ಓಜಸ್ಸನ್ನು(ಬಲ, ರೋಗ ನಿರೋಧಕ ಶಕ್ತಿ, ಪ್ರಾಣ ಧಾರಣ ಶಕ್ತಿ) ವೃದ್ಧಿಮಾಡಿಕೊಳ್ಳುವುದು ಹೇಗೆ?

ಓಜಸ್ಸನ್ನು(ಬಲ, ರೋಗ ನಿರೋಧಕ ಶಕ್ತಿ, ಪ್ರಾಣ ಧಾರಣ ಶಕ್ತಿ) ವೃದ್ಧಿಮಾಡಿಕೊಳ್ಳುವುದು ಹೇಗೆ?

    ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ
      ಸ್ವಾಸ್ಥ್ಯ ಸರ್ವರದ್ದೂ ಆಗಲಿ
🌷🌷🌷🌷🌷🌷🌷

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ:
ಓಜಸ್ಸನ್ನು(ಬಲ, ರೋಗ ನಿರೋಧಕ ಶಕ್ತಿ, ಪ್ರಾಣ ಧಾರಣ ಶಕ್ತಿ) ವೃದ್ಧಿಮಾಡಿಕೊಳ್ಳುವುದು ಹೇಗೆ?
•••••••••••••••••••••••••••••••••••••••••
• ಸಹಜ ಓಜಸ್ಸು
• ಕಾಲಕೃತ ಓಜಸ್ಸು
• ಆಹಾರ-ಔಷಧ ಪ್ರಯೋಗ ಸಿದ್ಧ ಓಜಸ್ಸು

❄️ ಸಹಜ ಓಜಸ್ಸನ್ನು ಪಡೆಯುವುದು:

  1. ಓಜ ಕ್ಷಯದ ಕಾರಣಗಳನ್ನು ತಡೆಯುವುದು.(ಕಳೆದ ಸಂಚಿಕೆಯಲ್ಲಿ ನೋಡಲಾಗಿದೆ)
  2. ಓಜೋವರ್ಧಕ ವಿಧಿ ವಿಧಾನಗಳನ್ನು ಪಾಲಿಸುವುದು…
    (ಇಂದು ನೋಡೋಣ)

🔹 ಓಜೋ ವರ್ಧಕ ವಿಧಿ ವಿಧಾನಗಳು:

1⃣ ಮಧುರಗಣ ಔಷಧಿಗಳಿಂದ ತಯಾರಾದ ಕ್ಷೀರ ಸೇವನೆ:
🔅 ಮಧುರರಸವು(carbohydrates) ಹುಟ್ಟಿನಿಂದ ಮರಣ ಪರ್ಯಂತ ಸರ್ವರಿಗೂ ಸಾತ್ಮ್ಯವಾದ(ಹೊಂದಿಕೊಳ್ಳುವ), ಬಾಯಿಯಲ್ಲಿ ಇಟ್ಟಾಗ ಯಾವುದೇ ಭಾವ ವ್ಯತ್ಯಾಸಗಳನ್ನು ಮಾಡದ,‌ಆಹ್ಲಾದಕರವಾದ ಮತ್ತು ಜಠರ ಪ್ರವೇಶಿಸಿದ ನಂತರ ಮಧುರ ವಿಪಾಕ ಎಂಬ ಶರೀರ ವರ್ಧಕ ಭಾವವಾದ ಸಶಕ್ತ ಆಹಾರ ರಸವನ್ನು ಉತ್ಪತ್ತಿ ಮಾಡುವ ಎಲ್ಲಾ ದ್ರವ್ಯಗಳನ್ನು ಮಧುರ ರಸ ಎನ್ನುತ್ತಾರೆ.

ಇವು ನಾಲಿಗೆಗೂ, ಉದರಕ್ಕೂ ಮತ್ತು ವಿಪಾಕ(ಧಾತು ಉತ್ಪತ್ತಿ) ಹಂತದಲ್ಲೂ ಮಧುರ ಭಾವವನ್ನೂ ಮತ್ತು ಸೌಮ್ಯಭಾವವನ್ನು ಹೊಂದಿವೆ.

★ ಮಧುರಗಣದ ಧಾನ್ಯಗಳಾದ ಶಾಲೀ (ಅಕ್ಕಿ), ರಾಗಿ, ಜೋಳ, ಗೋಧಿ, ಖರ್ಜೂರ, ಅಂಜೂರ, ಹಲಸು, ತೊಂಡೆ, ನೆಲಗುಂಬಳ, ಹಾಲುಗುಂಬಳ, ಕಬ್ಬು ಮುಂದಾದವುಗಳಿಂದ ತಯಾರಿಸಿದ ಕ್ಷೀರ, ಪಾಯಸಗಳನ್ನು ಪ್ರಯೋಗಿಸಬೇಕು

★ ಮಧುರ ಗಣದ ಮಾಂಸಾಹಾರ ದ್ರವ್ಯಗಳಾದ ಮೇದಸ್ಸು, ಅಸ್ಥಿಯ ಒಳಭಾಗ ಮಜ್ಜೆಗಳಿಂದ ತೆಗೆದ ಬೇಯಿಸಿದ ರಸವನ್ನು ಸೇವಿಸಬೇಕು.

★ ಮಧುರ ಗಣದ ಲೋಹವಾದ ಸ್ವರ್ಣಭಸ್ಮ ಸೇರಿಸಿದ ಘೃತ ಅಥವಾ ಮಧು(ಜೇನುತುಪ್ಪ) ವನ್ನು ಸೇವಿಸಬೇಕು.

ಈ ವಿಧಾನಗಳಿಂದ ಓಜಸ್ಸು(ವ್ಯಾಧಿಕ್ಷಮತ್ವ- ರೋಗನಿರೋಧಕ ಶಕ್ತಿ) ಸಹಜವಾಗಿ ವೃದ್ಧಿಯಾಗುತ್ತದೆ.

2⃣ ಮಾಂಸರಸ ಪ್ರಯೋಗ:
🔅 ಮಾಂಸಾಹಾರದಲ್ಲಿ ಪ್ರಾಣಿಯ ಎಲ್ಲಾ ಅಂಗಗಳು ಓಜೋ ವೃದ್ಧಿಗೆ ಸಹಾಯ ಮಾಡಲಾರವು. ಪ್ರಧಾನವಾಗಿ ಪ್ರಾಣಿಯ ಮೇದಸ್ಸು- ಮೆದುಳು- ಮೂಳೆಯೊಳಗಿನ ಮಜ್ಜೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

💠 ಸಾಮಾನ್ಯಂ ವೃದ್ಧಿ ಕಾರಣಂ….
ಸಿದ್ಧಾಂತದ ಅನ್ವಯ ಪ್ರಾಣಿ ದೇಹದ ಮೇದಸ್ಸು ಮೆದುಳು ನಮ್ಮ ಶರೀರದ ಸಾರ ಮೇದವನ್ನು ಮತ್ತು ಅದರ ಮಜ್ಜೆಯು ನಮ್ಮ ಶರೀರದ ಮಜ್ಜೆ ( ಸ್ಟೆಮ್ ಸೆಲ್ಸ್) ಯನ್ನು ವೃದ್ಧಿ ಮಾಡುತ್ತದೆ.
ೱ ಸೂಚನೆ: ಇಲ್ಲಿ ಗಮನಿಸಲೇ ಬೇಕಾದ ಅಂಶ ಎಂದರೆ ನಮ್ಮ ಜೀರ್ಣಕ್ರಿಯೆಗೆ ಸಹಾಯವಾಗುವ ನಿತ್ಯವೂ ನಿಯಮಿತ ಪ್ರಮಾಣದ ಆಹಾರ, ವ್ಯಾಯಾಮ ಮತ್ತು ನಿದ್ರೆಗಳು ಅತ್ಯಾವಶ್ಯಕ. ಏಕೆಂದರೆ, ಜೀರ್ಣವಾಗದ ಮೇದಸ್ಸು , ಮಜ್ಜೆಯು ಯಾವ ಉಪಕಾರವನ್ನೂ ಮಾಡಲಾರದು.

3⃣ ಅಸಾತ್ಮ್ಯಾಹಾರಗಳ ತ್ಯಾಗ:
🔅 ಸಾತ್ಮ್ಯ ಆಹಾರ ಎಂದರೆ, ಯಾವುದನ್ನು ಸೇವಿಸಿದರೆ ಅದು ಸುಲಭವಾಗಿ ಜೀರ್ಣವಾಗಿ, ರಕ್ತಗತವಾಗಿ, ಧಾತುಗಳಾಗಿ ಕೊನೆಗೆ ಮನಸ್ಸಾಗಿ ಬದಲಾಗಿ ಜೀವಾತ್ಮ ನ ನಿತ್ಯ ವ್ಯಾಪಾರಕ್ಕೆ ಸಹಕಾರ ನೀಡುವುದೋ ಅದು ಸಾತ್ಮ್ಯ(ಸ+ಆತ್ಮ) ಆಹಾರ.

✅ ಒಟ್ಟಾರೆ ಆತ್ಮಗತವಾಗುವ ಆಹಾರವನ್ನು ಸಾತ್ಮ್ಯ ಆಹಾರ ಎನ್ನಲಾಗಿದೆ.

ಅಸಾತ್ಮ್ಯ ಎಂದರೆ ಒಗ್ಗದಿರುವ ಆಹಾರ ಎಂದರ್ಥ, ಅದನ್ನು ಗುರುತಿಸುವುದು ಸುಲಭ.
ಆಹಾರ ಸೇವನೆಯ ನಂತರ
*ಹೊಟ್ಟೆ ಭಾರವಾದರೆ
*ಬೆಳಿಗ್ಗೆ ಎದ್ದ ನಂತರವೂ ಉತ್ಸಾಹ ಇರದಿದ್ದರೆ
*ಬೆಳಿಗ್ಗೆ ಸಹಜವಾಗಿ ಮಲ-ಮೂತ್ರಗಳ ಪ್ರವೃತ್ತಿ ಆಗದಿದ್ದರೆ
*ಬೆಳಿಗ್ಗೆ ಮೂರ್ನಾಲ್ಕು ಬಾರಿ ಬೇಧಿಯಾದರೆ
*ಇಂದ್ರಿಯಗಳು ಪ್ರಸನ್ನ ಎನಿಸದಿದ್ದರೆ(ಇಂದ್ರಿಯಗಳು ತಮ್ಮ ವಿಷಯಗಳನ್ನು ಬೇಡ ಎನಿಸಿಕೊಂಡರೆ) ಸೇವಿಸಿದ ಆಹಾರ ಅಸಾತ್ಮ್ಯ ಎಂದು ಗ್ರಹಿಸಬೇಕು, ಮತ್ತು ಇದು ಓಜಸ್ಸನ್ನು ವರ್ಧಿಸುವ ಬದಲು ತಮಸ್ಸನ್ನು ಅಂದರೆ ರೋಗಗಳಿಗೆ ಆಹಾರವನ್ನೂ ಒದಗಿಸುತ್ತದೆ. ಹಾಗಾಗಿ ತ್ಯಜಿಸಬೇಕು.

🔺 ಅಸಾತ್ಮ್ಯ ಆಹಾರಗಳ ಪಟ್ಟಿ:
ಗೋಧಿ(ವಿಶೇಷವಾಗಿ ಚಪಾತಿ), ಉದ್ದಿನಬೇಳೆ, ಮೈದಾ ಹಿಟ್ಟು(ಬಿಸ್ಕೆಟ್, ಬ್ರೆಡ್, ಕೇಕ್…)ಕರಿದ ಪದಾರ್ಥಗಳು, ವಗ್ಗರಣೆಯನ್ನು ಮೇಲಿನಿಂದ ಕಲಸಿದ ಚಿತ್ರಾನ್ನ,ಫ್ರೈಡ್ ರೈಸ್, ಎಣ್ಣೆ ಕಲಸಿದ ಅವಲಕ್ಕಿ, ಮಸಾಲ ಮಂಡಕ್ಕಿ(ಚುರುಮುರಿ/ ಕಳ್ಳೆಪುರಿ), ಅನೇಕ ಹಸಿ ತರಕಾರಿಗಳು, ಮೊಳಕೆ ಕಾಳುಗಳು, ಬಿಸಿಲು ನಾಡಿನಲ್ಲಿದ್ದೂ ಮೀನು ಸೇವನೆ ಮುಂತಾದವು ಮತ್ತು ಯಾವುದನ್ನು ಸೇವಿಸಿದರೆ ಹೊಟ್ಟೆಯುಬ್ಬರವಾಗುತ್ತದೋ ಅದು ಅಸಾತ್ಮ್ಯ ಆಹಾರ.

4⃣ ಸೂಕ್ಷ್ಮಾವಲೋಕಿತ ಆಹಾರ ಸೇವನೆ:
🔅 ಆಹಾರವು ತಾಜಾ ಇರಬೇಕು, ಸುಖೋಷ್ಣವಾಗಿರಬೇಕು, ಒಣಗಿದಂತೆ ಇರಬಾರದು, ಮೃದುವಾಗಿರಬೇಕು ಆದರೆ ಹಿಂದಿನ ದಿನದ ಹಿಟ್ಟಿನಿಂದ ಮಾಡಿರಬಾರದು(ಇಡ್ಲಿ, ದೋಸೆಗಳು), ಆಹಾರದೊಳಗೇ ನೀರಿನ ಅಂಶ ಇರಬೇಕೇ ಹೊರತು, ದಿನವೆಲ್ಲಾ ಅತಿಪ್ರಮಾಣದ ನೀರನ್ನು ಸೇವಿಸುತ್ತಿರಬಾರದು,
ಹಸಿವಾದ ನಂತರ ಉಪವಾಸ ಇರಬಾರದು, ಹಸಿವಿಲ್ಲದೇ ಊಟಮಾಡಬಾರದು, ತಡರಾತ್ರಿ ಊಟ ಮಾಡಬಾರದು.
” ಇವೆಲ್ಲಾ ಧಾತುಗಳ ಸಾರಭಾಗವನ್ನೂ, ಮನಸ್ಸನ್ನೂ ಪೋಷಿಸುವಂತವಲ್ಲ! ಕೇವಲ ಸ್ಥೂಲ ಶರೀರವನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಯೋಜಿಸಿದ ಆಹಾರದ ವಿಧಿಗಳು.”

5⃣ ಬ್ರಹ್ಮಚರ್ಯ ಪಾಲನೆ:
💠 ಓಜಸ್ತು ತೇಜೋ ಧಾತುನಾಂ, ಶುಕ್ರಾಂತಾನಾಂ ಪರಂ ಸ್ಮೃತಮ್….
🔅 ಶುಕ್ರ ಅಂದರೆ ಮೈಥುನಾ ನಂತರ ಸ್ರವಿಸುವ ಶಕ್ತಿಯುತ ಶ್ವೇತ ದ್ರವ್ಯ, ಇದು ಓಜಸ್ಸನ್ನು ಪ್ರಬಲ & ಪ್ರಧಾನವಾಗಿ ಹೆಚ್ಚಿಸುತ್ತದೆ. ಬೇರೆಲ್ಲಾ ಧಾತುಗಳಂತೆ ಶುಕ್ರಧಾತುವಿಗೆ ಮಲವೆಂಬುದು ಇಲ್ಲ ಅಥವಾ ಅತ್ಯಂತ ಕಡಿಮೆ ಇರುತ್ತದೆ. ಅದರಿಂದ ಪೋಷಣೆಯಾಗುವ ಓಜಸ್ಸಿಗೆ ಮಲವೇ ಇಲ್ಲ. ಅಂದರೆ ಓಜಸ್ಸು ಕೇವಲ ಶಕ್ತಿ ಇರುವ ತೇಜಸ್ಸು, ಇದು ವಿದ್ಯುತ್ತಿನಂತೆ. ಇದು ನಮ್ಮಲ್ಲಿ ಎಷ್ಟು ಹೆಚ್ಚೋ ಅಷ್ಟು ರೋಗನಿರೋಧಕ ಶಕ್ತಿ ಹೆಚ್ಚು.

6⃣ ಸಮಯೋಚಿತ ನಿದ್ರಾ:
🔅 ಜೀವಿಗೆ ನಿದ್ರೆಯಿಂದಲೇ, ಚಯಾಪಚಯಕ್ರಿಯೆ ಸಹಜವಾಗಿ ನಡೆಯುತ್ತದೆ. ತಡರಾತ್ರಿ ನಿದ್ದೆ, ತಡವಾಗಿ ಏಳುವುದರಿಂದ ಓಜಸ್ಸಿನ ಸೌಮ್ಯತ್ವ ನಾಶವಾಗಿ, ರೋಗನಿರೋಧಕ ಬಲ ಕುಗ್ಗಿಹೋಗುತ್ತದೆ. ಅತಿಯಾದ ನಿದ್ರೆ ಕೆಡುವುದು ಶೀಘ್ರ ಜರಾ ಮರಣಕ್ಕೆ ಕಾರಣ ಎಂದು ಆಚಾರ್ಯರು ತಿಳಿಸಿದ್ದಾರೆ.

🍀ಎಲ್ಲವೂ ಒಳ್ಳೆಯದಾಗುತ್ತದೆ ; ಎಲ್ಲರಿಗೂ ಒಳಿತಾಗುತ್ತದೆ🍀

ನಿಮ್ಮ ಸಂಪರ್ಕಕ್ಕೆ:
📞 8792290274
       9148702645

ವಿಶ್ವಹೃದಯಾಶೀರ್ವಾದವಂ ಬಯಸಿ

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

Admin

Leave a Reply

Your email address will not be published. Required fields are marked *

error: Content is protected !!