್ರೇಷ್ಠ ಪ್ರಾಣಿ ಎಂಬ ಸ್ವತಃ ಕೊಟ್ಟುಕೊಂಡಿರುವ ಗಾದೆ(ಹಾಸಿಗೆ) ದರಿದ್ರತನಕ್ಕೆ ಎಳೆದುನಿಲ್ಲಿಸಿದೆ.. ಪ್ರಕೃತಿಯಲ್ಲಿರುವ ಯಾವ ಜೀವಿಯೂ ಸಹ ನೀರಿನೊಂದಿಗೆ, ಅಷ್ಟೇ ಏಕೆ ಇಡಿಯ ವಿಶ್ವದೊಂದಿಗೆ ಇಷ್ಟು ಕನಿಷ್ಠತಮವಾಗಿ ವರ್ತಿಸಿದ್ದಿಲ್ಲ..
ದಯಮಾಡಿ ನೀರನ್ನು ಗೌರವಿಸಿರಿ.. ವೃಥಾ ಪೋಲಾಗುವ ನೀರನ್ನು ನಿಲ್ಲಿಸಿದರೆ ಸಾಕು ಇಂದಿನ ದಿನಕ್ಕದು ಪುಣ್ಯದ ಕೆಲಸ… ಬಾಲ್ಯದಲ್ಲಿ ಶಾಲೆಯ ಹೋಂ ವರ್ಕ್ ನೆನಪಿಸಿಕೊಳ್ಳಿ.. ದಿನಕ್ಕೊಂದು ಒಳ್ಳೆಯ ಕೆಲಸ…- ಈಗ ನಾವು ದಿನವೂ ಮಾಡಬೇಕಿರುವ ಒಳ್ಳೆಯ ಕೆಲಸ ನೀರನ್ನು ಗೌರವಿಸುವುದು.. ನೀರಿನ ಅನಗತ್ಯ ಬಳಕೆ ತಪ್ಪಿಸುವುದು, ನಾವು ಕೇಳದೆಯೇ ತಾನಾಗಿಯೇ ನಿಯಮಿತವಾಗಿ ಮೋಡದ ರೂಪ ತಳೆದು, ಮಳೆಯ ರೂಪದಿಂದ ಧರೆಗವತರಿಸಿ ಮತ್ತೆ ಬರುವ ನೀರನ್ನು – ಥೂ! ಯಾಕಾದ್ರು ಬಂದಿತಪ್ಪಾ.. ಈ ಮಳೆ ಎಂದು ಅವಮಾನಿಸಿ ಬೈಯ್ಯುವುದನ್ನು ಪೂರ್ಣರೂಪದಿಂದ ನಿಲ್ಲಿಸಬೇಕು… ಇದರರ್ಥ ಮಳೆಯಲ್ಲಿ ನೆನೆದು ಸಂಭ್ರಮಿಸಿರಿ ಅಂತ ಹೇಳುತ್ತಿಲ್ಲ… ಮಳೆಯ ಅನಾಹುತಗಳನ್ನು ಸತ್ಕರಿಸಿರಿ ಅಂತಲೂ ಹೇಳುತ್ತಿಲ್ಲ… ಸಹಜವಾಗಿ ಸುರಿಯುತ್ತಿರುವ ಮಳೆಗೆ ಮನದಲ್ಲೇ ಶಿರಬಾಗಿ ನಮಿಸಿರಿ, ಮನೆಯೊಳಗೇ ನಿಂತು ಮಳೆಯೊಂದಿಗೆ ಸಂಭಾಷಿಸಿರಿ… ಓ ಮಳೆಯೆ, ನಾವು ನಿನ್ನನ್ನು ಕೇಳದಿದ್ದರೂ, ಕರೆಯದಿದ್ದರೂ ಸಹ ನೀನು ನಿನ್ನ ಕೆಲಸ ನಿಲ್ಲಿಸಿಲ್ಲ, ಪ್ರತಿ ಬಾರಿಯೂ ನಮಗೆಲ್ಲ ತಂಪುಕೊಡುತ್ತಿರುವೆ, ಕುಡಿಯಲು, ಉಣ್ಣಲು ನೀರು ಕೊಡುತ್ತಿರುವೆ.. ನೀನು ಮಹಾತಾಯಿ ಎಂದು ಭಾವಿಸಿದರೂ ಸಾಕು…. ಆ ಭಾವನೆಯನ್ನು ನೀರು ಸಂಪೂರ್ಣವಾಗಿ ಗ್ರಹಿಸುವುದು… ನಂಬಲು ಕಷ್ಟವೇ…
ನಿಮ್ಮ ಮಾತು ಕೇಳದೆ, ಪ್ರತಿಯೊಂದಕ್ಕೂ ನಕಾರಾತ್ಮಕವಾಗಿ ವರ್ತಿಸುವ ನಿಮ್ಮ ಕಣ್ಮಣಿ ಮಗು, ಅನೇಕ ವರ್ಷಗಳ ಬಳಿಕ, ನಿಮ್ಮ ಬಳಿಸಾರಿ,- ಅಮ್ಮ/ ಅಪ್ಪ, ನೀವು ಅದೆಷ್ಟು ಒಳ್ಳೆಯವರು.. ನಮಗೆಲ್ಲ ಉತ್ತಮ ಜೀವನ ಕಟ್ಟಿಕೊಡಲು, ನಮ್ಮೆಲ್ಲಾ ಕಿರಿ- ಕಿರಿ ಅವಾಂತರಗಳ ನಡುವೆಯೂ ನೀವು ಪ್ರೀತಿಗೆ ಬದ್ಧರಾಗಿ ನಿಮ್ಮೆಲ್ಲಾ ಕರ್ತವ್ಯಗಳ ಪೂರೈಸಿದಿರಿ.. ನಿಮಗೆ ನನ್ನ ಹೃದಯಾಳದಿಂದ ಪ್ರಣಾಮಗಳು 🙏.. ಎಂದು ಹೇಳಿದರೆ ಹೇಗನ್ನಿಸುವುದು…. ಅದೇ ರೀತಿಯಲ್ಲಿ ನೀರಿಗೂ, ಭೂಮಿಗೂ ನಮ್ಮ ಭಾವನೆಗಳು ಮುಟ್ಟುವುದು ಅನ್ನುವುದಕ್ಕಿಂತ ಅಪ್ಪಿಕೊಳ್ಳುವವು…

ಈಗ ಹೇಳಿ, ನಾವು ನೀರನ್ನು ಪೂಜ್ಯ ಭಾವನೆಯಿಂದ ಗೌರವಿಸಿದರೆ ಒಳಿತಾಗುವುದಲ್ಲವೇ…

ಅಂದ ಮೇಲೆ, ನೀರಿನಿಂದ ಆಹಾರ ಪದಾರ್ಥಗಳನ್ನು ತೊಳೆಯುವುದರಿಂದ ಹಿಡಿದು ಅಡುಗೆ ಸಿದ್ಧಪಡಿಸುವ ಪ್ರತಿಹಂತದಲ್ಲೂ ನೀರಿನೊಂದಿಗೆ ಇರುತ್ತೇವಲ್ಲ.. ಆಗ, ನಾವು ಹೇಗೇಗೋ ಭಾವಿಸುತ್ತಾ, ಯೋಚಿಸುತ್ತಾ ಕೆಲಸ ಮಾಡಿದರೆ, ನೀರು ಕೆಡುವುದಲ್ಲದೇ ಮನೆಯ ಪ್ರತಿ ಸಂಬಂಧವೂ ಅದೇ ಸ್ಥಿತಿ ಹೊಂದುವುದು.. ಹಾಗಾಗಿ ಕನಿಷ್ಠಪಕ್ಷ ಕುಡಿಯುವ ನೀರನ್ನು ಮನೆಯ ಪ್ರಶಾಂತವಾದ ಸ್ಥಳ, ಅತಿಹೆಚ್ಚು ಓಡಾಟವಿಲ್ಲದ ಸ್ಥಳ – ಸಾಮಾನ್ಯವಾಗಿ ದೇವರಕೋಣೆ ಅಂತಹ ಜಾಗದಲ್ಲಿಡಲು ಗುರುಗಳು ಹೇಳುತ್ತಾರೆ,.. ಹೀಗೆ ಮಾಡುವುದರಿಂದ, ನೀರು, ಕಾಲಕ್ಕಿಂತ ವೇಗವಾಗಿ ಓಡುವ ನಮ್ಮ ಮನಸ್ಸಿನ ತುಳಿತಕ್ಕೆ, ಭಾವಾತಿರೇಕಕ್ಕೆ ಒಳಪಡದೆ, ತನ್ನ ಸಹಜತೆಯಲ್ಲಿ ಉಳಿದು ನಮ್ಮೆಲ್ಲರನ್ನು ಪೋಷಿಸಲು ನಿರಾಂತಕದ ಸ್ಥಿತಿಯಲ್ಲಿ ಉಳಿಯುವುದು.

ಇಂತಹ ನೀರು, ಯಾವ ಸಂದರ್ಭದಲ್ಲಿ ಯಾವ ಭಾವನೆಗೆ ಒಳಪಡುವುದೋ, ಅದನ್ನು ಸೇವಿಸಿದಾಗ ಅದೇ ಭಾವನೆ ನಮ್ಮಲ್ಲಿ ಮೈತಳೆಯುವುದು..
ನೀರನ್ನು ಬಳಸುವಾಗ, ಸಂಗ್ರಹಿಸುವಾಗ, ಹಂಚುವಾಗ, ಸೇವಿಸುವಾಗಲೂ ಸಹ ಹೆಚ್ಚು ಜಾಗರೂಕತೆಯಿಂದ ಇರೋಣ ಮತ್ತು ಸುಭೀಕ್ಷತೆಯಿಂದ ಬಾಳೋಣ..

🙏 ಜಗದಂಬೆ ತಾಯಿ ಅನ್ನಪೂರ್ಣೆಯ ಕೃಪೆ, ಗಂಗಾಮಾಯಿಯ ಕೃಪೆ ಸದಾ ನಮ್ಮೆಲ್ಲರನ್ನೂ ಪೊರೆಯುತ್ತಿರಲಿ ಎಂದು ಪ್ರಾರ್ಥಿಸುತ್ತಾ, ಕೃತಜ್ಞತೆಯಿಂದ ಬಾಳೋಣ.

ಬಂಧುಗಳೇ, ನಮ್ಮೆಲ್ಲರ ಒಳಿತಿಗಾಗಿ ಆರೋಗ್ಯದ ತಳಹದಿ ಅಡುಗೆಮನೆ ಅಭಿಯಾನ ಆಹಾರದ ಮೂಲ ಪರಿಚಯದ ಮೂಲಕ ಪ್ರಾರಂಭಿಸಲಾಗಿದೆ. ಇದರ ಬಗ್ಗೆ ಹೆಚ್ಚು ಗಮನಕೊಟ್ಟು ನಮ್ಮೆಲ್ಲರ ಮತ್ತು ನಮ್ಮವರೆಲ್ಲರ ಆರೋಗ್ಯವನ್ನು ಸದೃಢಗೊಳಿಸೋಣ.. ಭವಿಷ್ಯಕ್ಕೆ ಭದ್ರ ಬುನಾದಿ ನಿರ್ಮಿಸೋಣ.

ಲೋಕಾ ಸಮಸ್ತಾಃ ಸುಖಿನೋ ಭವಂತು, ಸರ್ವೇ ಜನಾಃ ಸುಖಿನೋ ಭವಂತು. ಸನ್ಮಂಗಳಾನಿ ಭವಂತು.

ಡಾ. ಸುಮತಿ ಡಂಬಳ
ಆಯುರ್ವೇದ ವೈದ್ಯೆ ಅಥರ್ವ ಆಯುರ್ಧಾಮ
ಶಿವಮೊಗ್ಗ- ದಾವಣಗೆರೆ

Admin

Leave a Reply

Your email address will not be published. Required fields are marked *

error: Content is protected !!