ಧಾರವಾಡ: ಪಕ್ಷೇತರ ಅಭ್ಯರ್ಥಿ ದಿಂಗಾಲೇಶ್ವರ ಸಾಮೀಜಿ ಘೋಷಿಸಿದ ಆಸ್ತಿ ಎಷ್ಟು? ಇಲ್ಲಿದೆ ಮಾಹಿತಿ…
ಧಾರವಾಢ: ಸಂಸದ ಪ್ರಹ್ಲಾದ್ ಜೋಷಿ ವಿರುದ್ಧ ಸಮರ ಸಾರಿ ಪಕ್ಷೇತರ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಗದಗ ಜಿಲ್ಲೆಯ ಬಾಳೆಹೊಸೂರ-ಶಿರಹಟ್ಟಿಯ ದಿಂಗಾಲೇಶ್ವರ ಮಠದ ದಿಂಗಾಲೇಶ್ವರ ಸಾಮೀಜಿ ನಾಮಪತ್ರ ಸಲ್ಲಿಸಿದ್ದು, ₹ 9.75 ಕೋಟಿ ಆಸ್ತಿ ಘೋಷಿಸಿದ್ದಾರೆ.
ಧಾರವಾಡ ಕ್ಷೇತ್ರದ ಲೋಕಸಭೆ ಚುನಾವಣೆಗೆ ಶುಕ್ರವಾರ ಐದು ಜನ ಆರು ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷೇತರವಾಗಿ ಸ್ಪರ್ಧಿಸುತ್ತಿರುವ ಶಿರಹಟ್ಟಿಯ ದಿಂಗಾಲೇಶ್ವರ ಸ್ವಾಮೀಜಿ ಎರಡು ಪ್ರತಿ ನಾಮಪತ್ರ ಸಲ್ಲಿಸಿದ್ದಾರೆ.
ದಿಂಗಾಲೇಶ್ವರ ಸ್ವಾಮೀಜಿ ಘೋಷಿಸಿದ ₹ 9.75 ಕೋಟಿ ಆಸ್ತಿ ಪೈಕಿ ಚರಾಸ್ತಿ ಮೌಲ್ಯ ₹1.22 ಕೋಟಿ ಹಾಗೂ ಸ್ಥಿರಾಸ್ತಿ ಮೌಲ್ಯ ₹ 8.52 ಕೋಟಿ. ಒಂದು ಕಾರು, ಒಂದು ಶಾಲಾ ವಾಹನ ಹಾಗೂ ಒಂದು ಟ್ರಾಕ್ಟರ್ ಹೊಂದಿದ್ದಾರೆ. 7.8 ಕೆ.ಜಿ ಬೆಳ್ಳಿ, 19 ಗ್ರಾಂ ಚಿನ್ನ ಅವರ ಬಳಿ ಇದೆ. ₹ 39.68 ಲಕ್ಷ ಸಾಲ ಇದೆ ಎಂದು ನಾಮಪತ್ರದ ಜೊತೆಗೆ ನೀಡಿದ ಪ್ರಮಾಣಪತ್ರದಲ್ಲಿ ಅವರು ವಿವರ ಸಲ್ಲಿಸಿದ್ದಾರೆ.
ಸ್ವಾಮೀಜಿ ವಿರುದ್ಧ ಮೂರು ಅಪರಾಧ ಪ್ರಕರಣಗಳು ಇವೆ. ಇವುಗಳಲ್ಲಿ ಕೊಲೆ ಯತ್ನ, ಜೀವ ಬೆದರಿಕೆ, ಜಾತಿನಿಂದನೆ, ಹಲ್ಲೆ, ಹೆಣ್ಣುಮಕ್ಕಳಿಗೆ ಕೈಯಿಂದ ಹೊಡೆದು, ದೂಡಿದ ಪ್ರಕರಣಗಳು ಸೇರಿವೆ.