ಶಿವಮೊಗ್ಗ:15ಕೋಟಿ ರೂ. ವೆಚ್ಚದಲ್ಲಿ 86ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ : ಸಚಿವ ಕೆ.ಎಸ್.ಈಶ್ವರಪ್ಪ…!

ಶಿವಮೊಗ್ಗ:15ಕೋಟಿ ರೂ. ವೆಚ್ಚದಲ್ಲಿ 86ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ : ಸಚಿವ ಕೆ.ಎಸ್.ಈಶ್ವರಪ್ಪ…!

ಶಿವಮೊಗ್ಗ : ಶಿವಮೊಗ್ಗ ನಗರದ 86 ಸರ್ಕಾರಿ ಶಾಲೆಗಳಿಗೆ ಮೂಲಸೌಲಭ್ಯಗಳನ್ನು ಕಲ್ಪಿಸಲು 15ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಮಾಡಲಾಗಿದ್ದು, ಡಿಸೆಂಬರ್ ಅಂತ್ಯದ ಒಳಗಾಗಿ ಎಲ್ಲಾ ಕಾಮಗಾರಿಗಳು ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಶುಕ್ರವಾರ ನಗರದ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಇದೇ ಮೊದಲ ಬಾರಿಗೆ ಶಿವಮೊಗ್ಗ ನಗರ ಪ್ರದೇಶದ ಸರ್ಕಾರಿ ಶಾಲೆಗಳ ದುರಸ್ತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಇದರಲ್ಲಿ 10ಕೋಟಿ ರೂ. ಮತ್ತು ನೈಸರ್ಗಿಕ ವಿಕೋಪ ಪರಿಹಾರ ನಿಧಿಯಡಿ 4.5ಕೋಟಿ ರೂ. ಸೇರಿದೆ.

ಈ ಅನುದಾನದಲ್ಲಿ ಕೊಠಡಿಗಳ ದುರಸ್ತಿ, ಹೊಸ ಕೊಠಡಿ ಮತ್ತು ಶೌಚಾಲಯಗಳ ನಿರ್ಮಾಣ, ಕಂಪೌಂಡ್ ಗೋಡೆ ನಿರ್ಮಾಣ ಹಾಗೂ ಖಾಸಗಿ ಸಹಯೋಗದಲ್ಲಿ ಪೀಠೋಪಕರಣಗಳನ್ನು ಒದಗಿಸಲಾಗುತ್ತಿದೆ.

ಇದರಲ್ಲಿ 10ಪ್ರೌಢಶಾಲೆಗಳು ಮತ್ತು 76ಪ್ರಾಥಮಿಕ ಶಾಲೆಗಳು ಸೇರಿವೆ. 36ಕಾಮಗಾರಿಗಳು ಪೂರ್ಣಗೊಂಡಿದ್ದು, 30 ಶಾಲೆಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿವೆ. ಇನ್ನೂ 20ಶಾಲೆಗಳಲ್ಲಿ ಕಾಮಗಾರಿ ಆರಂಭಿಸಬೇಕಾಗಿದ್ದು, ತಕ್ಷಣ ಪ್ರಾರಂಭಿಸಲು ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ಸಚಿವರ ಎಚ್ಚರಿಕೆ:

ಇದಕ್ಕೂ ಮೊದಲು ಕಾಮಗಾರಿಗಳ ಪರಿಶೀಲನೆ ನಡೆಸಿದ ಸಚಿವರು ಎಲ್ಲಾ ಕಾಮಗಾರಿಗಳನ್ನು ಡಿಸೆಂಬರ್ ಅಂತ್ಯದ ಒಳಗಾಗಿ ಪೂರ್ಣಗೊಳಿಸಬೇಕು.

ಕಾಮಗಾರಿಗಳನ್ನು ಇನ್ನೂ ಆರಂಭಿಸದ ಗುತ್ತಿಗೆದಾರರ ಟೆಂಡರ್ ರದ್ದುಗೊಳಿಸಿ ಕಪ್ಪುಪಟ್ಟಿಗೆ ಸೇರಿಸಿ ಮೊಕದ್ದಮೆ ದಾಖಲಿಸಬೇಕು. ಕಾಮಗಾರಿ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡದೆ ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.

ಶಾಲೆಗಳ ಆರಂಭ:
ಪದವಿ ಕಾಲೇಜುಗಳನ್ನು ಜಿಲ್ಲೆಯಲ್ಲಿ ಈಗಾಗಲೇ ಆರಂಭಿಸಲಾಗಿದ್ದು, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಆರಂಭ ಕುರಿತು ಸರ್ಕಾರ ಸಧ್ಯದಲ್ಲಿಯೇ ತಿರ್ಮಾನ ಕೈಗೊಳ್ಳಲಿದೆ.

ಶಾಲೆ ಆರಂಭದ ಒಳಗಾಗಿ ನಗರ ಪ್ರದೇಶದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಎಂದು ಸಚಿವರು ತಿಳಿಸಿದರು.

ಪರಿಶೀಲನೆ:
ಸಚಿವರು ಕರ್ನಾಟಕ ಪಬ್ಲಿಕ್ ಶಾಲೆ, ಬಿ.ಬಿ.ರಸ್ತೆ ಶಾಲೆ, ದೊಡ್ಡಪೇಟೆ ಶಾಲೆ, ಭೂಪಾಳ ಶಾಲೆ, ಎಸ್.ಪಿ.ಎಂ ರಸ್ತೆಯಲ್ಲಿರುವ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಕಾಮಗಾರಿಗಳ ಪರಿಶೀಲನೆ ನಡೆಸಿ ಎಸ್‍ಡಿಎಂಸಿ ಸದಸ್ಯರೊಂದಿಗೆ ಹಾಗೂ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.

ಮೇಯರ್ ಸುವರ್ಣ ಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಮೇಶ್ ಇದ್ದರು.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!