ಗೀತಾ ಬಗ್ಗೆ ಮಾತಾಡಿದರೆ ಹುಷಾರ್: ಈಶ್ವರಪ್ಪಗೆ ಮಧುಬಂಗಾರಪ್ಪ ಎಚ್ಚರಿಕೆ
ಶಿವಮೊಗ್ಗ ಲೋಕ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಬಗ್ಗೆ ಮಾಜಿ ಸಚಿವ, ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಈಶ್ವರಪ್ಪ ಹಗುರವಾಗಿ ಮಾತನಾಡುವ ಬಗ್ಗೆ ಸಚಿವ ಮಧು ಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮಧು ಬಂಗಾರಪ್ಪ, ಗೀತಾ ಶಿವರಾಜ್ ಕುಮಾರ್ ಸಾಮಾನ್ಯರಲ್ಲ.ಗೀತಾ ಬಂಗಾರಪ್ಪರ ಪುತ್ರಿಯಾಗಿದ್ದಾರೆ. ಅವರ ಬಗ್ಗೆ ಮಾತಾಡುವುದು ಈಶ್ವರಪ್ಪ ಕಡಿಮೆ ಮಾಡಬೇಕು. ಇಲ್ಲವಾದಲ್ಲಿ ಬೇರೆಯದೆ ರೀತಿಯಲ್ಲಿ ಪ್ರತಿಕ್ರಿಯೆ ನೀಡಬೇಕಾಗುತ್ತದೆ ಎಂದು ಗುಡುಗಿದ್ದಾರೆ.
ಪದೇ ಪದೇ ಕಾಂಗ್ರೆಸ್‌ನವರು ನಮ್ಮ ಜೊತೆಯಲ್ಲಿ ಇದ್ದಾರೆ ಎಂದು ಈಶ್ವರಪ್ಪ ಅವರು ಹೇಳುತ್ತಿದ್ದಾರೆ. ಈಶ್ವರಪ್ಪ ಕೀಳು ಮಟ್ಟದ ರಾಜಕಾರಣಿಯಾಗಿದ್ದಾರೆ. ನೀವು ನಿಜವಾದ ಗಂಡಸೇ ಆಗಿದ್ದರೆ, ನಿಮ್ಮ ಮಗನಿಗೆ ಟಿಕೆಟ್ ಕೊಡಿಸಬೇಕಿತ್ತು. ಅದಾಗದ ನೀವು ನಿಮ್ಮ ಮಗನಿಗೆ ಫೀಡಿಂಗ್ ಬಾಟಲ್ ನೀಡಿ ಕೂರಿಸಿ ಎಂದು ಮಧು ಬಂಗಾರಪ್ಪ ಕಿಡಿಗಾರಿದ್ದಾರೆ.
ನಿಮ್ಮ ಸ್ವಾರ್ಥಕ್ಕಾಗಿ ಹೀಗೆಲ್ಲಾ ಮಾತನಾಡುತ್ತಿದ್ದಿರಾ? ನಿಮಗೆ ಟಿಕೆಟ್ ತೆಗೆದುಕೊಳ್ಳುವ ಯೋಗ್ಯತೆ ಇಲ್ಲ. ನಿಮ್ಮ ಮಗನಿಗೂ ಟಿಕೆಟ್ ಕೊಡಿಸಲು ಆಗಲ್ಲ. ಪ್ರೆಸ್ ಮೀಟ್ ಬಿಟ್ಟರೆ ನೀವು ಒಂದೇ ಒಂದು ದೊಡ್ಡ ಕಾರ್ಯಕ್ರಮ ಮಾಡಿದ್ದೀರಾ?. ಅನಿವಾರ್ಯವಾಗಿ ನಿಮಗೆ ಏನು ಮಾಡಬೇಕೋ ಅದನ್ನೇ ನಾವು ಮಾಡುತ್ತೇವೆ. ನೀವು ಹಿರಿಯರಿದ್ದಿರೆಂದು ಬೆಲೆ ನೀಡುತ್ತೇವೆ. ಆದರೆ ನಿಮ್ಮ ನಡವಳಿಕೆಗೆ ನಮ್ಮ ವಿರೋಧವಿದೆ ಎಂದು ಗೀತಾ ಶಿವರಾಜ್ ಕುಮಾರ್ ಸಹೋದರರೂ ಆದ ಮಧು ಬಂಗಾರಪ್ಪ ಹೇಳಿದ್ದಾರೆ.