ಶಿವಮೊಗ್ಗ :ವಾಹನ ನಿಲುಗಡೆ, ವೇಗಮಿತಿ, ಏಕಮುಖ ಸಂಚಾರಕ್ಕೆ ಹೊಸ ನಿಯಮ:- ಕೆ.ಬಿ.ಶಿವಕುಮಾರ್..!

ಶಿವಮೊಗ್ಗ :ವಾಹನ ನಿಲುಗಡೆ, ವೇಗಮಿತಿ, ಏಕಮುಖ ಸಂಚಾರಕ್ಕೆ ಹೊಸ ನಿಯಮ:- ಕೆ.ಬಿ.ಶಿವಕುಮಾರ್..!

ಶಿವಮೊಗ್ಗ: ನಗರದಲ್ಲಿ ಸುಗಮ ಸಂಚಾರ ಹಾಗೂ ಆಕಸ್ಮಿಕ ಅಫಘಾತಗಳನ್ನು ನಿಯಂತ್ರಿಸಲು ರಸ್ತೆ ಸುರಕ್ಷತಾ ಸಮಿತಿಯು ನಗರದ ವಿವಿಧ ರಸ್ತೆಗಳಲ್ಲಿ ವಾಹನ ನಿಲುಗಡೆ, ವೇಗಮಿತಿ ಮತ್ತು ಏಕಮುಖ ಸಂಚಾರ ವ್ಯವಸ್ಥೆ ಕಲ್ಪಿಸಿ ಹಾಗೂ ಮಹಾನಗರಪಾಲಿಕೆ ಆಯುಕ್ತರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಶಿಫಾರಸ್ಸಿನ ಮೇರೆಗೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಇಂದು ಆದೇಶ ಹೊರಡಿಸಿದ್ದು, ಸಾರ್ವಜನಿಕರು ಸಹಕರಿಸುವಂತೆ ಅವರ ಮನವಿ ಮಾಡಿದ್ದಾರೆ.

ಶಿವಮೊಗ್ಗ ನಗರದ ಅಶೋಕ ಸರ್ಕಲ್, ಅಮೀರ್ ಅಹ್ಮದ್ ಸರ್ಕಲ್, ಗೋಪಿ ಸರ್ಕಲ್, ಜೈಲ್ ಸರ್ಕಲ್, ವಿನೋಬ ನಗರ ಪೊಲೀಸ್ ಚೌಕಿ ಸರ್ಕಲ್ ಮತ್ತು ಹೆಲಿಪ್ಯಾಡ್ ಸರ್ಕಲ್ ಸೇರಿದಂತೆ ಒಟ್ಟು ಪ್ರಮುಖ 6ವರ್ತುಗಳಿಂದ 100ಮೀ. ಅಂತರದವರೆಗೆ ಎಲ್ಲಾ ರೀತಿಯ ವಾಹನಗಳ ನಿಲುಗಡೆ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

ಶಿವಮೊಗ್ಗ ನಗರದ ಜೈಲ್ ರಸ್ತೆಯಲ್ಲಿ ಹಗಲು ಸಮಯದಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧ ಮತ್ತು ರಸ್ತೆಯ ಎರಡೂ ಬದಿಯಲ್ಲಿಲ ದಿನಬಿಟ್ಟು ದಿನ ವಾಹನಗಳ ನಿಲುಗಡೆಗೆ ಸೂಚಿಸಲಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲಿನ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‍ನಿಲ್ದಾಣಗಳ ಸುತ್ತಮುತ್ತ ಖಾಸಗಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ. ಶಿವಮೊಗ್ಗ, ಭದ್ರಾವತಿ, ಸಾಗರ, ಸೊರಬ, ಹೊಳಲೂರು ಬಸ್‍ನಿಲ್ದಾಣಗಳ ಸುತ್ತಮುತ್ತ 500ಮೀ. ವ್ಯಾಪ್ತಿಯಲ್ಲಿ ಖಾಸಗಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ.

ವಿನೋಬನಗರದ ಪೊಲೀಸ್ ಚೌಕಿಯಿಂದ ರೈಲ್ವೇ ಟ್ರ್ಯಾಕ್ ಕಡೆಗೆ ಹೋಗುವ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿಷೇದಿಸಿದೆ. ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿರುವ ಪಾರ್ಕಿಂಗ್ ಸ್ಥಳವನ್ನು ವಾಣಿಜ್ಯ ಸಂಕೀರ್ಣಗಳಿಗೆ ಬರುವ ಗ್ರಾಹಕರಿಗೆ ನೀಡಬೇಕು. ಬಿ.ಹೆಚ್.ಮುಖ್ಯರಸ್ತೆಯ ಲಕ್ಷ್ಮೀ ಮೆಡಿಕಲ್ಸ್‍ನಿಂದ ಎನ್.ಟಿ.ಮುಖ್ಯರಸ್ತೆರ ಉರ್ದು ಸ್ಕೂಲ್‍ವರೆಗಿನ ಎರಡೂ ಬದಿಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಎನ್.ಟಿ.ರಸ್ತೆಯ ಒಂದನೇ ತಿರುವಿನಲ್ಲಿ ಅಶೋಕ ಹೋಟೆಲ್‍ನಿಂದ ಬಲಿಜ ಸೊಸೈಟಿಯವರೆಗೆ ರಸ್ತೆಯ 2ಬದಿಯಲ್ಲಿ ವಾಹನ ನಿಲುಗಡೆ ನಿಷೇಧಿಸಿದೆ. ದುರ್ಗಿಗುಡಿ ಮುಖ್ಯರಸ್ತೆಯಲ್ಲಿ ಎಲ್.ಟಿ.ಕಾಂಪ್ಲೆಕ್ಸ್‍ನಿಂದ ಪ್ರತಾಪ್ ಆರ್ಕೇಡ್‍ವರೆಗಿನ ರಸ್ತೆಯ 2ಬದಿಯಲ್ಲಿ ವಾಹನ ನಿಲುಗಡೆಗೆ ನಿಷೇಧಿಸಲಾಗಿದೆ.

ನಗರದ ಬಿ.ಹೆಚ್.ರಸ್ತೆಯ ಸಂದೇಶ ಮೋಟಾರ್ಸ್‍ನಿಂದ ಆಟೋ ಕಾಂಪ್ಲೆಕ್ಸ್‍ಗೆ ಹೋಗುವ ರಸ್ತೆಯವರೆಗಿನ ಮತ್ತು ಆಯನೂರು ಗೇಟಿನಿಂದ ಗೋಪಾಳ 10ಅಡಿ ರಸ್ತೆಗೆ ಸೇರುವ ರಸ್ತೆಯಲ್ಲಿ ಎಸ್.ಬಿ.ಎಂ.ಕ್ರಾಸ್‍ವರೆಗೆ ಭಾರೀ ವಾಹನಗಳ ಸಂಚಾರವನ್ನು ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ನಿಷೇಧಿಸಲಾಗಿದೆ. ಸಾಗರ ರಸ್ತೆಯ ಇಕ್ಕೆಲಗಳಲ್ಲಿ ಫುಟ್‍ಪಾತ್ ಮೇಲೆ ವಾಹನ ನಿಲುಗಡೆ ನಿಷೇಧಿಸಿದೆ ಹಾಗೂ ಹಾಲ್ಕೊಳ ಸರ್ಕಲ್‍ನ ಸುತ್ತಮುತ್ತ 100ಮೀ. ಅಂತರದವರೆಗೆ ವಾಹನ ನಿಲುಗಡೆ ನಿಷೇಧಿಸಿದೆ. ನಗರದ ಅಶೋಕ ಹೋಟೆಲ್‍ನಿಂದ ಲೋಕೋಪಯೋಗಿ ಇಲಾಖೆ ಕಚೇರಿಯವರೆಗೆ ಮತ್ತು ಲೋಕೋಪಯೋಗಿ ಕಚೇರಿಯಿಂದ ಬಿ.ಹೆಚ್.ರಸ್ತೆಯವರೆಗೆ ಏಕಮುಖ ಸಂಚಾರ ಮತ್ತು ಸದರಿ ರಸ್ತೆಯಲ್ಲಿ ಒಂದು ಬದಿ ವಾಹನಗಳ ನಿಲುಗಡೆಗೊಳಿಸಬಹುದಾಗಿದೆ.

ಮಹಾನಗರಪಾಲಿಕೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ಮತ್ತು ಮುಖ್ಯರಸ್ತೆ ಹಾಗೂ ಕಾರ್ಪೋರೇಶನ್ ರಸ್ತೆಗಳಲ್ಲಿ ವೇಗಮಿತಿ ನಿಗಧಿಪಡಿಸಿ ಅಧಿಸೂಚನೆ ಹೊರಡಿಸಿರುವ ಜಿಲ್ಲಾಧಿಕಾರಿಗಳು ನಗರದ ಶಂಕರಮಠ ಸರ್ಕಲ್‍ನಿಂದ ಸಂಗೊಳ್ಳಿ ರಾಯಣ್ಣ ಸರ್ಕಲ್‍ವರೆಗೆ ಹೊನ್ನಾಳಿ ಕಡೆಗೆ ಹೋಗುವ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ದಿನಬಿಟ್ಟು ದಿನ ಪಾರ್ಕಿಂಗ್ ಮತ್ತು ನೋಪಾರ್ಕಿಂಗ್‍ಗೆ ಅವಕಾಶ ಕಲ್ಪಿಸಲಾಗಿದೆ.

ಜಿಲ್ಲೆಯಲ್ಲಿ ರಸ್ತೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ನೋಟೀಸ್ ಜಾರಿ ಮಾಡುವ ಸಂಬಂಧ ಅಳವಡಿಸಲಾಗಿರುವ ಆಟೋಮೇಶನ್ ತಂತ್ರಾಂಶದ ನವೀಕರಣ ಮತ್ತು ವಾರ್ಷಿಕ ನಿರ್ವಹಣೆಗಾಗಿ ರೂ. 4.50ಲಕ್ಷ ಗಳನ್ನು ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು ಹಾಗೂ ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಅಪಘಾತಗಳು ಸಂಭವಿಸಿದಾಗ ಸಾರ್ವಜನಿಕರಿಗೆ ಮಾಹಿತಿಗಾಗಿ ಹತ್ತಿರದ ಆಸ್ಪತ್ರೆ, ಪೊಲೀಸ್ ಸ್ಟೇಷನ್ ಅಥವಾ ಜಿಲ್ಲಾ ಕಂಟ್ರೋಲ್ ರೂಂನ ದೂರವಾಣಿ, ಮೊಬೈಲ್ ನಂಬರನ್ನೊಳಗೊಂಡ ಮಾಹಿತಿ ಫಲಕಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ ಎಂದವರು ತಿಳಿಸಿದ್ದಾರೆ.

Admin

Leave a Reply

Your email address will not be published. Required fields are marked *

error: Content is protected !!